ಭಾರತಕ್ಕೆ ಕ್ಲೀನ್‌ಸ್ವೀಪ್ ತಪ್ಪಿಸಿದ ಆಸೀಸ್: ಮಿಂಚಿದ ಮ್ಯಾಕ್ಸ್‌ವೆಲ್, ಮಾರ್ಷ್

New-Project-2-5
Published on

ರಾಜ್‌ಕೋಟ್: ಆರಂಭಿಕ ಮಿಚೆಲ್ ಮಾರ್ಷ್ (96 ರನ್, 84 ಎಸೆತ, 13 ಬೌಂಡರಿ, 3 ಸಿಕ್ಸರ್) ಶತಕವಂಚಿತ ಬ್ಯಾಟಿಂಗ್ ಹಾಗೂ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ (40ಕ್ಕೆ4) ಬಿಗಿ ಬೌಲಿಂಗ್ ಜತೆಗೆ ಸಂಘಟಿತ ಪ್ರದರ್ಶನ ತೋರಿದ ಪ್ರವಾಸಿ ಆಸ್ಟ್ರೇಲಿಯಾ ತಂಡದ ಎದುರು ಭಾರತ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 66 ರನ್‌ಗಳಿಂದ ಸೋಲು ಅನುಭವಿಸಿದೆ. ಇದರೊಂದಿಗೆ ಟೀಮ್ ಇಂಡಿಯಾ ಕ್ಲೀನ್‌ಸ್ವೀಪ್ ಅವಕಾಶ ಕೈಚೆಲ್ಲಿ 2-1ರಿಂದ ಸರಣಿ ಜಯಕ್ಕೆ ಸಮಾಧಾನ ಕಂಡಿತು. ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಅಕ್ಟೋಬರ್ 8ರಂದು ಆಸೀಸ್ ತಂಡವನ್ನು ಎದುರಿಸುವ ಮೂಲಕವೇ ಭಾರತ ತನ್ನ ಅಭಿಯಾನ ಆರಂಭಿಸಲಿದೆ.

https://x.com/BCCI/status/1707072230566617410?s=20
ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಆಸೀಸ್, ಮಿಚೆಲ್ ಮಾರ್ಷ್ ಹಾಗೂ ಸ್ಟೀವನ್ ಸ್ಮಿತ್ (74 ರನ್, 61 ಎಸೆತ, 8 ಬೌಂಡರಿ, 1 ಸಿಕ್ಸರ್) ಜತೆಯಾಟದ ಬಲದಿಂದ 7 ವಿಕೆಟ್‌ಗೆ 352 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ನಾಯಕ ರೋಹಿತ್ ಶರ್ಮ (81 ರನ್, 57 ಎಸೆತ, 5 ಬೌಂಡರಿ, 6 ಸಿಕ್ಸರ್) ಪ್ರತಿರೋಧದ ಹೊರತಾಗಿಯೂ ಭಾರತ 49.4 ಓವರ್‌ಗಳಲಿ 286 ರನ್‌ಗಳಿಗೆ ಸರ್ವಪತನ ಕಂಡಿತು.

ರೋಹಿತ್ ಆಟ ವ್ಯರ್ಥ: ಚೇಸಿಂಗ್ ಆರಂಭಿಸಿದ ಟೀಮ್ ಇಂಡಿಯಾ ಪರ ಇಶಾನ್ ಕಿಶನ್ ಗೈರಿನಲ್ಲಿ ರೋಹಿತ್ ಜತೆ ವಾಷಿಂಗ್ಟನ್ ಸುಂದರ್ (18) ಇನಿಂಗ್ಸ್ ಆರಂಭಿಸಿದರು. ರೋಹಿತ್ ಆಕ್ರಮಣಕಾರಿಯಾಗಿ ಆಡಿದರೆ, ವಾಷಿಂಗ್ಟನ್ ಮಂದಗತಿಯ ಬ್ಯಾಟಿಂಗ್ ನಡೆಸಿದರು. ಇವರು ಮೊದಲ ವಿಕೆಟ್‌ಗೆ 74 ರನ್ ಪೇರಿಸಿದರು. ಇದರಲ್ಲಿ ರೋಹಿತ್ ಒಬ್ಬರೇ 55 ರನ್‌ಗಳಿಸಿದರು. ಮ್ಯಾಕ್ಸ್‌ವೆಲ್ ಈ ಜತೆಯಾಟ ಮುರಿದರು.

ಭಾರತಕ್ಕೆ ಮ್ಯಾಕ್ಸ್‌ವೆಲ್ ಕಡಿವಾಣ: ರೋಹಿತ್ ಹಾಗೂ ವಿರಾಟ್ ಕೊಹ್ಲಿ (56 ರನ್, 61 ಎಸೆತ, 5 ಬೌಂಡರಿ, 1 ಸಿಕ್ಸರ್) 2ನೇ ವಿಕೆಟ್‌ಗೆ 70 ರನ್ ಸೇರಿಸಿ ಚೇಸಿಂಗ್ ಬಲ ತುಂಬಿದರು. ರೊಹಿತ್‌ಗೆ ಉತ್ತಮ ಸಾಥ್ ನೀಡಿದ ವಿರಾಟ್ 56 ಎಸೆತಗಳಲ್ಲಿ ಅರ್ಧಶತಕಗಳಿಸಿದರು. ಮ್ಯಾಕ್ಸ್‌ವೆಲ್ ಪಡೆದ ರಿಟರ್ನ್ ಕ್ಯಾಚ್‌ಗೆ ರೋಹಿತ್ 21ನೇ ಓವರ್‌ನಲ್ಲಿ ವಿಕೆಟ್ ಕೈ ಚೆಲ್ಲಿದರು. ಇದರ ಬೆನ್ನಲ್ಲೇ ವಿರಾಟ್ ಸಹ ಔಟಾದರು. ನಂತರ ಶ್ರೇಯಸ್ ಅಯ್ಯರ್ (48) ಹಾಗೂ ಕೆಎಲ್ ರಾಹುಲ್ (26) 3ನೇ ವಿಕೆಟ್‌ಗೆ 52 ರನ್‌ಗಳಿಸಿದರು. ವೇಗಿ ಮಿಚೆಲ್ ಸ್ಟಾರ್ಕ್, ರಾಹುಲ್ ವಿಕೆಟ್ ಕಿತ್ತು ಭಾರತದ ಗೆಲುವಿನ ಆಸೆಗೆ ಪೆಟ್ಟು ನೀಡಿದರು. ಸೂರ್ಯಕುಮಾರ್ (8) ನಿರಾಸೆ ತಂದರು. ತವರಿನ ಅಂಗಣದಲ್ಲಿ ತುಸು ಹೋರಾಟ ನಡೆಸಿದ ಆಲ್ರೌಂಡರ್ ರವೀಂದ್ರ ಜಡೇಜಾ (35) ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತರಾದರು.

ರನ್‌ಮಳೆ ಹರಿಸಿದ ಆಸೀಸ್: ಡೇವಿಡ್ ವಾರ್ನರ್ (56) ಹಾಗೂ ಮಿಚೆಲ್ ಮಾರ್ಷ್ ಜೋಡಿ ಮೊದಲ ವಿಕೆಟ್‌ಗೆ ಬಿರುಸಿನ 78 ರನ್ ಸೇರಿಸಿ ಆಸೀಸ್ ಉತ್ತಮ ಆರಂಭ ಒದಗಿಸಿದರು. ವಾರ್ನರ್ ಸರಣಿಯಲ್ಲಿ 3ನೇ ಅರ್ಧಶತಕ ಬಾರಿಸಿ ಕನ್ನಡಿಗ ಪ್ರಸಿದ್ಧ ಕೃಷ್ಣಗೆ ವಿಕೆಟ್ ನೀಡಿದರು. ಬಳಿಕ ಕ್ರೀಸ್‌ಗಿಳಿದ ಸ್ವೀವನ್ ಸ್ಮಿತ್, ಮಾರ್ಷ್ ಜತೆ 2ನೇ ವಿಕೆಟ್‌ಗೆ 137 ರನ್ ಸೇರಿಸಿ ಆಸೀಸ್ ಮೊತ್ತವನ್ನು ಏರಿಸಿದರು. ಮಾರ್ಷ್ ವಿಕೆಟ್ ಕಬಳಿಸಿ ಕುಲದೀಪ್ ಈ ಜತೆಯಾಟ ಮುರಿದರು. ಕೆಲಹೊತ್ತಿನಲ್ಲಿ ಸ್ಮಿತ್, ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಅಲೆಕ್ಸ್ ಕ್ಯಾರಿ (11), ಗ್ಲೆನ್ ಮ್ಯಾಕ್ಸ್‌ವೆಲ್ (5), ಕ್ಯಾಮರಾನ್ ಗ್ರೀನ್ (9) ತ್ವರಿತಗತಿಯಲ್ಲಿ ನಿರ್ಗಮಿಸಿದರು. ಇದರಿಂದ 25 ಓವರ್‌ಗಳಲ್ಲೇ 200ರ ಗಡಿ ದಾಟಿದ್ದ ಆಸೀಸ್ ರನ್‌ಗತಿ ತುಸು ಕುಸಿಯಿತು. ನಂತರ ಮಾರ್ನಸ್ ಲಬುಶೇನ್ (72 ರನ್, 58 ಎಸೆತ, 9 ಬೌಂಡರಿ) ಏಕಾಂಗಿ ಹೋರಾಟದ ಮೂಲಕ ಟೀಮ್ ಇಂಡಿಯಾಗೆ ತಿರುಗೇಟು ನೀಡಿದರು. ಆರನೇ ವಿಕೆಟ್‌ಗೆ ನಾಯಕ ಪ್ಯಾಟ್ ಕಮ್ಮಿನ್ಸ್ (19) ಜತೆಗೂಡಿ ಉಪಯುಕ್ತ 46 ರನ್ ಕಲೆಹಾಕಿದರು. ಸ್ಲಾಗ್ ಓವರ್‌ಗಳಲ್ಲಿ ಬಿಗಿ ಬೌಲಿಂಗ್ ನಡೆಸಿದ ಭಾರತ ಅಂತಿಮ 5 ಓವರ್‌ಗಳಲ್ಲಿ 35 ರನ್ ಮಾತ್ರ ಬಿಟ್ಟುಕೊಟ್ಟಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net