ಮಳೆ ಅಡಚಣೆ ನಡುವೆ ಏಷ್ಯಾಕಪ್​; ಲಾಂಛನ ಬದಲಾಯಿಸಿ ಟ್ರೋಲ್​!

asia cup logo web
Published on

ಬೆಂಗಳೂರು: ಏಕದಿನ ವಿಶ್ವಕಪ್​ ಸಿದ್ಧತೆಗೆ ಮಹತ್ವದ ವೇದಿಕೆ ಎನಿಸಿರುವ ಏಷ್ಯಾಕಪ್​ನಲ್ಲಿ ಈಗ ತಂಡಗಳ ಬಲಾಬಲಗಳಿಗಿಂತ ಮಳೆಯೇ ದೊಡ್ಡ ಸವಾಲೆನಿಸಿದೆ. ಶ್ರೀಲಂಕಾದಲ್ಲಿ ನಿಗದಿಯಾಗಿರುವ ಟೂರ್ನಿಯ ಪ್ರತಿ ಪಂದ್ಯವನ್ನೂ ಮಳೆ ಭೀತಿಯ ನಡುವೆ ಆಡಲಾಗುತ್ತಿದೆ. ಹೀಗಾಗಿ ದ್ವೀಪರಾಷ್ಟ್ರದಲ್ಲಿ ಮಳೆಗಾಲದ ಸಮಯದಲ್ಲಿ ಕ್ರಿಕೆಟ್​ ಟೂರ್ನಿ ಏರ್ಪಡಿಸಿರುವುದಕ್ಕೆ ಕ್ರಿಕೆಟ್​ ಪ್ರೇಮಿಗಳು, ಏಷ್ಯಾಕಪ್​ ಲಾಂಛನವನ್ನೇ ಬದಲಾಯಿಸಿ ಟ್ರೋಲ್​ ಮಾಡುತ್ತಿದ್ದಾರೆ.

ಏಷ್ಯಾಕಪ್​ ಲಾಂಛನದಲ್ಲಿ ಬ್ಯಾಟ್ಸ್​ಮನ್​ ಓರ್ವ ಬ್ಯಾಟ್​ ಹಿಡಿದು ಬಿರುಸಿನ ಹೊಡೆತವಾಡುವ ಚಿತ್ರವಿದೆ. ಮಳೆ ಅಡಚಣೆಯ ನಡುವೆ ಪಂದ್ಯ ನಡೆಯುತ್ತಿರುವುದರಿಂದ ಅದನ್ನೇ ಈಗ ಕೊಡೆ (ಛತ್ರಿ) ಹಿಡಿದು ಬ್ಯಾಟರ್​ ಆಡುವಂತೆ ತಿದ್ದುಪಡಿ ಮಾಡಲಾಗಿದೆ. ಈ ಮೂಲಕ ಮಳೆ ನಡುವೆ ಕ್ರಿಕೆಟ್​ ಪಂದ್ಯ ನಡೆಯುತ್ತಿರುವುದನ್ನು ತಮಾಷೆಯಾಗಿ ಚಿತ್ರಿಸಲಾಗಿದೆ.

ಏಷ್ಯಾಕಪ್​ನಲ್ಲಿ ಶ್ರೀಲಂಕಾದಲ್ಲಿ ಮೊದಲಿಗೆ ಪಲ್ಲೆಕಿಲೆಯಲ್ಲಿ ನಿಗದಿಯಾಗಿದ್ದ ಪಂದ್ಯಗಳಿಗೆ ಮಳೆ ಕಾಡಿದ್ದರೆ, ನಂತರದ ಪಂದ್ಯಗಳು ಕೊಲಂಬೊದಲ್ಲಿ ನಿಗದಿಯಾಗಿದ್ದರೂ ಮಳೆ ಭೀತಿಯಿಂದ ಮುಕ್ತವಾಗಿರಲಿಲ್ಲ. ಹೀಗಾಗಿ ಸದ್ಯ ಮಳೆ ಲೆಕ್ಕಾಚಾರವೇ ಟೂರ್ನಿಯನ್ನು ಬಹುತೇಕ ಆವರಿಸಿದ್ದು, ಡಕ್ವರ್ತ್​-ಲೂಯಿಸ್​-ಸ್ಟರ್ನ್​ ನಿಯಮವೂ ಹೆಚ್ಚಾಗಿ ಬಳಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net