ಸ್ವರ್ಣಕ್ಕೆ ಮುತ್ತಿಟ್ಟ ಟೀಮ್ ಇಂಡಿಯಾ: ಪದಕ ವಿತರಿಸಿದ ಐಸಿಸಿ ಅಧ್ಯಕ್ಷ ಜಯ್ ಷಾ, ಮತ್ತೆ ನೋ ಹ್ಯಾಂಡ್‌ಶೇಕ್

ಪಾಕಿಸ್ತಾನ ಎದುರು ಫೈನಲ್‌ನಲ್ಲಿ ರೋಚಕ ಗೆಲುವು
ICC Chairman Jay Shah presents the medal
ICC Chairman Jay Shah presents the medal to Team India
Published on: 

ನಿಶಿನ್: ಹಾಲಿ ಟಿ20 ವಿಶ್ವ ಚಾಂಪಿಯನ್ ಭಾರತ ತಂಡ ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್‌ನಲ್ಲಿ ಸತತ ಎರಡನೇ ಬಾರಿಗೆ ಸ್ವರ್ಣ ಪದಕ ಸಾಧನೆ ಮಾಡಿದೆ. ಶ್ರೇಯಸ್ ಅಯ್ಯರ್ ನೇತೃತ್ವದ ಟೀಮ್ ಇಂಡಿಯಾ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು 19 ರನ್‌ಗಳ ರೋಚಕ ಗೆಲುವು ದಾಖಲಿಸಿತು. ಇದರೊಂದಿಗೆ ಪುರುಷ ಹಾಗೂ ಮಹಿಳಾ ಕ್ರಿಕೆಟ್ ತಂಡಗಳು ಎರಡೂ ಆವೃತ್ತಿಯಲ್ಲಿ ಚಿನ್ನದ ಪದಕ ಗೆದ್ದಂತಾಗಿದೆ.

ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ವೈಭವ್ ಸೂರ್ಯವಂಶಿ (15) ಹಾಗೂ ಸಂಜು ಸ್ಯಾಮ್ಸನ್ (2) ನಿರಾಸೆ ಮೂಡಿಸಿದರೂ, ಅಭಿಷೇಕ್ ಶರ್ಮ (61 ರನ್, 28 ಎಸೆತ, 3 ಬೌಂಡರಿ, 7 ಸಿಕ್ಸರ್) ಹಾಗೂ ಉಪನಾಯಕ ತಿಲಕ್ ವರ್ಮ (51* ರನ್, 22 ಎಸೆತ, 3 ಬೌಂಡರಿ, 4 ಸಿಕ್ಸರ್) ಬಿರುಸಿನ ಅರ್ಧಶತಕ ಜತೆಗೆ ಶಿವಂ ದುಬೆ (27) ಉಪಯುಕ್ತ ಆಟದ ನೆರವಿನಿಂದ ಭಾರತ 6 ವಿಕೆಟ್‌ಗೆ 211 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ಪ್ರತಿಯಾಗಿ ಚೇಸಿಂಗ್‌ನಲ್ಲಿ ಹಸನ್ ನವಾಜ್ (96 ರನ್, 51 ಎಸೆತ, 5 ಎಸೆತ, 7 ಬೌಂಡರಿ) ಹೋರಾಟದ ಹೊರತಾಗಿಯೂ ಪಾಕಿಸ್ತಾನ 6 ವಿಕೆಟ್‌ಗೆ 192 ರನ್‌ಗಳಿಸಲಷ್ಟೇ ಶಕ್ತಗೊಂಡಿತು. ಇದರೊಂದಿಗೆ ಏಷ್ಯಾಕಪ್ ಪ್ರಶಸ್ತಿ ಕಾದಾಟದಲ್ಲಿ ಪರಾಭವಗೊಂಡ ಒಂದು ವರ್ಷದ ನಂತರ ಏಷ್ಯಾಡ್ ೈನಲ್‌ನಲ್ಲೂ ಭಾರತ ಎದುರು ಪಾಕ್ ಸೋಲುಂಡಿತು. ಬಾಂಗ್ಲಾದೇಶ ಎದುರು 63 ರನ್ ಗೆಲುವು ದಾಖಲಿಸಿದ ಶ್ರೀಲಂಕಾ ಕಂಚಿನ ಪದಕ ಒಲಿಸಿಕೊಂಡಿತು.

ಭಾರತ: 6 ವಿಕೆಟ್‌ಗೆ 211 (ವೈಭವ್ ಸೂರ್ಯವಂಶಿ 15, ಅಭಿಷೇಕ್ ಶರ್ಮ 61, ಸಂಜು ಸ್ಯಾಮ್ಸನ್ 2, ಶ್ರೇಯಸ್ ಅಯ್ಯರ್ 21, ಇಶಾನ್ ಕಿಶನ್ 20, ತಿಲಕ್ ವರ್ಮ 51*, ಶಿವಂ ದುಬೆ 27, ಅಕ್ಷರ್ ಪಟೇಲ್ 1*, ರ್ಅಾತ್ 25ಕ್ಕೆ 2, ಅಹ್ಮದ್ 43ಕ್ಕೆ 2).

ಪಾಕಿಸ್ತಾನ: 6 ವಿಕೆಟ್‌ಗೆ 192 (ಸಾಹಿಬ್‌ಜಾದ್ ರ್ಹಾನ್ 10,ಮಾಜ್ ಸಾದಖತ್ 23, ಉಸ್ಮಾನ್ 3, ಹಸನ್ 96, ಸೈಮ್ ಆಯುಬ್ 29, ಅಬ್ದುಲ್ 9, ಸಾದ್ ಮಸೂದ್ 12*, ಅಕ್ಷರ್ ಪಟೇಲ್ 29ಕ್ಕೆ 2, ವಾಷಿಂಗ್ಟನ್ ಸುಂದರ್ 29ಕ್ಕೆ 2, ಶಿವಂ ದುಬೆ 33ಕ್ಕೆ 2).

ಮತ್ತೆ ನೋ ಹ್ಯಾಂಡ್‌ಶೇಕ್

ಹಾಕಿ ಹಾಗೂ ವಾಲಿಬಾಲ್ ಸ್ಪರ್ಧೆಯಲ್ಲಿ ಭಾರತ-ಪಾಕ್ ಆಟಗಾರರು ಹಸ್ತಲಾಘವ ಮಾಡಿದರೆ, ಕ್ರಿಕೆಟ್‌ನಲ್ಲಿ ಬಿಸಿಸಿಐ ನೋ ಹ್ಯಾಂಡ್‌ಶೇಕ್ ಪಾಲಿಸಿಯನ್ನು ಏಷ್ಯಾಡ್‌ನಲ್ಲೂ ಮುಂದುವರಿಸಿತು. ಟಾಸ್ ಪ್ರಕ್ರಿಯೆ ವೇಳೆಯೂ ಉಭಯ ತಂಡಗಳ ನಾಯಕರಾದ ಶ್ರೇಯಸ್ ಅಯ್ಯರ್ ಹಾಗೂ ಸಾಹಿಬ್‌ಜಾದ ರ್ಹಾನ್ ಪರಸ್ಪರ ಕೈ ಕುಲುಕಲಿಲ್ಲ. ಜತೆಗೆ ಪಂದ್ಯ ಮುಕ್ತಾಯದ ನಂತರವೂ ಟೀಮ್ ಇಂಡಿಯಾ ಆಟಗಾರರು ಕೇವಲ ಅಂಪೈರ್‌ಗಳೊಂದಿಗೆ ಹ್ಯಾಂಡ್‌ಶೇಕ್ ಮಾಡಿ ಮೈದಾನ ತೊರೆದರು. ಪಾಕ್ ಆಟಗಾರರು ಡ್ರೆಸ್ಸಿಂಗ್ ರೂಮ್‌ನಿಂದ ಹೊರಬಂದು, ಅಂಪೈರ್‌ಗಳೊಂದಿಗೆ ಕೈಕುಲುಕಿ, ಭಾರತದ ಆಟಗಾರರೊಂದಿಗೆ ಯಾವುದೇ ಸಂವಹನವಿಲ್ಲದೆ ಹಿಂತಿರುಗಿದರು.

ಪದಕ ವಿತರಿಸಿದ ಜಯ್ ಷಾ

ಪೂರ್ವ ನಿಯೋಜಿತ ಕಾರ್ಯಕ್ರಮಗಳ ಕಾರಣ ನೀಡಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಫೈನಲ್ ಪಂದ್ಯಕ್ಕೆ ಗೈರುಹಾಜರಾಗಿದ್ದರಿಂದ ವಿಜೇತರಿಗೆ ಪದಕ ವಿತರಣಾ ಸಮಾರಂಭದಲ್ಲಿ ಯಾವುದೇ ಗೊಂದಲ ಸೃಷ್ಟಿಯಾಗಲಿಲ್ಲ. ಐಚಿ-ನಗೋಯಾ ಏಷ್ಯನ್ ಗೇಮ್ಸ್ ಸಂಘಟನಾ ಸಮಿತಿಯ ಹಿರಿಯ ಅಧಿಕಾರಿ ಪಾಕಿಸ್ತಾನ ತಂಡಕ್ಕೆ ಬೆಳ್ಳಿ ಪದಕ ವಿತರಿಸಿದರೆ, ಐಸಿಸಿ ಚೇರ್ಮನ್ ಹಾಗೂ ಬಿಸಿಸಿಐ ಮಾಜಿ ಕಾರ್ಯದರ್ಶಿ ಜಯ್ ಷಾ ಭಾರತ ತಂಡಕ್ಕೆ ಚಿನ್ನದ ಪದಕ ನೀಡಿದರು. ಮೂರೂ ಪದಕ ವಿಜೇತ ತಂಡಗಳ ಗ್ರೂಪ್ ಫೋಟೋ ಸಮಯದಲ್ಲಿ ಕೊಂಚ ಗೊಂದಲದ ವಾತಾವರಣ ನಿರ್ಮಾಣವಾಯಿತು. ನಂತರ ಎರಡೂ ತಂಡಗಳು (ಪಾಕ್-ಶ್ರೀಲಂಕಾ) ಭಾರತ ತಂಡದ ಮುಂಭಾಗದಲ್ಲಿ ನಿಂತು, ಐಸಿಸಿ ಮುಖ್ಯಸ್ಥ ಜಯ್ ಷಾ ಅವರೊಂದಿಗೆ ಫೋಟೋಗೆ ಪೋಸ್ ನೀಡಿದವು.

ಟೀಮ್ ಇಂಡಿಯಾಗೆ ಐಸಿಸಿ ಅಧ್ಯಕ್ಷ ಜಯ್ ಷಾ ಅಭಿನಂದನೆ (ICC Chairman Jay Shah Congratulates Team India)

ಟೀಮ್ ಇಂಡಿಯಾ ಏಷ್ಯಾಡ್ ಚಿನ್ನವನ್ನು ಗೆದ್ದ ನಂತರ ಮಾತನಾಡಿದ ಐಸಿಸಿ ಅಧ್ಯಕ್ಷ ಜಯ್ ಷಾ, "ಜಪಾನ್ ಕ್ರಿಕೆಟ್ ಇತಿಹಾಸದಲ್ಲಿ ಹೆಮ್ಮೆಯ ಹೊಸ ಅಧ್ಯಾಯವೊಂದನ್ನು ಬರೆದಿವೆ. ಈ ಸಾಧನೆ ಮಾಡಿದ ಟೀಮ್ ಇಂಡಿಯಾಗೆ ಅಭಿನಂದನೆಗಳು. ಹಾಗೆಯೇ, ಸ್ಪರ್ಧಿಸಿದ ಪ್ರತಿಯೊಂದು ರಾಷ್ಟ್ರಕ್ಕೂ, ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಹಾಗೂ ಈ ಕಾರ್ಯಕ್ರಮವನ್ನು ಸಾಕಾರಗೊಳಿಸಿದ ಸಂಘಟಕರಿಗೂ, ಮತ್ತು ಪ್ರಪಂಚದಾದ್ಯಂತ ಕ್ರಿಕೆಟ್ ಏಕೆ ಅಷ್ಟು ವಿಶೇಷ ಎಂಬುದನ್ನು ತಮ್ಮ ಉಪಸ್ಥಿತಿಯಿಂದ ನಮಗೆ ನೆನಪಿಸಿಕೊಟ್ಟ ಸಾವಿರಾರು ಅಭಿಮಾನಿಗಳಿಗೂ ಹೃತ್ಪೂರ್ವಕ ಧನ್ಯವಾದಗಳು," ಎಂದು ಹೇಳಿದರು.

ಶ್ರೇಯಸ್ ಅಯ್ಯರ್ ನೇತೃತ್ವದ ಟೀಮ್ ಇಂಡಿಯಾಗೆ ಐಸಿಸಿ ಅಧ್ಯಕ್ಷ ಜಯ್ ಷಾ ಅವರು ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಜಯ್ ಶಾ ಅವರೊಂದಿಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮತ್ತು ಭಾರತೀಯ ಒಲಿಂಪಿಕ್ ಸಂಘದ (ಐಒಎ) ಅಧ್ಯಕ್ಷೆ ಪಿ.ಟಿ. ಉಷಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net