ಖಾಲಿ ಖಾಲಿ ಸ್ಟೇಡಿಯಂನಲ್ಲಿ ಗೆದ್ದ ಆಸೀಸ್: ಪ್ರೇಕ್ಷಕರಿಲ್ಲದೆ ನಡೆದ ಮೊದಲ ಏಕದಿನ

Asis
Published on

ಸಿಡ್ನಿ: ಕಾಂಗರೂ ನಾಡಿನಲ್ಲಿ ಕರೊನಾ ಭೀತಿಯಿಂದಾಗಿ ಎಲ್ಲ ಕ್ರೀಡಾ ಚಟುವಟಿಕೆಗಳಿಂದ ಪ್ರೇಕ್ಷಕರಿಗೆ ನಿಷೇಧ ಹೇರಿರುವುದರಿಂದ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯ ಶುಕ್ರವಾರ ಖಾಲಿ ಕ್ರೀಡಾಂಗಣದಲ್ಲಿ ನಡೆಯಿತು. ಸರ್ವಾಂಗೀಣ ನಿರ್ವಹಣೆ ತೋರಿದ ಆಸ್ಟ್ರೇಲಿಯಾ ತಂಡ 71 ರನ್​ಗಳಿಂದ ಸುಲಭವಾಗಿ ಪಂದ್ಯ ಜಯಿಸಿ, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಎಸ್​ಸಿಜಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್, 7 ವಿಕೆಟ್​ಗೆ 258 ರನ್ ಪೇರಿಸಿತು. ಪ್ರತಿಯಾಗಿ ಕಿವೀಸ್ ತಂಡ, 41 ಓವರ್​ಗಳಲ್ಲಿ 187 ರನ್​ಗೆ ಆಲೌಟ್ ಆಯಿತು. ಇದು ಕರೊನಾ ಭೀತಿಯಿಂದಾಗಿ ಖಾಲಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಗಿದೆ. ಸರಣಿಯ 2ನೇ ಪಂದ್ಯ ಭಾನುವಾರ ಇದೇ ಮೈದಾನದಲ್ಲಿ ನಡೆಯಲಿದೆ.

ಆಸ್ಟ್ರೇಲಿಯಾ: 7 ವಿಕೆಟ್​ಗೆ 258 (ವಾರ್ನರ್ 67, ಫಿಂಚ್ 60, ಸ್ಮಿತ್ 14, ಲಬುಶೇನ್ 56, ಮಿಚೆಲ್ ಮಾರ್ಷ್ 27, ಸೋಧಿ 51ಕ್ಕೆ 3, ಸ್ಯಾಂಟ್ನರ್ 34ಕ್ಕೆ 2, ಫರ್ಗ್ಯುಸನ್ 60ಕ್ಕೆ 2), ನ್ಯೂಜಿಲೆಂಡ್: 41 ಓವರ್​ಗಳಲ್ಲಿ 187 (ಗುಪ್ಟಿಲ್ 40, ನಿಕೋಲ್ಸ್ 10, ವಿಲಿಯಮ್ಸನ್ 19, ಟೇಲರ್ 4, ಲಾಥಮ್ 38, ಗ್ರಾಂಡ್​ಹೋಮ್ 25, ನೀಶಾಮ್ 8, ಮಿಚೆಲ್ ಮಾರ್ಷ್ 29ಕ್ಕೆ 3, ಕಮ್ಮಿನ್ಸ್ 25ಕ್ಕೆ 3, ಹ್ಯಾಸಲ್​ವುಡ್ 37ಕ್ಕೆ 2, ಜಂಪಾ 50ಕ್ಕೆ 2). ಪಂದ್ಯಶ್ರೇಷ್ಠ: ಮಿಚೆಲ್ ಮಾರ್ಷ್.

ಹ್ಯಾಂಡ್​ಶೇಕ್ ಇಲ್ಲ

ಕರೊನಾ ಮುನ್ನೆಚ್ಚರಿಕೆಯ ಕ್ರಮವಾಗಿ ಖಾಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆಸೀಸ್-ಕಿವೀಸ್ ಕ್ರಿಕೆಟಿಗರು ಪಂದ್ಯದ ಬಳಿಕ ಹ್ಯಾಂಡ್ ಶೇಕ್ ಮಾಡಲಿಲ್ಲ. ಈ ಮುನ್ನ ಪಂದ್ಯದಲ್ಲಿ ವಿಕೆಟ್ ಬಿದ್ದಾಗ ಸಂಭ್ರಮಿಸುವಾಗಲೂ ಆಟಗಾರರು ಪರಸ್ಪರ ರ್ಸ³ಸಲಿಲ್ಲ. ಬದಲಾಗಿ ಕಾಲನ್ನು ಪರಸ್ಪರ ತಾಗಿಸಿ ಸಂಭ್ರಮಿಸಿದರು. ಸಿಡ್ನಿ ಏಕದಿನ ಪಂದ್ಯದ ಟಿಕೆಟ್ ಖರೀದಿಸಿರುವವರಿಗೆ ಸಂಪೂರ್ಣ ಹಣವನ್ನು ವಾಪಸ್ ನೀಡುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಆಸೀಸ್​ನಲ್ಲಿ ಇದುವರೆಗೆ 150ಕ್ಕೂ ಅಧಿಕ ಕರೊನಾ ಪ್ರಕರಣಗಳು ಪತ್ತೆಯಾಗಿವೆ.

ಕರೊನಾ ಭೀತಿಯಿಂದ ಪಾರಾದ ಆಸೀಸ್ ಕ್ರಿಕೆಟಿಗ ರಿಚರ್ಡ್​ಸನ್!

ಸಿಡ್ನಿ: ಆಸ್ಟ್ರೇಲಿಯಾದ ವೇಗದ ಬೌಲರ್ ಕೇನ್ ರಿಚರ್ಡ್​ಸನ್ ಅನಾರೋಗ್ಯದಿಂದ ಬಳಲಿದ ಕಾರಣ ಅವರಿಗೆ ಕರೊನಾ ಹರಡಿರುವ ಬಗ್ಗೆ ಶಂಕೆ ಮೂಡಿತ್ತು. ಆದರೆ ಅವರ ಪರೀಕ್ಷಾ ವರದಿಯಲ್ಲಿ ಸೋಂಕು ಇಲ್ಲದಿರುವುದು ದೃಢಪಟ್ಟಿದ್ದು, ಕರೊನಾ ಭೀತಿಯಿಂದ ಮುಕ್ತಿ ದೊರೆತಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಕೇನ್ ರಿಚರ್ಡ್​ಸನ್ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಈ ವಾರವಷ್ಟೇ ವಾಪಸಾಗಿದ್ದು, ಶೀತಬಾಧೆ ಮತ್ತು ಗಂಟಲು ಬೇನೆಯಿಂದ ಬಳಲುತ್ತಿದ್ದರು. ಇದರಿಂದಾಗಿ ಆಸೀಸ್ ತಂಡದ ವೈದ್ಯಕೀಯ ಸಿಬ್ಬಂದಿ ಮುನ್ನೆಚ್ಚರಿಕೆಯ ಕ್ರಮವಾಗಿ ಅವರನ್ನು ಕೋವಿಡ್-19 ಪರೀಕ್ಷೆಗೆ ಕಳುಹಿಸಿದ್ದರು. ಆದರೆ ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದಿದ್ದು, ಅದರ ಬೆನ್ನಲ್ಲೇ ಅವರನ್ನು ಹೋಟೆಲ್ ರೂಮ್ ಗೃಹಬಂಧನದಿಂದ ಬಿಡುಗಡೆಗೊಳಿಸಲಾಗಿದೆ ಮತ್ತು ಸಿಡ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯ ಆಡುತ್ತಿದ್ದ ಆಸೀಸ್ ತಂಡವನ್ನು ಕೂಡಿಕೊಂಡಿದ್ದಾರೆ. ಈ ಮುನ್ನ ಅವರ ಬದಲಿಗೆ ಸೀನ್ ಅಬೋಟ್ ಅವರನ್ನು ಬದಲಿ ಆಟಗಾರರಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. 29 ವರ್ಷದ ಕೇನ್ ರಿಚರ್ಡ್​ಸನ್ ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಪರ ಆಡಬೇಕಿದೆ.

ಚೆಂಡು ಹುಡುಕಲು ಫೀಲ್ಡರ್​ಗಳ ಪರದಾಟ!

ಸಾಮಾನ್ಯವಾಗಿ ಪಂದ್ಯದಲ್ಲಿ ಸಿಕ್ಸರ್ ಸಿಡಿದ ಚೆಂಡು ಗ್ಯಾಲರಿ ಸೇರಿದಾಗ ಪ್ರೇಕ್ಷಕರೇ ಚೆಂಡನ್ನು ಹೆಕ್ಕಿ ಹಿಂದಿರುಗಿಸುತ್ತಾರೆ. ಆದರೆ ಆಸೀಸ್-ಕಿವೀಸ್ ಏಕದಿನಕ್ಕೆ ಪ್ರೇಕ್ಷಕರಿಲ್ಲದ ಕಾರಣ, ಸಿಕ್ಸರ್ ಸಿಡಿದಾಗ ಆಟಗಾರರೇ ಗ್ಯಾಲರಿಗೆ ಹೋಗಿ ಚೆಂಡು ಹುಡುಕಲು ಪರದಾಡಬೇಕಾಯಿತು. ಇಡೀ ಕ್ರೀಡಾಂಗಣದಲ್ಲಿ ಇದ್ದುದು ಒಬ್ಬನೇ ಪ್ರೇಕ್ಷಕ. ಅದುವೇ ಸಿಡ್ನಿ ಕ್ರೀಡಾಂಗಣದ ಪ್ರಸಿದ್ಧ ಪ್ರೇಕ್ಷಕ ಸ್ಟೀಫನ್ ಹರಾಲ್ಡ್ ಗಾಸ್ಕೋನ್ ಪ್ರತಿಮೆ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net