ಆಸ್ಟ್ರೇಲಿಯಾ ತಂಡಕ್ಕೆ ಸತತ 2ನೇ ಜಯ, ಸೆಮಿಫೈನಲ್ ಹಂತಕ್ಕೆ ಮತ್ತಷ್ಟು ಸನಿಹ

australia and srilanka match for web
Published on

ದುಬೈ: ಚೊಚ್ಚಲ ಪ್ರಶಸ್ತಿಯ ಕನಸಿನಲ್ಲಿರುವ ಆಸ್ಟ್ರೇಲಿಯಾ ತಂಡ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-12ರ ಹಂತದಲ್ಲಿ ಸತತ ಎರಡನೇ ಜಯ ದಾಖಲಿಸುವ ಮೂಲಕ ಸೆಮಿಫೈನಲ್ ಹಂತಕ್ಕೆ ಮತ್ತಷ್ಟು ಸನಿಹವಾಯಿತು. ಹಲವು ದಿನಗಳಿಂದ ರನ್ ಬರ ಎದುರಿಸುತ್ತಿದ್ದ ಆರಂಭಿಕ ಡೇವಿಡ್ ವಾರ್ನರ್ (65ರನ್, 42 ಎಸೆತ, 10 ಬೌಂಡರಿ) ಸ್ಫೋಟಕ ಬ್ಯಾಟಿಂಗ್‌ನಿಂದ ಫಾರ್ಮ್ ಕಂಡುಕೊಳ್ಳಲು ಯಶಸ್ವಿಯಾದರು. ವಾರ್ನರ್ ಹಾಗೂ ಆರನ್ ಫಿಂಚ್ (37ರನ್, 23 ಎಸೆತ, 5 ಬೌಂಡರಿ, 2 ಸಿಕ್ಸರ್) ಜೋಡಿಯ ಬಿರುಸಿನ ಬ್ಯಾಟಿಂಗ್ ಫಲವಾಗಿ ಆಸ್ಟ್ರೇಲಿಯಾ ತಂಡ 7 ವಿಕೆಟ್‌ಗಳಿಂದ ಶ್ರೀಲಂಕಾ ತಂಡವನ್ನು ಸೋಲಿಸಿತು. ಮತ್ತೊಂದೆಡೆ, ಸೋಲಿನ ನಡುವೆಯೂ ಶ್ರೀಲಂಕಾ ತಂಡದ ಮುಂದಿನ ಹಾದಿ ಜೀವಂತವಾಗಿದೆ. ಮೊದಲ ಪಂದ್ಯದಲ್ಲಿ ಬಾಂಗ್ಲಾ ತಂಡದ ಎದುರು ಶ್ರೀಲಂಕಾ ಜಯ ದಾಖಲಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ, ಸ್ಪಿನ್ನರ್ ಆಡಂ ಜಂಪಾ (12ಕ್ಕೆ 2) ಹಾಗೂ ವೇಗಿಗಳಾದ ಮಿಚೆಲ್ ಸ್ಟಾರ್ಕ್ (27ಕ್ಕೆ 2), ಪ್ಯಾಟ್ ಕಮ್ಮಿನ್ಸ್ (34ಕ್ಕೆ 2) ಮಾರಕ ದಾಳಿಗೆ ನಲುಗಿ 6 ವಿಕೆಟ್‌ಗೆ 154 ರನ್ ಪೇರಿಸಿತು. ಪ್ರತಿಯಾಗಿ ಆಸ್ಟ್ರೇಲಿಯಾ ತಂಡ 17 ಓವರ್‌ಗಳಲ್ಲಿ 3 ವಿಕೆಟ್‌ಗೆ 155 ರನ್‌ಗಳಿಸಿ ಜಯದ ನಗೆ ಬೀರಿತು.

ಶ್ರೀಲಂಕಾ: 6 ವಿಕೆಟ್‌ಗೆ 154 (ಕುಸಾಲ್ ಪೆರೇರಾ 35, ಚರಿತಾ ಅಸಲಂಕಾ 35, ಭನುಕಾ ರಾಜಪಕ್ಷ 33*, ಮಿಚೆಲ್ ಸ್ಟಾರ್ಕ್ 27ಕ್ಕೆ 2, ಪ್ಯಾಟ್ ಕಮ್ಮಿನ್ಸ್ 34ಕ್ಕೆ 2, ಆಡಂ ಜಂಪಾ 12ಕ್ಕೆ 2), ಆಸ್ಟ್ರೇಲಿಯಾ: 17 ಓವರ್‌ಗಳಲ್ಲಿ 3 ವಿಕೆಟ್‌ಗೆ 155 (ಡೇವಿಡ್ ವಾರ್ನರ್ 65, ಆರನ್ ಫಿಂಚ್ 37, ಸ್ಟೀವನ್ ಸ್ಮಿತ್ 28*, ಮಾರ್ಕಸ್ ಸ್ಟೋಯಿನಿಸ್ 16, ವನಿಂದು ಹಸರಂಗ 22ಕ್ಕೆ 2)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net