ಟೀಮ್​ ಇಂಡಿಯಾ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಮುರಿದ ಆಸ್ಟ್ರೇಲಿಯಾ

India Australia
Published on

ಅಂಟಿಗುವಾ: ಇಲ್ಲಿನ ಸರ್​ ವಿವಿಯನ್​ ರಿಚರ್ಡ್ಸ್​ ಕ್ರೀಡಾಂಗಣದಲ್ಲಿ ನಡೆದ ಟಿ-20 ವಿಶ್ವಕಪ್​ನ ಸೂಪರ್​ 08 ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಬಾಂಗ್ಲಾದೇಶ ವಿರುದ್ಧ ಗೆದ್ದು ಬೀಗಿದ್ದು, ಟಿ-20 ವಿಶ್ವಕಪ್​ನಲ್ಲಿ ಹೊಸ ದಾಖಲೆ ಒಂದನ್ನು ಬರೆದಿದೆ. ಅದು ಕೂಡ ಟೀಮ್​ ಇಂಡಿಯಾ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ತನ್ನದಾಗಿಸಿಕೊಂಡಿರುವುದು ಮತ್ತಷ್ಟು ವಿಶೇಷವಾಗಿದೆ.

ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಬಾಂಗ್ಲಾದೇಶ ತಂಡವು ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 140 ರನ್​ ಗಳಿಸಿತ್ತು. ಸುಲಭ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡವು 11.2 ಓವರ್​ಗಳಲ್ಲಿ 2 ವಿಕೆಟ್ ಕಳೆದುಕೊಂಡು 100 ರನ್ ಕಲೆಹಾಕಿತ್ತು. ಈ ವೇಳೆ ಮಳೆ ಸುರಿದ ಪರಿಣಾಮ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ ಆಸ್ಟ್ರೇಲಿಯಾ ತಂಡವನ್ನು ವಿನ್ನರ್ಸ್ ಅಂಪೈರ್​ಗಳು​​ ಎಂದು ಘೋಷಿಸಲಾಯಿತು. ಈ ಗೆಲುವಿನೊಂದಿಗೆ ಆಸೀಸ್ ಪಡೆ ಟಿ20 ವಿಶ್ವಕಪ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಅದು ಸಹ ಟೀಮ್ ಇಂಡಿಯಾದ ವಿಶ್ವ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

Australia

ಟಿ20 ವಿಶ್ವಕಪ್​ ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ ಸತತ ಗೆಲುವು ದಾಖಲಿಸಿದ ದಾಖಲೆಯನ್ನು ಆಸ್ಟ್ರೇಲಿಯಾ ತಂಡ ತನ್ನದಾಗಿಸಿಕೊಂಡಿದೆ. 2022ರ ಟಿ20 ವಿಶ್ವಕಪ್​ನಲ್ಲಿ ಶುರುವಾದ ಆಸೀಸ್ ಪಡೆಯ ಗೆಲುವಿನ ನಾಗಾಲೋಟ ಈ ಬಾರಿ ಕೂಡ ಮುಂದುವರೆದಿದೆ. ಈ ಮೂಲಕ ಭಾರತ ತಂಡದ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದಿದೆ. ಭಾರತ ತಂಡವು 2012-2014 ರ ಟಿ20 ವಿಶ್ವಕಪ್​ನಲ್ಲಿ ಸತತ 7 ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ಈ ಮೂಲಕ ಎರಡು ವಿಶ್ವಕಪ್​ನಲ್ಲಿ ಸತತ ಏಳು ಗೆಲುವು ದಾಖಲಿಸಿ ಟೀಮ್ ಇಂಡಿಯಾ ವಿಶ್ವ ದಾಖಲೆ ನಿರ್ಮಿಸಿತ್ತು. ಇದೀಗ 8 ಪಂದ್ಯಗಳಲ್ಲಿ ಜಯ ಗಳಿಸುವ ಮೂಲಕ ಆಸ್ಟ್ರೇಲಿಯಾ ತಂಡವು ಟೀಮ್​ ಇಂಡಿಯಾ ಹೆಸರಿನಲ್ಲಿದ್ದ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ಜೂನ್ 24 ರಂದು ನಡೆಯಲಿರುವ ಸೂಪರ್-8 ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಆಸೀಸ್ ಪಡೆಯ ಸತತ ಗೆಲುವಿನ ಓಟಕ್ಕೆ ಬ್ರೇಕ್ ಬೀಳಲಿದೆ. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಮ್​ ಇಂಡಿಯಾ ತನ್ನ ಬಳಿ ಇರುವ ಅವಕಾಶವನ್ನು ಹೇಗೆ ಬಳಸಿಕೊಳ್ಳಲಿದೆ ಎಂದು ಕಾದು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net