ಅದೇ ಸೀನ್​ ರಿಪೀಟ್​... ಸಾಂಬಾರಿನಲ್ಲಿ ಕರಿಬೇವು ಎಲೆಯನ್ನು ತೆಗೆದುಹಾಕಿದಂತೆ ಪಾಕ್​ ತಂಡಕ್ಕೆ ಕ್ಯಾರೆ ಎನ್ನದ ಟೀಮ್​ ಇಂಡಿಯಾ! India vs Pakistan

ಟಾಸ್ ವೇಳೆ ಪಾಕಿಸ್ತಾನ ತಂಡದ ನಾಯಕ ಸಾಹಿಬ್ಜಾದಾ ಫರ್ಹಾನ್ ಮತ್ತು ಶ್ರೇಯಸ್ ಅಯ್ಯರ್ ಪರಸ್ಪರ ಹಸ್ತಲಾಘವ (ಹ್ಯಾಂಡ್‌ಶೇಕ್) ಮಾಡಿಕೊಳ್ಳುವುದನ್ನು ಸಂಪೂರ್ಣವಾಗಿ ತಪ್ಪಿಸಿದರು.
India vs Pakistan
ಟೀಮ್​ ಇಂಡಿಯಾ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಪಾಕಿಸ್ತಾನ ತಂಡದ ನಾಯಕ ಸಾಹಿಬ್ಜಾದಾ ಫರ್ಹಾನ್
Published on: 

ಐಚಿ-ನಗೋಯಾ (ಜಪಾನ್​) : ಆಗ್ನೇಯ ಏಷ್ಯಾದ ಮಹತ್ವದ ಕ್ರೀಡಾಕೂಟವಾದ ಏಷ್ಯನ್ ಗೇಮ್ಸ್ 2026ರ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ( India vs Pakistan ) ಮುಖಾಮುಖಿಯಾಗಿವೆ. ಇಂದು (ಅಕ್ಟೋಬರ್ 3) ನಡೆಯುತ್ತಿರುವ ಹೈ-ವೋಲ್ಟೆಜ್​ ಚಿನ್ನದ ಪದಕದ ಕದನದಲ್ಲಿ ಉಭಯ ದೇಶಗಳು ಪ್ರತಿಷ್ಠೆಗಾಗಿ ಸೆಣಸಾಡುತ್ತಿವೆ. ಸೆಮಿಫೈನಲ್ ಪಂದ್ಯದಲ್ಲಿ ಶ್ರೀಲಂಕಾವನ್ನು ಬೃಹತ್ ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸಿರುವ ಭಾರತ ತಂಡ, ಬಾಂಗ್ಲಾದೇಶವನ್ನು ಸೋಲಿಸಿ ಬಂದಿರುವ ಪಾಕಿಸ್ತಾನದ ಜತೆ ಪದಕ್ಕಾಗಿ ಕಾದಾಡುತ್ತಿದೆ.

ಪಂದ್ಯದ ಆರಂಭದಲ್ಲೇ ಕುತೂಹಲ ಮೂಡಿಸಿದ ಟಾಸ್ ಪ್ರಕ್ರಿಯೆಯಲ್ಲಿ, ಭಾರತೀಯ ತಂಡದ ನಾಯಕ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ, ಟಾಸ್ ವೇಳೆ ಪಾಕಿಸ್ತಾನ ತಂಡದ ನಾಯಕ ಸಾಹಿಬ್ಜಾದಾ ಫರ್ಹಾನ್ ಮತ್ತು ಶ್ರೇಯಸ್ ಅಯ್ಯರ್ ಪರಸ್ಪರ ಹಸ್ತಲಾಘವ (ಹ್ಯಾಂಡ್‌ಶೇಕ್) ಮಾಡಿಕೊಳ್ಳುವುದನ್ನು ಸಂಪೂರ್ಣವಾಗಿ ತಪ್ಪಿಸಿದರು. ಕೆಲವೇ ಕೆಲವು ಔಪಚಾರಿಕ ಮಾತುಗಳನ್ನಾಡಿದ ಹೊರತಾಗಿ, ಇಬ್ಬರೂ ನಾಯಕರು ದೈಹಿಕ ಅಂತರ ಕಾಯ್ದುಕೊಂಡು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

Also Read
44 ವರ್ಷಗಳ ಕಾಯುವಿಕೆಗೆ ತೆರೆ: ಏಷ್ಯನ್ ಗೇಮ್ಸ್ ಮಹಿಳಾ ಹಾಕಿ ಫೈನಲ್‌ನಲ್ಲಿ ಚೀನಾ ಮಣಿಸಿ ಚಿನ್ನದ ಪದಕ ಗೆದ್ದ ಭಾರತ! India Women Hockey
India vs Pakistan

ಇತರ ಕ್ರೀಡೆಗಳಲ್ಲಿ ಕಂಡುಬರುವ ಸೌಹಾರ್ದಯುತ ವಾತಾವರಣಕ್ಕೂ ಮತ್ತು ಕ್ರಿಕೆಟ್‌ಗೂ ಅಜಗಜಾಂತರ ವ್ಯತ್ಯಾಸವಿರುವುದು ಇಲ್ಲಿ ಎದ್ದು ಕಾಣುತ್ತಿತ್ತು. ಏಷ್ಯನ್ ಗೇಮ್ಸ್‌ನ ಟೇಬಲ್ ಟೆನಿಸ್ ಹಾಗೂ ಹಾಕಿ ಪಂದ್ಯಗಳ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನದ ಕ್ರೀಡಾಪಟುಗಳು ಯಾವುದೇ ಮುಜಗರವಿಲ್ಲದೆ ಅತ್ಯಂತ ಮುಕ್ತವಾಗಿ ಕೈಕುಲುಕಿ ಪರಸ್ಪರ ಅಭಿನಂದಿಸಿಕೊಂಡಿದ್ದರು. ಆದರೆ, ಕ್ರಿಕೆಟ್ ಅಂಗಳಕ್ಕೆ ಬಂದಾಗ ಮಾತ್ರ ಈ 'ನೋ-ಹ್ಯಾಂಡ್‌ಶೇಕ್' (ಕೈಕುಲುಕದಿರುವ) ಸಂಪ್ರದಾಯ ಮಾತ್ರ ಕಟ್ಟುನಿಟ್ಟಾಗಿ ಮುಂದುವರಿಯುತ್ತಲೇ ಬಂದಿರುವುದು ಕ್ರೀಡಾಭಿಮಾನಿಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ಅಥವಾ ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (OCA) ಕ್ರೀಡಾಪಟುಗಳು ಕಡ್ಡಾಯವಾಗಿ ಕೈಕುಲುಕಲೇಬೇಕೆಂಬ ಯಾವುದೇ ಕಠಿಣ ನಿಯಮವನ್ನು ವಿಧಿಸಿಲ್ಲವಾದರೂ, ಇದು ಕ್ರೀಡಾಸ್ಪೂರ್ತಿಯ ಪ್ರತೀಕವೆಂದು ಪರಿಗಣಿಸಲಾಗಿದೆ. ಇತ್ತೀಚೆಗೆ ಮುಕ್ತಾಯಗೊಂಡ ಮಹಿಳಾ ಕ್ರಿಕೆಟ್ ವಿಭಾಗದಲ್ಲಿ ಭಾರತ ಚಿನ್ನದ ಪದಕ ಮತ್ತು ಪಾಕಿಸ್ತಾನ ಕಂಚಿನ ಪದಕ ಗೆದ್ದಾಗ, ಇಬ್ಬರೂ ಒಟ್ಟಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರೂ ಸಹ, ಪುರುಷರ ಕ್ರಿಕೆಟ್‌ನ ಈ ನಿರ್ಣಾಯಕ ಚಿನ್ನದ ಪದಕದ ಪಂದ್ಯದಲ್ಲಿ ಮಾತ್ರ ಹಳೆ ಹಗೆಯ ಛಾಯೆ ಮುಂದುವರೆದಿದೆ.

Also Read
ಅದು ನನ್ನಿಷ್ಟ ನೀವ್ಯಾರು ಕೇಳೋಕೆ... ಟ್ರೋಲಿಗರಿಗೆ ಖಡಕ್​ ತಿರುಗೇಟು ನೀಡಿದ ಬೆಳ್ಳಿ ಪದಕ ವಿಜೇತೆ ಆನ್ಸಿ ಸೋಜನ್..! Ancy Sojan Edappilly
India vs Pakistan

ಕೊನೆಗೂ ಭಾರತ ತಂಡವು ಪ್ರತಿಷ್ಠಿತ ವೇದಿಕೆಯಲ್ಲೂ ಪಾಕಿಸ್ತಾನವನ್ನು ಕಾಲ ಕಸದಂತೆ ಕಂಡಿದೆ. ಸಾಂಬಾರಿನಲ್ಲಿ ಕರಿಬೇವು ಎಲೆಯನ್ನು ತೆಗೆದುಹಾಕಿದಂತೆ ಪಾಕ್​ ತಂಡವನ್ನು ಕ್ಯಾರೆ ಎನ್ನದೇ ಭಾರತ ತಂಡ ಪಕ್ಕಕ್ಕೆ ಎಸೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕ್ರೀಡಾಭಿಮಾನಿಗಳು ಪಾಕ್​ ತಂಡವನ್ನು ಟ್ರೋಲ್ ಮಾಡುತ್ತಿದ್ದಾರೆ. ಏಷ್ಯನ್ ಗೇಮ್ಸ್‌ನ ಈ ಮಹತ್ವದ ವೇದಿಕೆಯಲ್ಲಿ ಭಾರತ ಮತ್ತೊಮ್ಮೆ ತನ್ನ ಕ್ರಿಕೆಟ್ ಶ್ರೇಷ್ಠತೆಯನ್ನು ಮೆರೆದಿದ್ದು, ಉಭಯ ತಂಡಗಳ ನಡುವಿನ ಈ ಶೀತಲ ಸಮರವು ಕ್ರೀಡಾ ಲೋಕದಲ್ಲಿ ಮತ್ತೊಮ್ಮೆ ಚರ್ಚೆಗೆ ಮುನ್ನುಡಿ ಬರೆದಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net