ಏಷ್ಯನ್​ ಗೇಮ್ಸ್​ನಲ್ಲಿ ಮತ್ತೊಂದು ಬೆಳ್ಳಿ: ಟೇಬಲ್​ ಟೆನಿಸ್​ನಲ್ಲಿ ಪಾಕಿಸ್ತಾನಕ್ಕೆ​ ಹೀನಾಯ ಸೋಲುಣಿಸಿದ ಭಾರತ | Asian Games

ಏಷ್ಯನ್​ ಗೇಮ್ಸ್​ 2026
ಏಷ್ಯನ್​ ಗೇಮ್ಸ್​ 2026
Published on

ಪ್ರಮುಖ ಮುಖ್ಯಾಂಶಗಳು

  • ಏಷ್ಯನ್ ಗೇಮ್ಸ್‌ನಲ್ಲಿ ಮುಂದುವರಿದ ಭಾರತದ ಪದಕ ಓಟ
  • ಶೂಟಿಂಗ್​ನಲ್ಲಿ ಮತ್ತೊಂದು ಬೆಳ್ಳಿ ಪದಕ
  • ಪಾಕಿಸ್ತಾನ ವಿರುದ್ಧ ಟೇಬಲ್ ಟೆನಿಸ್​ನಲ್ಲಿ ಭಾರತಕ್ಕೆ 3-0 ಅಂತರದ ಭರ್ಜರಿ ಗೆಲುವು
Asian Games 2026: ಪ್ರಸಕ್ತ ಆತಿಥೇಯ ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಎರಡನೇ ದಿನದಲ್ಲಿ ಭಾರತದ ಪದಕದ ಓಟ ಎಗ್ಗಿಲ್ಲದೆ ಸಾಗಿದೆ. ಟೇಬಲ್​ ಟೆನಿಸ್​ನಲ್ಲಿ 3-0 ಅಂತರದಿಂದ ಪಾಕಿಸ್ತಾನಕ್ಕೆ ಹೀನಾಯ ಸೋಲುಣಿಸಿರುವ ಭಾರತ, ಶೂಟಿಂಗ್​ನಲ್ಲಿ ಬೆಳ್ಳಿ ಪದಕವನ್ನು ಗೆದ್ದು ಬೀಗಿದೆ.
ಶೂಟಿಂಗ್‌ನಲ್ಲಿ ಪುರುಷರ 10 ಮೀಟರ್ ಏರ್ ರೈಫಲ್ ಟೀಮ್ ಈವೆಂಟ್‌ನಲ್ಲಿ ಭಾರತ ಬೆಳ್ಳಿ ಪದಕವನ್ನು ಗೆದ್ದಿದೆ. ಇದರೊಂದಿಗೆ ಭಾರತ ಇದುವರೆಗೆ ಮೂರು ಬೆಳ್ಳಿ ಪದಕ ಸ್ವೀಕರಿಸಿದ್ದು, ಶೂಟಿಂಗ್‌ನಲ್ಲಿ ಹಿಮಾಂಶು ಧಿಲ್ಲೋನ್, ಪಾರ್ಥ್ ಮಾನೆ ಮತ್ತು ರುದ್ರಮಾನ್ಶ್ ಪಾಟೀಲ್ ಅವರನ್ನೊಳಗೊಂಡ ಭಾರತ ತಂಡ 10 ಮೀಟರ್ ಏರ್ ರೈಫಲ್ ಟೀಮ್ ಈವೆಂಟ್‌ನಲ್ಲಿ ಎರಡನೇ ಸ್ಥಾನ ಗಳಿಸಿದೆ. ಈ ಗೆಲುವಿನೊಂದಿಗೆ ಈಗ ದೇಶದ ಖಾತೆಗೆ ಮತ್ತೊಂದು ಬೆಳ್ಳಿ ಪದಕ ಸೇರ್ಪಡೆಗೊಂಡಿದೆ.

ಟೇಬಲ್ ಟೆನಿಸ್‌ನಲ್ಲಿ ಪಾಕ್​ಗೆ ಹೀನಾಯ ಸೋಲು

ಮಹಿಳೆಯರ ಟೇಬಲ್ ಟೆನಿಸ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಎಫ್ ಗುಂಪಿನ ಪಂದ್ಯದಲ್ಲಿ, ಭಾರತ 3-0 ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಭಾರತ ಮಹಿಳಾ ತಂಡ ಕ್ವಾರ್ಟರ್ ಫೈನಲ್‌ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ.

ಭಾರತಕ್ಕೆ ಹೆಚ್ಚಿದ ಪದಕ ನಿರೀಕ್ಷೆ

ಏಷ್ಯನ್ ಗೇಮ್ಸ್‌ನ ಎರಡನೇ ದಿನ ಭಾರತ ಹಲವಾರು ಕ್ರೀಡೆಗಳಲ್ಲಿ ಅಖಾಡಕ್ಕಿಳಿದಿದೆ. ಶೂಟಿಂಗ್ ಹೊರತಾಗಿ, ಭಾರತೀಯ ಕ್ರೀಡಾಪಟುಗಳು ಟೇಬಲ್ ಟೆನ್ನಿಸ್, ಮಿಕ್ಸಡ್​ ಮಾರ್ಷಲ್ ಆರ್ಟ್ಸ್ (ಎಂಎಂಎ), ಹಾಕಿ, ಕಬಡ್ಡಿ, ಬ್ಯಾಡ್ಮಿಂಟನ್, ಬಾಕ್ಸಿಂಗ್ ಮತ್ತು ಇತರ ಸ್ಪರ್ಧೆಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಎಂಎಂಎಯಲ್ಲಿ ಸುಚಿಕಾ ತರಿಯಾಲ್ ಅವರು ಸೆಮಿಫೈನಲ್‌ನಲ್ಲಿ ಸಿಂಗಾಪುರದ ಟಿಯೊ ಹುಯಿ ಹೂನ್ ಅವರನ್ನು ಎದುರಿಸಲಿದ್ದಾರೆ.
ಸೆಮಿಫೈನಲ್ ತಲುಪುವ ಮೂಲಕ ಸುಚಿಕಾ ಈಗಾಗಲೇ ಕನಿಷ್ಠ ಕಂಚಿನ ಪದಕಕ್ಕೆ ಮುತ್ತಿಡುವುದಂತು ಪಕ್ಕಾ ಎಂಬ ಗ್ಯಾರಂಟಿ ಸಿಕ್ಕಿದೆ. ಫೈನಲ್ ತಲುಪಿದರೆ ಚಿನ್ನದ ಪದಕಕ್ಕೆ ಪೈಪೋಟಿ ನಡೆಸುವ ಅವಕಾಶವಿದೆ. ಇನ್ನು, ಮಹಿಳಾ ಹಾಕಿಯಲ್ಲಿ ಭಾರತವು ಇಂಡೋನೇಷ್ಯಾವನ್ನು ಎದುರಿಸಲಿದೆ. ಪುರುಷರ ಕಬಡ್ಡಿಯಲ್ಲಿ ಜಪಾನ್ ವಿರುದ್ಧ ಮತ್ತು ಮಹಿಳೆಯರ ಕಬಡ್ಡಿಯಲ್ಲಿ ಬಾಂಗ್ಲಾದೇಶವನ್ನು ಭಾರತ ತಂಡ ಎದುರಿಸುತ್ತಿದೆ.
ಬ್ಯಾಡ್ಮಿಂಟನ್​ನಲ್ಲಿ ಭಾರತ ಪುರುಷರ ತಂಡ ಬಾಂಗ್ಲಾದೇಶ ವಿರುದ್ಧ ಪೈಪೋಟಿ ನಡೆಸುತ್ತಿದ್ದು, ಬಾಕ್ಸಿಂಗ್‌ನಲ್ಲಿ ಸುಮಿತ್ 70 ಕೆಜಿ ವಿಭಾಗದಲ್ಲಿ ಬಂಜಾಂಗ್ ಸಿಂಸಿರಿ ವಿರುದ್ಧ ಸ್ಪರ್ಧೆಗೆ ಇಳಿದಿದ್ದಾರೆ. ಇಲ್ಲಿಯೂ ಮತ್ತೊಂದು ಪದಕ ಬರುವ ನಿರೀಕ್ಷೆಗಳು ದುಪ್ಪಟ್ಟಾಗಿವೆ.

ಮೊದಲ ದಿನ 2 ಬೆಳ್ಳಿ ಪದಕ

ಏಷ್ಯನ್ ಗೇಮ್ಸ್ 2026ರ ಮೊದಲ ದಿನದಂದು ಶೂಟಿಂಗ್‌ನಲ್ಲಿ ಭಾರತ ಎರಡು ಬೆಳ್ಳಿ ಪದಕಗಳನ್ನು ಬಾಚಿಕೊಂಡಿತು. ಮಹಿಳೆಯರ 10 ಮೀಟರ್ ಏರ್ ರೈಫಲ್ ವೈಯಕ್ತಿಕ ಸ್ಪರ್ಧೆಯಲ್ಲಿ ಎಲವೆನಿಲ್ ವಲರಿವನ್ ಬೆಳ್ಳಿ ಗೆದ್ದರೆ, ಎಲವೆನಿಲ್ ವಲರಿವನ್, ಸೋನಮ್ ಮಸ್ಕರ್ ಮತ್ತು ವಿಧರ್ಸಾ ವಿನೋದ್ ತಂಡವು ಮತ್ತೊಂದು ಬೆಳ್ಳಿ ಪದಕವನ್ನು ಗೆದ್ದರು. ಇದೀಗ ಪುರುಷರ ಶೂಟಿಂಗ್ ತಂಡ ಮತ್ತೊಂದು ಬೆಳ್ಳಿ ಜಯಿಸುವುದರೊಂದಿಗೆ ಭಾರತದ ಪದಕಗಳ ಸಂಖ್ಯೆ ಮೂರಕ್ಕೆ ತಲುಪಿದೆ. ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಹೆಚ್ಚು ಪದಕ ಗೆಲ್ಲಲು ಎರಡನೇ ದಿನದ ಪೈಪೋಟಿ ಮುಂದುವರಿದಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net