

ನ್ಯೂಯಾರ್ಕ್: ಯುಎಸ್ ಓಪನ್ ಗ್ರಾಂಡ್ ಸ್ಲಾಂ ಪುರುಷರ ಸಿಂಗಲ್ಸ್ ಚಾಂಪಿಯನ್ ಸೆರ್ಬಿಯಾ ತಾರೆ ನೊವಾಕ್ ಜೋಕೊವಿಕ್, ಮಹಿಳಾ ವಿಭಾಗದ ರನ್ನರ್ ಅಪ್ ಅರಿನಾ ಸಬಲೆಂಕಾ ತಲಾ ಒಂದು ಸ್ಥಾನ ಬಡ್ತಿ ಪಡೆಯುವ ಮೂಲಕ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.
ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮೊದಲ ಸುತ್ತು ದಾಟಿದಾಗಲೇ ಜೋಕೊವಿಕ್, ಸ್ಪೇನ್ ಕಾರ್ಲೋಸ್ ಅಲ್ಕರಾಜ್ ಅವರನ್ನು ರ್ಯಾಂಕಿಂಗ್ ಪಟ್ಟಿಯಲ್ಲಿ ಹಿಂದಿಕಿದ್ದರು.11,795 ರೇಟಿಂಗ್ ಪಾಯಿಂಟ್ನೊಂದಿಗೆ ಜೋಕೋ ನಂ.1 ಸ್ಥಾನವನ್ನು ದಾಖಲೆಯ 390ನೇ ವಾರಕ್ಕೆ ವಿಸ್ತಿರಿಸಿದ್ದಾರೆ. ಅಲ್ಕರಾಜ್ 8,535 ಅಂಕ ಹೊಂದಿದ್ದಾರೆ.
ಸೋಮವಾರ ಬಿಡುಗಡೆಯಾದ ನೂತನ ಪರಿಷ್ಕೃತ ಎಟಿಪಿ ರ್ಯಾಂಕಿಂಗ್ ಮೂಲಕ ಇದು ಅಧಿಕೃತಗೊಂಡಿತ್ತು. 20 ವರ್ಷದ ಅಲ್ಕರಾಜ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಹೋಲ್ಗರ್ ರೂನ್ 4ನೇ ಸ್ಥಾನದಲ್ಲಿದ್ದು, ಗ್ರೀಸ್ನ ಸ್ಟೆಫಾನೋಸ್ ಸಿಸಿಪಾಸ್ ಮತ್ತು ಆಂಡ್ರೆ ರುಬ್ಲೆವ್ ಕ್ರಮವಾಗಿ 5, 6 ಸ್ಥಾನದಲ್ಲಿದ್ದಾರೆ. 20 ವರ್ಷದ ಬೆನ್ ಶೆಲ್ಟನ್ ಮೊದಲ ಬಾರಿಗೆ ಅಗ್ರ 20 ರೊಳಗೆ ಕಾಣಿಸಿಕೊಂಡಿದ್ದಾರೆ. 47 ಸ್ಥಾನದಿಂದ ನಂ .19ನೇ ಸ್ಥಾನಕ್ಕೆ ಏರಿದ್ದಾರೆ.
ನೂತನ ಡಬ್ಲುೃಟಿಪಿ ರ್ಯಾಂಕಿಂಗ್ನಲ್ಲಿ ಬೆಲಾರಸ್ ತಾರೆ ಅರಿನಾ ಸಬಲೆಂಕಾ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ನಂ.1 ಸ್ಥಾನ ಪಡೆದುಕೊಂಡಿದ್ದಾರೆ. ಇದರೊಂದಿಗೆ 1970ರ ಬಳಿಕ ಮಹಿಳಾ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನಕ್ಕೇರಿದ 29 ನೇ ಆಟಗಾರ್ತಿ ಎನಿಸಿದ್ದಾರೆ. ಯುಎಸ್ ಚಾಂಪಿಯನ್ ಕೋಕೋ ಗ್ೌ ಸಿಂಗಲ್ಸ್ನಲ್ಲಿ ಮೂರನೇ ಸ್ಥಾನಕ್ಕೇರಿದರೆ, ಡಬಲ್ಸ್ನಲ್ಲಿ ನಂ.1 ಪಟ್ಟ ಒಲಿಸಿಕೊಂಡಿದ್ದಾರೆ. 2022 ರಿಂದ ಅಗ್ರಸ್ಥಾನ ಕಾಯ್ದುಕೊಂಡಿದ್ದ ಇಗಾ ಸ್ವಿಯಾಟೆಕ್ ಅಮೆರಿಕಾದಲ್ಲಿ 4ನೇ ಸುತ್ತಿನಲ್ಲಿ ಸೋಲು ಅನುಭವಿಸುವ ಮೂಲಕ ಒಂದು ಸ್ಥಾನ ಕುಸಿತ ಕಂಡಿದ್ದಾರೆ.