

ಬ್ರಿಸ್ಬೇನ್: ಸ್ಪಿನ್ನರ್ ನಾಥನ್ ಲ್ಯಾನ್ (91ಕ್ಕೆ 4) ದಾಳಿಗೆ ಪ್ರವಾಸಿ ಇಂಗ್ಲೆಂಡ್ ತಂಡ 4ನೇ ದಿನದಾಟದಲ್ಲಿ ದಿಢೀರ್ ಕುಸಿತ ಕಾಣುವುದರೊಂದಿಗೆ ಆಸ್ಟ್ರೇಲಿಯಾ ತಂಡ ಆಶಸ್ ಸರಣಿಯ ಮೊದಲ ಟೆಸ್ಟ್‌ನಲ್ಲಿ 9 ವಿಕೆಟ್‌ಗಳಿಂದ ಗೆದ್ದು ಶುಭಾರಂಭ ಕಂಡಿದೆ. 5 ಪಂದ್ಯಗಳ ಸರಣಿಯಲ್ಲಿ ಪ್ಯಾಟ್ ಕಮ್ಮಿನ್ಸ್ ಪಡೆ ಈಗ 1-0 ಮುನ್ನಡೆ ಸಾಧಿಸಿದ್ದು, 2ನೇ ಟೆಸ್ಟ್ ಡಿ.16ರಿಂದ ಅಡಿಲೇಡ್‌ನಲ್ಲಿ ಅಹರ್ನಿಶಿಯಾಗಿ ನಡೆಯಲಿದೆ.
3ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 220 ರನ್ ಪೇರಿಸಿ ದಿಟ್ಟ ಪ್ರತಿಹೋರಾಟ ಸಂಘಟಿಸಿದ್ದ ಇಂಗ್ಲೆಂಡ್, ಶನಿವಾರ ಬೆಳಗ್ಗೆ ದಿಢೀರ್ ಕುಸಿದು 74 ರನ್‌ಗೆ ಕೊನೇ 8 ವಿಕೆಟ್ ಕಳೆದುಕೊಂಡಿತು. ಇದರಿಂದ 297 ರನ್‌ಗೆ ಇಂಗ್ಲೆಂಡ್ 2ನೇ ಇನಿಂಗ್ಸ್ ಮುಗಿಸಿದರೆ, ಕೇವಲ 20 ರನ್ ಸವಾಲು ಪಡೆದ ಆಸೀಸ್ 1 ವಿಕೆಟ್ ನಷ್ಟದಲ್ಲಿ ಗುರಿ ತಲುಪಿತು.
ಕ್ರಮವಾಗಿ 80 ಮತ್ತು 86 ರನ್‌ನಿಂದ ದಿನದಾಟ ಆರಂಭಿಸಿದ ಡೇವಿಡ್ ಮಲಾನ್ (82) ಮತ್ತು ನಾಯಕ ಜೋ ರೂಟ್ (89) ಹಿಂದಿನ ದಿನದ ಗಳಿಕೆಗೆ ಕ್ರಮವಾಗಿ 2 ಮತ್ತು 3 ರನ್ ಸೇರಿಸಿ ಔಟಾದರು. ಬಳಿಕ ಆಸೀಸ್‌ಗೆ ಆಂಗ್ಲರಿಂದ ಯಾವುದೇ ಪ್ರತಿರೋಧ ಎದುರಾಗಲಿಲ್ಲ. ಈ ಸೋಲಿನಿಂದ ಇಂಗ್ಲೆಂಡ್ ಕಳೆದೊಂದು ದಶಕದಿಂದ ಆಸೀಸ್‌ನಲ್ಲಿ ಟೆಸ್ಟ್ ಗೆಲ್ಲದ ಬರ ಮುಂದುವರಿಯಿತು. 2010-11ರ ಸರಣಿಯಲ್ಲಿ ಕೊನೆಯದಾಗಿ ಇಂಗ್ಲೆಂಡ್ ಟೆಸ್ಟ್ ಗೆದ್ದಿತ್ತು.
1986ರ ಬಳಿಕ ಗಾಬಾದಲ್ಲಿ ಟೆಸ್ಟ್ ಗೆಲ್ಲದ ಬರವೂ ಮುಂದುವರಿಯಿತು.
ನಾಥನ್ ಲ್ಯಾನ್ 400
ಅನುಭವಿ ಸ್ಪಿನ್ನರ್ ನಾಥನ್ ಲ್ಯಾನ್ (403) ಟೆಸ್ಟ್ ಕ್ರಿಕೆಟ್‌ನಲ್ಲಿ 400 ರನ್ ಪೂರೈಸಿದ ಆಸ್ಟ್ರೇಲಿಯಾದ 3ನೇ ಬೌಲರ್ ಎನಿಸಿದರು. ಶೇನ್ ವಾರ್ನ್ (708) ಮತ್ತು ಗ್ಲೆನ್ ಮೆಕ್‌ಗ್ರಾಥ್ (563) ಮೊದಲಿಬ್ಬರು ಸಾಧಕರು. 34 ವರ್ಷದ ಲ್ಯಾನ್ ಈ ಸಾಧನೆ ಮಾಡಿದ ವಿಶ್ವದ 17ನೇ ಬೌಲರ್ ಎನಿಸಿದರು. ಕಳೆದ ಜನವರಿಯಲ್ಲಿ ಭಾರತ ವಿರುದ್ಧ 399ನೇ ವಿಕೆಟ್ ಪಡೆದಿದ್ದ ಲ್ಯಾನ್, 400ನೇ ವಿಕೆಟ್‌ಗಾಗಿ 11 ತಿಂಗಳ ಕಾಲ ಕಾದಿದ್ದರು. ಲ್ಯಾನ್ ಏಷ್ಯಾದ ಹೊರಗಿನ ಸ್ಪಿನ್ನರ್‌ಗಳ ಪೈಕಿ 400 ವಿಕೆಟ್ ಪಡೆದ 2ನೆಯವರೆನಿಸಿದರು. 101ನೇ ಟೆಸ್ಟ್‌ನಲ್ಲಿ ಅವರು ಈ ಸಾಧನೆ ಮಾಡಿದರು.
ಇಂಗ್ಲೆಂಡ್: 147 ಮತ್ತು 297 (ಮಲಾನ್ 82, ರೂಟ್ 89, ಸ್ಟೋಕ್ಸ್ 14, ಪೋಪ್ 4, ಬಟ್ಲರ್ 23, ವೋಕ್ಸ್ 16, ಲ್ಯಾನ್ 91ಕ್ಕೆ 4, ಕಮ್ಮಿನ್ಸ್ 51ಕ್ಕೆ 2, ಗ್ರೀನ್ 23ಕ್ಕೆ 2, ಸ್ಟಾರ್ಕ್ 77ಕ್ಕೆ 1), ಆಸ್ಟ್ರೇಲಿಯಾ: 425 ಮತ್ತು (ಗುರಿ: 20 ರನ್) 1 ವಿಕೆಟ್‌ಗೆ 20 (ಕ್ಯಾರಿ 9, ಹ್ಯಾರಿಸ್ 9*, ರಾಬಿನ್‌ಸನ್ 13ಕ್ಕೆ 1). ಪಂದ್ಯಶ್ರೇಷ್ಠ: ಟ್ರಾವಿಡ್ ಹೆಡ್.
ಇಂಗ್ಲೆಂಡ್‌ಗೆ ದಂಡ, ಅಂಕ ಕಡಿತ
ಬ್ರಿಸ್ಬೇನ್ ಟೆಸ್ಟ್ ಪಂದ್ಯದ ನಿಧಾನಗತಿ ಓವರ್‌ಗಾಗಿ ಇಂಗ್ಲೆಂಡ್ ತಂಡದ ಆಟಗಾರರಿಗೆ ಪಂದ್ಯ ಸಂಭಾವನೆಯ ಶೇ. 100 ದಂಡ ವಿಧಿಸಲಾಗಿದೆ. ಜತೆಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ (ಡಬ್ಲ್ಯುಟಿಸಿ) 5 ಅಂಕ ಕಡಿತಗೊಳಿಸಲಾಗಿದೆ. ಜೋ ರೂಟ್ ಪಡೆ ನಿಗದಿತ ಸಮಯದಲ್ಲಿ 5 ಓವರ್‌ನಷ್ಟು ಹಿಂದಿದ್ದ ಕಾರಣಕ್ಕೆ ಮ್ಯಾಚ್ ರೆಫ್ರಿ ಡೇವಿಡ್ ಬೂನ್ ಈ ಶಿಕ್ಷೆ ವಿಧಿಸಿದ್ದಾರೆ. ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಈಗ ಆಸೀಸ್, ಲಂಕಾ ಜತೆ ಜಂಟಿ ಅಗ್ರಸ್ಥಾನದಲ್ಲಿದ್ದರೆ, ಇಂಗ್ಲೆಂಡ್ 6ನೇ ಸ್ಥಾನಕ್ಕೆ ಕುಸಿದಿದೆ.