Asian Games: ಫೈನಲ್‌ಗೇರಲು ಭಾರತ-ಶ್ರೀಲಂಕಾ ಹೋರಾಟ

ಇಂದು ಕ್ರಿಕೆಟ್ ಸ್ಪರ್ಧೆಯ ಸೆಮಿಫೈನಲ್ಸ್
vaibhav sanju
vaibhav-sanju
Published on: 

ನಿಶಿನ್: ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ ಸ್ಪರ್ಧೆಯ ಸೆಮಿಫೈನಲ್ ಪಂದ್ಯಗಳು ಗುರುವಾರ ನಡೆಯಲಿದ್ದು, ಹಾಲಿ ಚಾಂಪಿಯನ್ ಭಾರತ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿ ಆಗಲಿವೆ. ಇನ್ನೊಂದು ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಸೆಣಸಾಟ ನಡೆಸಲಿವೆ.

ಭಾರಿ ಮಳೆಯ ಕಾರಣದಿಂದ ನಿರೀಕ್ಷಿತ ಅಭ್ಯಾಸದ ಕೊರತೆ ನಡುವೆಯೂ ಸೆಮಿಫೈನಲ್‌ನಲ್ಲಿ ಕಣಕ್ಕಿಳಿಯುವ ಹಾಗೂ ಕಳೆದ ಆವೃತ್ತಿಯ ಚಿನ್ನದ ಪದಕ ರಕ್ಷಿಸಿಕೊಳ್ಳುವ ಸವಾಲು ಭಾರತ ತಂಡದ ಮುಂದಿದೆ. ನಾಲ್ಕೂ ಕ್ವಾರ್ಟರ್‌ಫೈನಲ್ ಪಂದ್ಯಗಳು ಮಳೆಯಿಂದ ರದ್ದುಗೊಂಡಿದ್ದು, ಐಸಿಸಿ ಯಾಂಕಿಂಗ್ ಆಧಾರದಲ್ಲಿ ತಂಡಗಳು ಅಂತಿಮ 4ರ ಘಟ್ಟಕ್ಕೇರಿವೆ. ಜತೆಗೆ ಸೆಮೀಸ್ ಆಡಲಿರುವ 4 ತಂಡಗಳು ಇದುವರೆಗೆ ಕೂಟದಲ್ಲಿ ಒಂದೂ ಪಂದ್ಯವನ್ನಾಡಿಲ್ಲ.

ಸತತ ಎರಡು ಬಾರಿ ಟಿ20 ವಿಶ್ವಕಪ್ ಜಯಿಸಿರುವ ಭಾರತ ತಂಡವೇ ಸ್ವರ್ಣ ಪದಕದ ಫೇವರಿಟ್ ಆಗಿದ್ದು, ಶ್ರೀಲಂಕಾ ಎರಡನೇ ಸ್ತರದ ಆಟಗಾರರೊಂದಿಗೆ ಕಣಕ್ಕಿಳಿಯಲಿದೆ. ಸೆಮಿಫೈನಲ್ ಪಂದ್ಯವೂ ಮಳೆಯಿಂದ ರದ್ದಾದರೆ, ಅಗ್ರಸ್ಥಾನದ ಆಧಾರದ ಮೇಲೆ ಭಾರತ ಫೈನಲ್‌ಗೆ ಪ್ರವೇಶಿಸಲಿದೆ. ಶ್ರೀಲಂಕಾ 9ನೇ ಸ್ಥಾನದಲ್ಲಿದ್ದು, ಪಾಕಿಸ್ತಾನ ಆರು ಮತ್ತು ಬಾಂಗ್ಲಾದೇಶ ಎಂಟನೇ ಸ್ಥಾನದಲ್ಲಿದೆ. ಸೆಮಿಫೈನಲ್ ಪಂದ್ಯಗಳಿಗೆ ಮಳೆ ಅಡಚಣೆ ಸಾಧ್ಯತೆ ಕಡಿಮೆ ಎನ್ನಲಾಗಿದ್ದು, ಶನಿವಾರದ ಫೈನಲ್ ಪಂದ್ಯದಲ್ಲಿ ಮಳೆ ಭೀತಿ ಎದುರಾಗಲಿದೆ ಎಂದು ಸ್ಥಳೀಯ ಹವಾಮಾನ ಇಲಾಖೆ ತಿಳಿಸಿದೆ. ಚಿನ್ನ ಹಾಗೂ ಕಂಚಿನ ಪದಕ ಸುತ್ತಿನ ಪಂದ್ಯಗಳು ರದ್ದುಗೊಂಡರೆ, ಎರಡು ತಂಡಗಳಿಗೆ ಪದಕ ವಿತರಿಸಲು ಆಯೋಜಕರು ನಿರ್ಧರಿಸಿದ್ದಾರೆ.

ಸೆಮಿಫೈನಲ್ಸ್

ಪಾಕ್-ಬಾಂಗ್ಲಾ

ಆರಂಭ: ಬೆಳಗ್ಗೆ 5.30

ಭಾರತ-ಶ್ರೀಲಂಕಾ

ಆರಂಭ: ಬೆಳಗ್ಗೆ 10.30

ನೇರಪ್ರಸಾರ: ಸೋನಿ ಸ್ಪೋರ್ಟ್ಸ್, ಸೋನಿ ಲಿವ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net