

ಮೆಲ್ಬೋರ್ನ್: ಎಡಗೈ ಆರಂಭಿಕ ಬ್ಯಾಟುಗಾರ್ತಿ ಸ್ಮೃತಿ ಮಂದನಾ (66 ರನ್, 37 ಎಸೆತ, 12ಬೌಂಡರಿ) ಏಕಾಂಗಿ ಹೋರಾಟದ ನಡುವೆಯೂ ಎಡಗೈ ಸ್ಪಿನ್ನರ್ ಜೆಸ್ ಜೊನಾಸೆನ್ (12ಕ್ಕೆ 5) ಮಾರಕ ದಾಳಿಗೆ ನಲುಗಿದ ಭಾರತ ತಂಡ ಮಹಿಳೆಯರ ಟಿ20 ತ್ರಿಕೋನ ಸರಣಿಯ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಎದುರು 11 ರನ್ಗಳಿಂದ ಸೋಲು ಕಂಡಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ತಂಡ, ಬೆತ್ ಮೂನಿ (71*ರನ್, 54 ಎಸೆತ, 9 ಬೌಂಡರಿ) ಬಿರುಸಿನ ಬ್ಯಾಟಿಂಗ್ ಫಲವಾಗಿ 6 ವಿಕೆಟ್ಗೆ 155 ರನ್ಗಳಿಸಿತು. ಪ್ರತಿಯಾಗಿ ಭಾರತ ತಂಡ 20 ಓವರ್ಗಳಲ್ಲಿ 144 ರನ್ಗಳಿಗೆ ಸರ್ವಪತನ ಕಂಡಿತು. ಕರ್ನಾಟಕದ ಸ್ಪಿನ್ನರ್ ರಾಜೇಶ್ವರಿ ಗಾಯಕ್ವಾಡ್ (32ಕ್ಕೆ 2) ಗಮನಸೆಳೆದರೆ, ವೇದಾ ಕೃಷ್ಣಮೂರ್ತಿ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ವಿಫಲರಾದರು. ಈ ಗೆಲುವಿನೊಂದಿಗೆ ಆಸೀಸ್ ಲೀಗ್ ಹಂತದಲ್ಲಿ ಭಾರತ ಎದುರು ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡಿತು. 5 ವಿಕೆಟ್ ಕಬಳಿಸಿದ ಜೊನಾಸೆನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಬೆತ್ ಮೂನಿ ಸರಣಿಶ್ರೇಷ್ಠರಾದರು.
ಸರಣಿಯಲ್ಲಿ ಬಲಿಷ್ಠ ಆಸ್ಟ್ರೇಲಿಯಾ, ಇಂಗ್ಲೆಂಡ್ ತಂಡಗಳ ಎದುರು ಸ್ಥಿರ ನಿರ್ವಹಣೆ ತೋರಿದ ಭಾರತ ಮಹಿಳಾ ತಂಡ ಮುಂದಿನ ವಾರ ಆರಂಭಗೊಳ್ಳಲಿರುವ ಟಿ20 ವಿಶ್ವಕಪ್ ಟೂರ್ನಿಗೆ ಭರ್ಜರಿ ಸಿದ್ಧತೆ ಕೈಗೊಂಡಿತು. ಫೆ.21ರಿಂದ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲೇ ನಡೆಯಲಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.
ಭಾರತದ ಪರ 16 ವರ್ಷದ ಬ್ಯಾಟುಗಾರ್ತಿ ರಿಚಾ ಘೋಷ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು.
ಆಸ್ಟ್ರೇಲಿಯಾ: 6 ವಿಕೆಟ್ಗೆ 155 (ಬೆತ್ ಮೂತಿ 71*, ಆಶ್ಲೆಗ್ ಗಾರ್ಡ್ ನರ್ 26, ಮೆಗ್ ಲ್ಯಾನ್ನಿಂಗ್ 26, ರಾಜೇಶ್ವರಿ ಗಾಯಕ್ವಾಡ್ 32ಕ್ಕೆ 2, ದೀಪ್ತಿ ಶರ್ಮ 30ಕ್ಕೆ 2, ರಾಧಾ ಯಾದವ್ 35ಕ್ಕೆ 1.
ಭಾರತ: 20 ಓವರ್ಗಳಲ್ಲಿ 144 (ಸ್ಮೃತಿ ಮಂದನಾ 66, ಶೆಫಾಲಿ ವರ್ಮ 10, ರಿಚಾ ಘೋಷ್ 17, ಹರ್ವನ್ಪ್ರೀತ್ 14, ಜೆಮೀಮಾ 2, ದೀಪ್ತಿ ಶರ್ಮ 10, ತಾನಿಯಾ 11, ಜೆಸ್ ಜೊನಾಸೆನ್ 12ಕ್ಕೆ 5, ವ್ಲಾಮಿನಿಕ್ 32ಕ್ಕೆ 2). -ಪಿಟಿಐ/ಏಜೆನ್ಸೀಸ್