

ಐಚಿ-ನಗೋಯಾ: ಏಷ್ಯನ್ ಗೇಮ್ಸ್ 20ನೇ ಆವೃತ್ತಿಯಲ್ಲಿ ಭಾರತ ಭಾನುವಾರ ಚಿನ್ನದ ಪದಕ ಗೆಲ್ಲುವ ಕೆಲ ಅವಕಾಶಗಳನ್ನು ಕೈಚೆಲ್ಲಿದ ನಡುವೆ ನಾಲ್ಕು ರಜತ ಮತ್ತು ಮೂರು ಕಂಚಿನ ಸಹಿತ ಏಳು ಪದಕದೊಂದಿಗೆ ಸಂಭ್ರಮಿಸಿದೆ. ಈ ಪೈಕಿ ಅಥ್ಲೆಟಿಕ್ಸ್ ಒಂದರಲ್ಲೇ ಭಾರತ ಐದು ಪದಕಗಳನ್ನು ಬಾಚಿಕೊಂಡಿತು. ಇದರೊಂದಿಗೆ ಮೊದಲ 8 ದಿನಗಳ ಪದಕ ಸ್ಪರ್ಧೆಯ ಬಳಿಕ ಭಾರತ 4 ಚಿನ್ನ, 16 ಬೆಳ್ಳಿ, 17 ಕಂಚಿನ ಸಹಿತ ಒಟ್ಟು 37 ಪದಕಗಳನ್ನು ಗೆದ್ದುಕೊಂಡಿದೆ. ಆದರೆ ಚಿನ್ನದ ಕೊರತೆಯಿಂದಾಗಿ ಪದಕಪಟ್ಟಿಯಲ್ಲಿ ಅಗ್ರ 10ರಿಂದ ಮತ್ತೆ ಹೊರಬಿದ್ದಿದ್ದು, 12ನೇ ಸ್ಥಾನಕ್ಕಿಳಿದಿದೆ. ಚಿನ್ನ ಗೆಲ್ಲುವ ಪ್ರಯತ್ನದಲ್ಲಿ ವಿಫಲರಾದ ಅನಾಹತ್ ಮತ್ತು ಅಭಯ್ ಸಿಂಗ್ ಸ್ಕ್ವಾಷ್ನಲ್ಲಿ ಅವಳಿ ಬೆಳ್ಳಿ ತಂದುಕೊಟ್ಟರೆ, ಸಂಜೆ ಅಥ್ಲೆಟಿಕ್ಸ್ನಲ್ಲಿ ಆನ್ಸಿ ಸೋಜನ್ ಮತ್ತು ಸವೇಶ್ ಕುಶಾರೆ ಕ್ರಮವಾಗಿ ಮಹಿಳೆಯರ ಲಾಂಗ್ಜಂಪ್ ಮತ್ತು ಪುರುಷರ ಹೈಜಂಪ್ ಫೈನಲ್ನಲ್ಲಿ ಕೊನೇಕ್ಷಣದಲ್ಲಿ ಅಗ್ರಸ್ಥಾನದಿಂದ ಕುಸಿದು, ಬೆಳ್ಳಿ ಪದಕಕ್ಕೆ ಸಮಾಧಾನ ಕಂಡರು. ಇನ್ನುಳಿದಂತೆ ಇತರ ಮೂವರು ಅಥ್ಲೀಟ್ಗಳಾದ ಹರಿತಾ ಭದ್ರ (200 ಮೀ.), ಪಾರುಲ್ ಚೌಧರಿ (ಸ್ಟೀಪಲ್ಚೇಸ್), ತೇಜಸ್ವಿನ್ ಶಂಕರ್ (ಡೆಕಾಥ್ಲಾನ್) ಕಂಚಿನ ಹಾರಕ್ಕೆ ಕೊರಳೊಡ್ಡಿದರು. ಅಥ್ಲೆಟಿಕ್ಸ್ನಲ್ಲಿ ಭಾರತ ಇದುವರೆಗೆ 6 ಬೆಳ್ಳಿ, 7 ಕಂಚಿನ ಸಹಿತ ಒಟ್ಟು 13 ಪದಕ ಗೆದ್ದುಕೊಂಡಿದ್ದರೂ, ಚಿನ್ನದ ಪದಕದ ಹುಡುಕಾಟ ಮಾತ್ರ ಮುಂದುವರಿದಿದೆ.
ಸರ್ವೇಶ್ ರಜತ ನೆಗೆತ
ಮಹಾರಾಷ್ಟ್ರದ ಸರ್ವೇಶ್ ಕುಶಾರೆ ಪುರುಷರ ಹೈಜಂಪ್ನಲ್ಲಿ ರಜತ ಪದಕದೊಂದಿಗೆ ಬೀಗಿದರು. ಅವರು ಕಳೆದ ಕಾಮನ್ವೆಲ್ತ್ ಗೇಮ್ಸ್ನಲ್ಲೂ ಬೆಳ್ಳಿ ಜಯಿಸಿದ್ದರು. 31 ವರ್ಷದ ಸರ್ವೇಶ್ 2.25 ಮೀ. ಎತ್ತರ ಜಿಗಿದು ಬೆಳ್ಳಿ ಜಯಿಸಿದರು. ಇಷ್ಟೇ ಎತ್ತರ ಜಿಗಿದ ಚೀನಾ ತೈಪೆಯ ಚಾವೊ ಸುವಾನ್ ಫು ಚಿನ್ನ ಒಲಿಸಿಕೊಂಡರು. ಚಾವೊ ಮೊದಲ ಯತ್ನದಲ್ಲೇ 2.25 ಮೀ. ಜಿಗಿದಿದ್ದರೆ, ಸರ್ವೇಶ್ 2ನೇ ಯತ್ನದಲ್ಲಿ ಈ ಎತ್ತರವನ್ನು ಯಶಸ್ವಿಯಾಗಿ ಹಾರಿದ್ದರಿಂದ ಬೆಳ್ಳಿಗೆ ಸಮಾಧಾನ ಕಂಡರು. 2.28 ಮೀ. ಜಿಗಿಯುವ ಮೂರು ಯತ್ನದಲ್ಲೂ ಇವರಿಬ್ಬರು ವಿಫಲರಾಗಿದರು.
ಆನ್ಸಿ ಸೋಜನ್ ರಜತ ಜಿಗಿತ
ಕೇರಳದ ಆನ್ಸಿ ಸೋಜನ್ ಮಹಿಳೆಯರ ಲಾಂಗ್ಜಂಪ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲುವಿನ ೇವರಿಟ್ ಆಗಿ ಕಂಡುಬಂದರೂ ಅಂತಿಮವಾಗಿ ರಜತ ಪದಕದ ಸಾಧನೆಗೆ ಸಮಾಧಾನ ಕಂಡರು. ಆಟೋರಿಾ ಚಾಲಕನ ಮಗಳಾಗಿರುವ 25 ವರ್ಷದ ಆನ್ಸಿ ಸೋಜನ್ ಅತ್ಯುತ್ತಮ 6.53 ಮೀ. ಜಿಗಿತದೊಂದಿಗೆ 2ನೇ ಸ್ಥಾನ ಪಡೆದರೆ, ಚೀನಾದ ಹುವಾಂಗ್ ಯಿಂಗ್ಯಿಂಗ್ 6.55 ಮೀ. ಎಸೆತದೊಂದಿಗೆ ಕೇವಲ 0.02 ಮೀ. ಅಂತರದಿಂದ ಚಿನ್ನದ ಪದಕ ಬಾಚಿಕೊಂಡರು. ಸ್ಪರ್ಧೆಯಲ್ಲಿದ್ದ ಮತ್ತೋರ್ವ ಭಾರತೀಯರಾದ ಶೈಲಿ ಸಿಂಗ್ 6.42 ಮೀ. ಜಿಗಿತದೊಂದಿಗೆ 4ನೇ ಸ್ಥಾನಕ್ಕೆ ತೃಪ್ತಿಪಟ್ಟು ಪದಕವಂಚಿತರಾದರು. 6.46 ಮೀ. ಜಿಗಿದ ಚೀನಾದ ಟಾನ್ ಮೆಂಗ್ಯಿ ಕಂಚು ಗೆದ್ದರು. ಮೊದಲ ಯತ್ನದಲ್ಲೇ 6.49 ಮೀ. ಜಿಗಿದ ಆನ್ಸಿ ಸೋಜನ್, ಹುವಾಂಗ್ರ ಕೊನೇ ಜಿಗಿತದವರೆಗೂ ಅಗ್ರಸ್ಥಾನದಲ್ಲಿದ್ದರು. ಆದರೆ ಹುವಾಂಗ್ 6ನೇ ಹಾಗೂ ಕೊನೇ ಜಿಗಿತದಲ್ಲಿ 6.55 ಮೀ. ಸಾಧಿಸಿ ಚಿನ್ನ ಕಸಿದರು. ಆನ್ಸಿ ಸೋಜನ್ 2023ರ ಏಷ್ಯಾಡ್ನಲ್ಲೂ ರಜತ ಪದಕ ಜಯಿಸಿದ್ದರು.
ಪಾರುಲ್ಗೆ ಕಂಚು
ಉತ್ತರ ಪ್ರದೇಶದ ಅನುಭವಿ ಓಟಗಾರ್ತಿ ಪಾರುಲ್ ಚೌಧರಿ ಮಹಿಳೆಯರ 3 ಸಾವಿರ ಮೀ. ಸ್ಟೀಪಲ್ಚೇಸ್ನಲ್ಲಿ 9 ನಿಮಿಷ, 8.67 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿ ಕಂಚಿನ ಪದಕ ಜಯಿಸಿದರು. ಅವರು ಕಳೆದ ಆವೃತ್ತಿಯಲ್ಲಿ ಇದೇ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಬಹರೇನ್ನ ವಿನ್ಫ್ರೆಡ್ ಯವಿ (9ನಿ, 4.36 ಸೆ) ಚಿನ್ನ, ಕಜಾಕ್ಸ್ತಾನದ ನೋರಾ ಜೆರುಟೊ (9ನಿ, 6.82ಸೆ) ಬೆಳ್ಳಿ ಜಯಿಸಿದರು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಮತ್ತೋರ್ವ ಓಟಗಾರ್ತಿ ಅಂಕಿತಾ (9ನಿ, 19.24ಸೆ) 4ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರಿಂದ ಭಾರತ ಡಬಲ್ ಪೋಡಿಯಂ ಫಿನಿಷ್ನಿಂದ ವಂಚಿತವಾಯಿತು.
ತೇಜಸ್ವಿನ್ ಶಂಕರ್ಗೆ ಮತ್ತೆ ಕಂಚು
ಭಾರತದ ಅಥ್ಲೆಟಿಕ್ಸ್ ತಾರೆ ತೇಜಸ್ವಿನ್ ಶಂಕರ್ ಕಾಮನ್ವೆಲ್ತ್ ಗೇಮ್ಸ್ ಬಳಿಕ ಏಷ್ಯಾಡ್ನಲ್ಲೂ ಡೆಕಾಥ್ಲಾನ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಅವರು ಭಾನುವಾರ ನಡೆದ ಕೊನೆಯ 1,500 ಮೀ. ಓಟದಲ್ಲಿ ಅಗ್ರಸ್ಥಾನ ಪಡೆಯುವ ಮೂಲಕ ಒಟ್ಟು 7,934 ಅಂಕ ಗಳಿಸಿ ಕಂಚು ಒಲಿಸಿಕೊಂಡರು. ಮೊದಲ ದಿನದ ಸ್ಪರ್ಧೆಗಳ ಬಳಿಕ ಅವರು 4,338 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದರು. ಅವರು ಕಳೆದ ಆವೃತ್ತಿಯಲ್ಲಿ ಬೆಳ್ಳಿ ಜಯಿಸಿದ್ದರು.
ಹರಿತಾಗೆ ಕಂಚಿನ ಗರಿ
ಮಹಾರಾಷ್ಟ್ರದ ಹರಿತಾ ಭದ್ರ ಮಹಿಳೆಯರ 200 ಮೀ. ಓಟದಲ್ಲಿ ಕಂಚಿನ ಪದಕಕ್ಕೆ ಮುತ್ತಿಟ್ಟರು. ಭಾನುವಾರ ನಡೆದ ಫೈನಲ್ ಸ್ಪರ್ಧೆಯಲ್ಲಿ ಅವರು 23.20 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿದರು. 4ನೇ ಸ್ಥಾನಿ ಜಪಾನ್ನ ಇಡೊ ಅಬಿಗೆರುುಕಾಗಿಂತ (23.21ಸೆ) 23 ವರ್ಷದ ಹರಿತಾ ಕೇವಲ 0.01 ಸೆಕೆಂಡ್ ವೇಗವಾಗಿ ಗುರಿ ತಲುಪಿ ಪದಕ ಒಲಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಸಿಂಗಾಪುರದ ಶಾಂತಿ ಪೆರೀರಾ (22.78ಸೆ) ಚಿನ್ನ ಮತ್ತು ಚೀನಾದ ಚೆನ್ ಯುಜಿ (22.93ಸೆ) ಬೆಳ್ಳಿ ಗೆದ್ದರು. ಸ್ಪರ್ಧೆಯಲ್ಲಿದ್ದ ಮತ್ತೋರ್ವ ಭಾರತೀಯರಾದ ಉನ್ನತಿ ಅಯ್ಯಪ್ಪ ಬೊಲ್ಲಂಡ 23.48 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿ 6ನೇ ಸ್ಥಾನಕ್ಕೆ ತೃಪ್ತಿಪಟ್ಟರು.