

ಬೆಂಗಳೂರು: ಕರ್ನಾಟಕ ರಾಜ್ಯ ಪಿಕಲ್‌ಬಾಲ್ ಅಸೋಸಿಯೇಷನ್ (KSPA) ಮತ್ತು ಎಂಟ್ರೋಫಿ ಸ್ಪೋರ್ಟ್ಸ್ ಅಂಡ್ ಇವೆಂಟ್ಸ್ (ESE) ಸಹಯೋಗದಲ್ಲಿ ನಡೆಯುತ್ತಿರುವ ಪ್ರಥಮ ಆವೃತ್ತಿಯ 'ಕರ್ನಾಟಕ ಪಿಕಲ್‌ಬಾಲ್ ಪ್ರೀಮಿಯರ್ ಲೀಗ್' (KPPL) ಟೂರ್ನಿಯ ಅಧಿಕೃತ ಜೆರ್ಸಿ ಬಿಡುಗಡೆ ಸಮಾರಂಭವು ವಿಜೃಂಭಣೆಯಿಂದ ಜರುಗಿತು.
ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ ಏಳು ಪ್ರಾಂಚೈಸಿಗಳಾದ ಬಳ್ಳಾರಿ ಟೈಗರ್ಸ್, ಬೆಂಗಳೂರು ಚಾರ್ಜರ್ಸ್, ಮಂಗಳೂರು ರೋರರ್ಸ್, ಕೂರ್ಗ್ ಒರಿಜಿನಲ್ಸ್, ಬೆಳಗಾವಿ ಬ್ಯಾರನ್ಸ್, ತುಮಕೂರು ಟೈಟನ್ಸ್ ಮತ್ತು ಮೈಸೂರು ರಾಯಲ್ಸ್ ತಂಡಗಳ ಆಟಗಾರರು ತಮ್ಮ ತಂಡದ ಜೆರ್ಸಿಗಳನ್ನು ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ KPPL ನಾಯಕರೊಂದಿಗೆ, ತಂಡಗಳ ಮಾಲೀಕರು, ತರಬೇತುದಾರರು ಹಾಗೂ ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು. ಈ ಕೂಟದ ಪ್ರಮುಖ ಆಕರ್ಷಣೆ ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ KPPL ಬ್ರ್ಯಾಂಡ್ ಅಂಬಾಸಿಡರ್ ಶ್ರೀಮುರಳಿ ಅವರು ಆಗಮಿಸಿ ಜೆರ್ಸಿ ಅನಾವರಣಗೊಳಿಸಿ ಶುಭ ಹಾರೈಸಿದರು.
ತಂಡಗಳ ಹರಾಜು ಮತ್ತು ಆಟಗಾರರ ಆಯ್ಕೆ ಪ್ರಕ್ರಿಯೆಯ ನಂತರ ನಡೆದ ಈ ಜೆರ್ಸಿ ಬಿಡುಗಡೆ ಕಾರ್ಯಕ್ರಮವು, ರಾಜ್ಯದಲ್ಲಿ ಪಿಕಲ್‌ಬಾಲ್ ಕ್ರೀಡೆಯ ಜಾಗೃತಿಯನ್ನು ಹೆಚ್ಚಿಸುವ ಜೊತೆಗೆ ಮೊದಲ ಆವೃತ್ತಿಯ ಪಂದ್ಯಾವಳಿಗೆ ಬಿರುಸಿನ ಚಾಲನೆ ನೀಡಿದೆ.