

ಐಚಿ-ನಗೋಯಾ: ಏಷ್ಯನ್ ಗೇಮ್ಸ್ 20ನೇ ಆವೃತ್ತಿಯಲ್ಲಿ ಭಾರತ ಸೋಮವಾರ ಒಂದೇ ದಿನ 4 ಬೆಳ್ಳಿ, 4 ಕಂಚಿನ ಸಹಿತ ಒಟ್ಟು 8 ಪದಕಗಳನ್ನು ಗೆದ್ದುಕೊಂಡಿತು. ಈ ಪೈಕಿ ಅಥ್ಲೆಟಿಕ್ಸ್ ಒಂದರಲ್ಲೇ 6 ಪದಕಗಳು (3 ಬೆಳ್ಳಿ, 3 ಕಂಚು) ಒಲಿದವು. ಇದರಿಂದ ಭಾರತ ಈಗ 4 ಚಿನ್ನ, 20 ಬೆಳ್ಳಿ, 21 ಕಂಚಿನ ಸಹಿತ ಒಟ್ಟು 45 ಪದಕಗಳೊಂದಿಗೆ ಪದಕಪಟ್ಟಿಯಲ್ಲಿ 12ನೇ ಸ್ಥಾನ ಕಾಯ್ದುಕೊಂಡಿದೆ. ಜತೆಗೆ ಬಾಕ್ಸಿಂಗ್ನಲ್ಲಿ ಒಟ್ಟು 6 ಪದಕ ಖಚಿತಗೊಂಡಿವೆ.
ಜಾವೆಲಿನ್ನಲ್ಲಿ ಡಬಲ್ ಪೋಡಿಯಂ ಫಿನಿಶ್
ಒಲಿಂಪಿಕ್ಸ್ ಅವಳಿ ಪದಕ ವಿಜೇತ ನೀರಜ್ ಚೋಪ್ರಾ ಗೈರಿನ ನಡುವೆಯೂ ಭಾರತ ತಂಡ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಅವಳಿ ಪೋಡಿಯಂ ಫಿನಿಶ್ ಕಂಡಿದೆ. ನಿರೀಕ್ಷೆಯಂತೆಯೇ ಶ್ರೀಲಂಕಾದ ಹೊಸ ತಾರೆ ರುಮೇಶ್ ಪಥಿರಗೆ 88.33 ಮೀ. ಎಸೆತದೊಂದಿಗೆ ಚಿನ್ನದ ಪದಕ ಬಾಚಿಕೊಂಡರೆ, ಹರಿಯಾಣದ 24 ವರ್ಷದ ಯಶ್ವೀರ್ ಸಿಂಗ್ ಜೀವನಶ್ರೇಷ್ಠ 85.72 ಮೀ. ಎಸೆತದೊಂದಿಗೆ ಬೆಳ್ಳಿ ಜಯಿಸಿದರು. ಉತ್ತರ ಪ್ರದೇಶದ 25 ವರ್ಷದ ರೋಹಿತ್ ಯಾದವ್ 84.35 ಮೀ. ಎಸೆತದೊಂದಿಗೆ ಕಂಚಿನ ಪದಕ ಗೆದ್ದುಕೊಂಡರು. ಬೆಳ್ಳಿ ಪದಕಕ್ಕೆ ಭಾರತೀಯರ ನಡುವೆಯೇ ಪೈಪೋಟಿ ಏರ್ಪಟ್ಟಿತು. ಮೊದಲ 3 ಎಸೆತಗಳ ಬಳಿಕ ರೋಹಿತ್ ಮುಂದಿದ್ದರೆ, 4ನೇ ಎಸೆತದ ನಂತರ ಯಶ್ವೀರ್ ಮೇಲುಗೈ ಸಾಧಿಸಿದರು. ಒಲಿಂಪಿಕ್ಸ್ ಚಾಂಪಿಯನ್ ಪಾಕಿಸ್ತಾನದ ಅರ್ಷದ್ ನದೀಂ (80.29 ಮೀ.) 4ನೇ ಸ್ಥಾನದೊಂದಿಗೆ ನಿರಾಸೆ ಅನುಭವಿಸಿದರು.
ಮುರಳಿ ಶ್ರೀಶಂಕರ್ ರಜತ ಜಿಗಿತ
ಕೇರಳದ ಮುರಳಿ ಶ್ರೀಶಂಕರ್ ಪುರುಷರ ಲಾಂಗ್ಜಂಪ್ನಲ್ಲಿ ಸತತ 2ನೇ ಬಾರಿ ರಜತ ಪದಕ ಗೆದ್ದುಕೊಂಡರು. 27 ವರ್ಷದ ಅವರು 8.07 ಮೀ. ದೂರ ಜಿಗಿತದೊಂದಿಗೆ 2ನೇ ಸ್ಥಾನ ಗಳಿಸಿದರೆ, ಚೀನಾದ ಶಿ ಯುಹಾವೊ 8.17 ಮೀ. ಜಿಗಿದು ಚಿನ್ನಕ್ಕೆ ಕೊರಳೊಡ್ಡಿದರು. ಮುರಳಿ ಶ್ರೀಶಂಕರ್ 2023ರ ಆವೃತ್ತಿಯಲ್ಲೂ ರಜತ ಗೆದ್ದಿದ್ದರು. ಜತೆಗೆ ಕಳೆದ ಕಾಮನ್ವೆಲ್ತ್ ಗೇಮ್ಸ್ನಲ್ಲೂ ಬೆಳ್ಳಿ ಜಯಿಸಿದ್ದರು. ಮಾಜಿ ಟ್ರಿಪಲ್ ಜಂಪರ್ ಆಗಿರುವ ತಂದೆ ಎಸ್. ಮುರಳಿ ಅವರಿಂದಲೇ ತರಬೇತಿ ಪಡೆದಿರುವ ಶ್ರೀಶಂಕರ್, 4ನೇ ಜಿಗಿತದ ವೇಳೆ ಪಾದಕ್ಕೆ ಗಾಯ ಮಾಡಿಕೊಂಡರು. ಹೀಗಾಗಿ ಅವರು ಕೊನೇ 2 ಪ್ರಯತ್ನಗಳಿಗೆ ಕೈಹಾಕಲಿಲ್ಲ. ಇದರಿಂದ ಚಿನ್ನ ಗೆಲ್ಲುವ ಅವಕಾಶ ತಪ್ಪಿತು.
ಗುಲ್ವೀರ್ಗೆ ರಜತ ಹಾರ
ಭಾರತೀಯ ಸೇನೆಯಲ್ಲಿ ನೈಬ್ ಸುಬೇದಾರ್ ಆಗಿರುವ ಉತ್ತರ ಪ್ರದೇಶದ ದೂರ ಅಂತರ ಓಟಗಾರ ಗುಲ್ವೀರ್ ಸಿಂಗ್ ಹಾಲಿ ಏಷ್ಯಾಡ್ನಲ್ಲಿ 2ನೇ ರಜತ ಪದಕ ಸಾಧನೆ ಮಾಡಿದ್ದಾರೆ. 10 ಸಾವಿರ ಮೀ. ಓಟದ ಬಳಿಕ ಸೋಮವಾರ ನಡೆದ ಪುರುಷರ 1,500 ಮೀ. ಓಟದ ಫೈನಲ್ನಲ್ಲೂ ಅವರು ರಜತ ಪದಕ ಗೆದ್ದುಕೊಂಡರು. ಅವರು ಜೀವನಶ್ರೇಷ್ಠ 3 ನಿಮಿಷ, 36.72 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸುವ ಮೂಲಕ ಸತತ 2ನೇ ರಜತ ಒಲಿಸಿಕೊಂಡರು. ಜಪಾನ್ನ ಕಜುಟೊ ಲಿಜಾವಾ (3ನಿ,36.35ಸೆ) ಚಿನ್ನ ಗೆದ್ದರು. ಸ್ಪರ್ಧೆಯಲ್ಲಿದ್ದ ಮತ್ತೋರ್ವ ಭಾರತೀಯ ಯೂನಸ್ ಶಾ (3ನಿ,43.88ಸೆ) 9ನೇ ಸ್ಥಾನಕ್ಕೆ ತೃಪ್ತಿಪಟ್ಟರು. 28 ವರ್ಷದ ಗುಲ್ವೀರ್ ಮಂಗಳವಾರ 5 ಸಾವಿರ ಮೀ. ಓಟದಲ್ಲೂ ಸ್ಪರ್ಧಿಸಲಿದ್ದಾರೆ. ಅವರು ಕಳೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ 1 ಬೆಳ್ಳಿ, 1 ಕಂಚು ಜಯಿಸಿದ್ದರು. 2023ರ ಏಷ್ಯಾಡ್ನಲ್ಲಿ 10 ಸಾವಿರ ಮೀ. ಓಟದಲ್ಲಿ ಕಂಚು ಗೆದ್ದಿದ್ದರು.
ಪಾರುಲ್ಗೆ 2ನೇ ಕಂಚು
ಉತ್ತರ ಪ್ರದೇಶದ ಅನುಭವಿ ಓಟಗಾರ್ತಿ ಪಾರುಲ್ ಚೌಧರಿ ಸತತ 2ನೇ ದಿನ ಕಂಚಿನ ಪದಕ ಒಲಿಸಿಕೊಂಡರು. ಭಾನುವಾರವಷ್ಟೇ ಮಹಿಳೆಯರ ಸ್ಟೀಪಲ್ಚೇಸ್ನಲ್ಲಿ ಕಂಚು ಗೆದ್ದಿದ್ದ ಅವರು, ಸೋಮವಾರ 5 ಸಾವಿರ ಮೀ. ಓಟದಲ್ಲೂ ಇದೇ ಸಾಧನೆ ಮರುಕಳಿಸಿದರು. 31 ವರ್ಷದ ಪಾರುಲ್ 15 ನಿಮಿಷ, 14.61 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿದರು. ಅವರು 2023ರ ಆವೃತ್ತಿಯಲ್ಲಿ ಇದೇ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದರು. ಸ್ಪರ್ಧೆಯಲ್ಲಿದ್ದ ಇನ್ನೋರ್ವ ಭಾರತೀಯರಾದ ಸೀಮಾ (15 ನಿ, 35.06ಸೆ) 6ನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಪಿಟಿ ಉಷಾ ದಾಖಲೆ ಮುರಿದ ವಿದ್ಯಾ
ತಮಿಳುನಾಡಿನ ವಿದ್ಯಾ ರಾಮರಾಜ್ ಮಹಿಳೆಯರ 400 ಮೀ. ಹರ್ಡಲ್ಸ್ನಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟರು. 28 ವರ್ಷದ ವಿದ್ಯಾ ಜೀವನಶ್ರೇಷ್ಠ 54.75 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿದರು. ಈ ಮೂಲಕ ಅಥ್ಲೆಟಿಕ್ಸ್ ದಿಗ್ಗಜರಾದ ಪಿ.ಟಿ. ಉಷಾ ಅವರ ಹೆಸರಿನಲ್ಲಿದ್ದ ಸುಮಾರು 4 ದಶಕ ಹಳೆಯ ರಾಷ್ಟ್ರೀಯ ದಾಖಲೆ ಮುರಿದರು. ಯುಎಇಯ ಮರಿಯಮ್ ಕರೀಮ್ (54.31 ಸೆ) ಚಿನ್ನ ಮತ್ತು ಕಜಾಕ್ಸ್ತಾನದ ಅಡೆಲಿನಾ ಜೆಮ್ಸ್ (54.58ಸೆ) ಬೆಳ್ಳಿ ಜಯಿಸಿದರು. ಸ್ಪರ್ಧೆಯಲ್ಲಿದ್ದ ಇನ್ನೋರ್ವ ಭಾರತೀಯರಾದ ಅನು ರಾವನ್ (55.88ಸೆ) 5ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಪಿಟಿ ಉಷಾ 1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ನಲ್ಲಿ 55.42 ಸೆಕೆಂಡ್ಗಳಲ್ಲಿ ಓಡಿದ್ದು, ಇದುವರೆಗಿನ ರಾಷ್ಟ್ರೀಯ ದಾಖಲೆಯಾಗಿತ್ತು. ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಹಾಲಿ ಅಧ್ಯಕ್ಷಯಾಗಿರುವ ಪಿಟಿ ಉಷಾ, ವಿದ್ಯಾ ದಾಖಲೆಗೆ ಸಾಯಾಗಿದ್ದರು. ವಿದ್ಯಾಗೆ ಇದು ಕೂಟದ 2ನೇ ಪದಕ ಗೆಲುವಾಗಿದೆ. ಇದಕ್ಕೆ ಮುನ್ನ 4/400 ಮೀ. ಮಿಶ್ರ ರಿಲೇ ತಂಡದ ಭಾಗವಾಗಿ ಬೆಳ್ಳಿ ಜಯಿಸಿದ್ದರು.