ಸಹಾಯಕ ಕೋಚ್​ ಅಭಿಷೇಕ್ ನಾಯರ್​​ ವಜಾ; ಟೆಸ್ಟ್​ ಕ್ರಿಕೆಟ್​ ವೈಫಲ್ಯಕ್ಕೆ ಬಿಸಿಸಿಐನಿಂದ ತಲೆದಂಡ?

web gam abhi
Published on

ನವದೆಹಲಿ: ಭಾರತ ತಂಡ ಕಳೆದ ನ್ಯೂಜಿಲೆಂಡ್​ ಮತ್ತು ಆಸ್ಟ್ರೆಲಿಯಾ ವಿರುದ್ಧದ ಟೆಸ್ಟ್​ ಸರಣಿಗಳಲ್ಲಿ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ ಸಹಾಯಕ ಕೋಚ್​ ಅಭಿಷೇಕ್​ ನಾಯರ್​ ತಲೆದಂಡವಾಗಿದೆ. ಹುದ್ದೆ ಅಲಂಕರಿಸಿದ ಕೇವಲ 8 ತಿಂಗಳಲ್ಲೇ ಬಿಸಿಸಿಐ, ಅಭಿಷೇಕ್​ ನಾಯರ್​ರನ್ನು ವಜಾಗೊಳಿಸಿದೆ. ಈ ಮೂಲಕ ಟೀಮ್​ ಇಂಡಿಯಾದ ತರಬೇತಿ ಬಳಗದ ಗಾತ್ರ ತಗ್ಗಿಸಿದೆ.

ಭಾರತ ತಂಡದ ಪ್ರಮುಖ ಆಟಗಾರ ಮತ್ತು ತರಬೇತಿ ಸಿಬ್ಬಂದಿ ಬಳಗದ ಪ್ರಮುಖ ಸದಸ್ಯರೊಬ್ಬರ ನಡುವಿನ ಭಿನ್ನಾಭಿಪ್ರಾಯಕ್ಕೆ ಅಭಿಷೇಕ್​ ನಾಯರ್​ರನ್ನು ಬಲಿಪಶು ಮಾಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಅಭಿಷೇಕ್​ ನಾಯರ್​ ಕಳೆದ ಜುಲೈನಲ್ಲಿ ಮುಖ್ಯ ಕೋಚ್​ ಗೌತಮ್​ ಗಂಭೀರ್​ ಅವರೊಂದಿಗೆ ಟೀಮ್​ ಇಂಡಿಯಾದ ತರಬೇತಿ ಬಳಗ ಸೇರಿದ್ದರು. ಅವರ ತರಬೇತಿಯಡಿಯಲ್ಲಿ ಭಾರತ, ಕಿವೀಸ್​ ವಿರುದ್ಧ ತವರಿನಲ್ಲೇ 0-3ರಿಂದ ವೈಟ್​ವಾಷ್​ ಎದುರಿಸಿದ್ದರೆ, ಆಸ್ಟ್ರೆಲಿಯಾ ಪ್ರವಾಸದಲ್ಲಿ 1-3ರಿಂದ ಸೋತು ಬಾರ್ಡರ್​-ಗಾವಸ್ಕರ್​ ಟ್ರೋಫಿ ಕಳೆದುಕೊಂಡಿತ್ತು.

ಗಂಭೀರ್​ಗೆ 3 ವರ್ಷಗಳಿಗೆ ಅಂದರೆ 2027ರ ಏಕದಿನ ವಿಶ್ವಕಪ್​ವರೆಗೆ ಒಪ್ಪಂದ ನೀಡಲಾಗಿದ್ದು, ಅಭಿಷೇಕ್​ಗೂ ಇಷ್ಟೇ ಅವಧಿಯ ಒಪ್ಪಂದ ನೀಡಲಾಗಿತ್ತು. ಆದರೆ ಇದೀಗ ಬಿಸಿಸಿಐ ಈ ಒಪ್ಪಂದವನ್ನು ರದ್ದುಗೊಳಿಸಿದೆ. ಈ ಬಗ್ಗೆ ಅಭಿಷೇಕ್​ಗೆ ಈಗಾಗಲೆ ಮಾಹಿತಿ ರವಾನಿಸಲಾಗಿದೆ. ಹೀಗಾಗಿ ಐಪಿಎಲ್​ ನಂತರದ ಇಂಗ್ಲೆಂಡ್​ ಪ್ರವಾಸಕ್ಕೆ ಅವರು ಭಾರತ ತಂಡದ ಜತೆಗೆ ತೆರಳುವುದಿಲ್ಲ. ನೆದರ್ಲೆಂಡ್​ನ ರ್ಯಾನ್​ ಟೆನ್​ ಡೋಶೆಟ್​ ಈಗಾಗಲೆ ಇನ್ನೊರ್ವ ಸಹಾಯಕ ಕೋಚ್​ ಆಗಿ ತಂಡದ ಜತೆಗಿದ್ದಾರೆ.

41 ವರ್ಷದ ಅಭಿಷೇಕ್​ ನಾಯರ್​ ಮಾಜಿ ಆಲ್ರೌಂಡರ್​ ಆಗಿದ್ದು, ಭಾರತ ಪರ 3 ಏಕದಿನ ಪಂದ್ಯವಾಡಿದ್ದರು. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 103 ಪಂದ್ಯವಾಡಿ ಹೆಚ್ಚಿನ ಯಶಸ್ಸು ಕಂಡಿದ್ದರು. ಈ ಮುನ್ನ ಕೆಕೆಆರ್​ ತಂಡದಲ್ಲೂ ಅವರು ಸಹಾಯಕ ಕೋಚ್​ ಆಗಿ ಗಂಭೀರ್​ ಜತೆ ಕಾರ್ಯನಿರ್ವಹಿಸಿದ್ದರು.

ಆಸೀಸ್​ ಪ್ರವಾಸದ ಬಳಿಕ ಸೀತಾಂಶು ಕೋಟಕ್​ ತಜ್ಞ ಬ್ಯಾಟಿಂಗ್​ ಕೋಚ್​ ಭಾರತ ತಂಡಕ್ಕೆ ಸೇರ್ಪಡೆಯಾದ ಬಳಿಕ ಅಭಿಷೇಕ್​ ನಾಯರ್​ ನಿರ್ಗಮನ ನಿರೀಕ್ಷಿತವಾಗಿತ್ತು. ಆಸೀಸ್​ ಪ್ರವಾಸದ ಬಳಿಕ ಗಂಭೀರ್​, ನಾಯಕ ರೋಹಿತ್​ ಶರ್ಮ ಜತೆಗೆ ಬಿಸಿಸಿಐ ಪದಾಧಿಕಾರಿಗಳ ಜತೆಗೆ ನಡೆದ ಪರಾಮರ್ಶೆ ಸಭೆಯಲ್ಲೇ ಅಭಿಷೇಕ್​ ಕೈಬಿಡುವುದು ಬಹುತೇಕ ಅಂತಿಮವಾಗಿತ್ತು ಎನ್ನಲಾಗಿದೆ.

ಫೀಲ್ಡಿಂಗ್​ ಕೋಚ್​ ಟಿ. ದಿಲೀಪ್​ ಕೂಡ ಔಟ್​?

ಭಾರತ ತಂಡದ ತರಬೇತಿ ಬಳಗದಿಂದ ಫೀಲ್ಡಿಂಗ್​ ಕೋಚ್​ ಟಿ. ದಿಲೀಪ್​ ಮತ್ತು ಕಂಡೀಷನಿಂಗ್​ ಕೋಚ್​ ಸೋಹಮ್​ ದೇಸಾಯಿ ಅವರನ್ನೂ ಕೈಬಿಡಲಾಗುತ್ತದೆ ಎನ್ನಲಾಗಿದೆ. ಇವರಿಬ್ಬರು ರಾಹುಲ್​ ದ್ರಾವಿಡ್​ ಕೋಚ್​ ಆಗಿದ್ದ ಅವಧಿಯಿಂದಲೇ, ಅಂದರೆ ಕಳೆದ 3 ವರ್ಷಗಳಿಂದಲೂ ಭಾರತ ತಂಡದ ಜತೆಗಿದ್ದರು. ಹೊಸ ಪ್ರಮಾಣಿತ ಕಾರ್ಯನಿರ್ವಹಣೆ ವಿಧಾನದ (ಎಸ್​ಒಪಿ) ಅನ್ವಯ ಬಿಸಿಸಿಐ, ಟೀಮ್​ ಇಂಡಿಯಾದ ತರಬೇತಿ ಸಿಬ್ಬಂದಿಗೆ ಗರಿಷ್ಠ 3 ವರ್ಷಗಳ ಅವಧಿಯ ಮಿತಿ ಹೇರಲಿದೆ ಎನ್ನಲಾಗಿದೆ. ಭಾರತದ ಮೊದಲ ಸ್ಟ್ರೆಂತ್​ ಆಂಡ್​ ಕಂಡೀಷನಿಂಗ್​ ಕೋಚ್​ ಆಂಡ್ರಿಯನ್​ ಲೆ ರೌಕ್ಸ್​ 2ನೇ ಅವಧಿಗೆ ಮರಳಲಿದ್ದಾರೆ ಎನ್ನಲಾಗಿದೆ. ದ. ಆಫ್ರಿಕಾದ ಲೆ ರೌಕ್ಸ್​ 2003ರ ವಿಶ್ವಕಪ್​ನಲ್ಲಿ ಸೌರವ್​ ಗಂಗೂಲಿ ಸಾರಥ್ಯದ ಭಾರತ ತಂಡದ ಫಿಟ್ನೆಸ್​ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net