ಕಾಂಗರೂಗಳ ದಾಳಿಗೆ ನಲುಗಿದ Team India; ಬಾಕ್ಸಿಂಗ್​ ಡೇ ಟೆಸ್ಟ್​ನಲ್ಲಿ 184 ರನ್​ಗಳ ಹೀನಾಯ ಸೋಲು, WTC ಫೈನಲ್​ ಹಾದಿ ಮತ್ತಷ್ಟು ಕಠಿಣ

Australia
Published on

ಮೆಲ್ಬೋರ್ನ್​​: ಇಲ್ಲಿನ ಮೆಲ್ಬೋರ್ನ್​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವಿನ ಬಾರ್ಡರ್​-ಗವಾಸ್ಕರ್ ಟ್ರೋಫಿ ಟೆಸ್ಟ್​ ಸರಣಿಯ ನಾಲ್ಕನೇ ಪಂದ್ಯದಲ್ಲಿ ಟೀಮ್​ ಇಂಡಿಯಾ 184 ರನ್​ಗಳ ಸೋಲುಂಡಿದ್ದು, ಸರಣಿಯಲ್ಲಿ ಆತಿಥೇಯರು 2-1 ಮುನ್ನಡೆಯನ್ನು ಸಾಧಿಸಿದ್ದಾರೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾವು ಮೊದಲ ದಿನದಿಂದಲೂ ಸಂಪೂರ್ಣ ಹಿಡಿತವನ್ನು ಸಾಧಿಸಿದ್ದು, ಮೊದಲ ಇನ್ನಿಂಗ್ಸ್​ನಲ್ಲಿ ಸ್ಟೀವ್ ಸ್ಮಿತ್​ (140 ರನ್, 197 ಎಸೆತ, 13 ಬೌಂಡರಿ, 3 ಸಿಕ್ಸರ್​), ಮಾರ್ನಸ್​ ಲಬುಶೇನ್​ (72 ರನ್, 145 ಎಸೆತ, 7 ಬೌಂಡರಿ), ಸ್ಯಾಮ್​ ಕೊನ್​ಸ್ಟಾಸ್​ (60 ರನ್, 65 ಎಸೆತ, 6 ಬೌಂಡರಿ, 2 ಸಿಕ್ಸರ್​), ಉಸ್ಮಾನ್​ ಖವಾಜಾ (57 ರನ್​, 121 ಎಸೆತ, 6 ಬೌಂಡರಿ) ಭರ್ಜರಿ ಬ್ಯಾಟಿಂಗ್​ ಫಲವಾಗಿ ಮೊದಲ ಇನ್ನಿಂಗ್ಸ್​ನಲ್ಲಿ 474 ರನ್​ ಕಲೆ ಹಾಕಿತ್ತು. ಟೀಮ್​ ಇಂಡಿಯಾ ಪರ ಜಸ್ಪ್ರೀತ್​ ಬುಮ್ರಾ (28.4-9-99-4), ರವೀಂದ್ರ ಜಡೇಜಾ (23-4-78-3), ಆಕಾಶ್​ದೀಪ್​ (26-8-94-2), ವಾಷಿಂಗ್ಟನ್​ ಸುಂದರ್ (15-2-49-1) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

ಮೊದಲ ಇನ್ನಿಂಗ್ಸ್ ಆಡಿದ ಟೀಮ್​ ಇಂಡಿಯಾ ನಿತೀಶ್​ ರೆಡ್ಡಿ (114 ರನ್, 189 ಎಸೆತ, 11 ಬೌಂಡರಿ, 1 ಸಿಕ್ಸರ್​), ಯಶಸ್ವಿ ಜೈಸ್ವಾಲ್​ (82 ರನ್, 118 ಎಸೆತ, 11 ಬೌಂಡರಿ, 1 ಸಿಕ್ಸರ್), ವಾಷಿಂಗ್ಟನ್​ ಸುಂದರ್ (50 ರನ್​, 162 ಎಸೆತ, 1 ಬೌಂಡರಿ) ದಿಟ್ಟ ಆಟದ ಫಲವಾಗಿ 369 ರನ್​ಗಳಿಗೆ ಆಲೌಟ್​ ಆಗಿತ್ತು. ಆಸ್ಟ್ರೇಲಿಯಾ ಪರ ಪ್ಯಾಟ್​ ಕಮಿನ್ಸ್, ಬೋಲ್ಯಾಂಡ್ ಹಾಗೂ ನಾಥನ್ ಲಿಯಾನ್ ತಲಾ 3 ವಿಕೆಟ್ ಪಡೆದಿದ್ದರು.

105 ರನ್​​ಗಳ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡದ ಪರ ಮಾರ್ನಸ್ ಲಾಬುಶೇನ್ (70 ರನ್, 139 ಎಸೆತ, 3 ಬೌಂಡರಿ) ಜಸ್ಪ್ರೀತ್​ ಬುಮ್ರಾ ಅವರ ಮಾರಕ ದಾಳಿಗೆ ನಲುಗಿ 234 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಭಾರತಕ್ಕೆ 340 ರನ್​ಗಳ ಗುರಿಯನ್ನು ನೀಡಿತ್ತು. ಗುರಿ ಬೆನ್ನತ್ತಿದ್ದ ಭಾರತ ತಂಡದ ಪರ ಯಶಸ್ವಿ ಜೈಸ್ವಾಲ್​ (84 ರನ್, 208 ಎಸೆತ, 8 ಬೌಂಡರಿ) ಅರ್ಧಶತಕದ ನೆರವಿನಿಂದ 155 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಸೋಲೊಪ್ಪಿಕೊಂಡಿತ್ತು. ಈ ಮೂಲಕ ಆಸ್ಟ್ರೇಲಿಯಾ ತಂಡವು ಬಾರ್ಡರ್​-ಗವಾಸ್ಕರ್ ಟೆಸ್ಟ್​ ಸರಣಿಯಲ್ಲಿ 2-1 ಮುನ್ನಡೆಯನ್ನು ಸಾಧಿಸಿದೆ.

ಮುಂಬರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ದೃಷ್ಠಿಯಿಂದ ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದಾಗಿತ್ತು. ಇದೀಗ ಭಾರತ ಸೋಲುವ ಮೂಲಕ ಇದ್ದ ಅವಕಾಶವನ್ನು ಬಹುತೇಕ ಕಳೆದುಕೊಂಡಿದ್ದು, ಆಸ್ಟ್ರೇಲಿಯಾ ಪಾಲಿನ ಹಾದಿ ಸುಗಮವಾಗಿದೆ. ಡಿಸೆಂಬರ್​ 06ರಂದು ಸಿಡ್ನಿಯಲ್ಲಿ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಹೊಸ ವರ್ಷವನ್ನು ಗೆಲುವಿನ ಮೂಲಕ ಶುಭಾರಂಭ ಕಾಣಲಿದೆಯಾ ಎಂದು ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net