Asian Games: ಲವ್ಲಿನಾ ಫೈನಲ್ ಪಂಚ್; ಪ್ರಿಯಾ, ಕಪಿಲ್‌ಗೆ ಕಂಚು

ಟೋಕಿಯೊ ಒಲಿಂಪಿಕ್ಸ್ ಕಂಚು ವಿಜೇತೆ ಲವ್ಲಿನಾ ಬೊರ್ಗೊಹೈನ್ ಏಷ್ಯನ್ ಗೇಮ್ಸ್‌ನಲ್ಲಿ ಸತತ ಎರಡು ಆವೃತ್ತಿಯಲ್ಲಿ ಫೈನಲ್‌ಗೇರಿದ ಭಾರತದ ಮೊದಲ ಮಹಿಳಾ ಬಾಕ್ಸರ್ ಎನಿಸಿದರು.
boxing
ಲವ್ಲಿನಾ ಬೊರ್ಗೊಹೈನ್
Published on: 

ನಗೋಯಾ: ಟೋಕಿಯೊ ಒಲಿಂಪಿಕ್ಸ್ ಕಂಚು ವಿಜೇತೆ ಲವ್ಲಿನಾ ಬೊರ್ಗೊಹೈನ್ ಏಷ್ಯನ್ ಗೇಮ್ಸ್‌ನಲ್ಲಿ ಸತತ ಎರಡು ಆವೃತ್ತಿಯಲ್ಲಿ ಫೈನಲ್‌ಗೇರಿದ ಭಾರತದ ಮೊದಲ ಮಹಿಳಾ ಬಾಕ್ಸರ್ ಎನಿಸಿದರು. ಪ್ರಿಯಾ ಘಂಘಾಸ್ ಹಾಗೂ ಕಪಿಲ್ ಪೋಖರಿಯಾ ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ಕಳೆದ ಆವೃತ್ತಿಯ ಬೆಳ್ಳಿ ವಿಜೇತೆ, 28 ವರ್ಷದ ಲವ್ಲಿನಾ ಮಹಿಳೆಯರ 75 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಕಜಾಕ್‌ಸ್ತಾನದ ನಟಾಲಿಯಾ ಬೊಗ್ಡಾನೋವಾ ವಿರುದ್ಧ 3-2 ಅಂತರದಿಂದ ಗೆಲುವು ಒಲಿಸಿಕೊಂಡರು. ಇದರೊಂದಿಗೆ ಸತತ ಎರಡನೇ ಅವೃತ್ತಿಯಲ್ಲಿ ಕನಿಷ್ಠ ಬೆಳ್ಳಿ ಖಾತ್ರಿಪಡಿಕೊಂಡಿರುವ ಲವ್ಲಿನಾ ಚಿನ್ನ ಜಯಿಸುವ ನಿರೀಕ್ಷೆ ಹರಡಿದೆ.

ಏಷ್ಯನ್‌ಗೇಮ್ಸ್‌ಗೆ ಪದಾರ್ಪಣೆ ಮಾಡಿದ 20 ವರ್ಷದ ಪ್ರಿಯಾ 60 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಚೀನಾದ ಯಾಂಗ್ ಚೆಂಗ್ಯು ಎದುರು 1-4 ಅಂತರದಿಂದ ಪರಾಭವಗೊಂಡರು. ಪುರುಷರ ವಿಭಾಗದ 90 ಕೆಜಿ ಸೆಮಿಫೈನಲ್‌ನಲ್ಲಿ ಹಾಲಿ ವಿಶ್ವಚಾಂಪಿಯನ್ ಉಜ್ಬೇಕಿಸ್ತಾನದ ತುರಾಬೆಕ್ ಖಬಿಬುಲ್ಲೇವ್ ವಿರುದ್ಧ 1-4 ರಿಂದ ಸೋಲು ಅನುಭವಿಸಿ ಕಂಚಿನ ಪದಕಕ್ಕೆ ಸಮಾಧಾನಪಟ್ಟರು.

ಶುಕ್ರವಾರ ನಡೆಯಲಿರುವ ಫೈನಲ್‌ನಲ್ಲಿ ಲವ್ಲಿನಾ, ಪರ್ವೀನ್ ಹೂಡಾ (65 ಕೆಜಿ) ಹಾಗೂ ಅಂಕುಶ್ ಪಾಂಗಲ್ (80 ಕೆಜಿ) ಚಿನ್ನದ ಪದಕಕ್ಕಾಗಿ ಸೆಣಸಲಿದ್ದಾರೆ. 2023ರಲ್ಲಿ 1 ಬೆಳ್ಳಿ ಮತ್ತು 3 ಕಂಚು ಸೇರಿ ಒಟ್ಟು 4 ಪದಕ ಜಯಿಸಿದ್ದ ಭಾರತ, ಈ ಬಾರಿ ಆರು ಪದಕ ಖಾತ್ರಿಪಡಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net