ಪಾಕಿಸ್ತಾನವನ್ನು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಿಂದ ಹೊರದಬ್ಬಿದ ಭಾರತ

hh
Published on

ಚೆನ್ನೈ: ಆತಿಥೇಯ ಭಾರತ ಹಾಕಿ ತಂಡ 7ನೇ ಆವೃತ್ತಿಯ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಅಜೇಯವಾಗಿ ಸೆಮಿೈನಲ್‌ಗೆ ಲಗ್ಗೆಯಿಟ್ಟಿದೆ. ನಾಯಕ ಹರ್ಮಾನ್‌ಪ್ರೀತ್ ಸಿಂಗ್ (15, 23ನೇ ನಿಮಿಷ) ಸಿಡಿಸಿದ ಅವಳಿ ಗೋಲುಗಳ ನೆರವಿನಿಂದ ಭಾರತ ತಂಡ ಬುಧವಾರ ನಡೆದ ತನ್ನ 5ನೇ ಹಾಗೂ ಕೊನೇ ಲೀಗ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 4-0 ಅಂತರದಿಂದ ಮಣಿಸಿತು. ಇದರೊಂದಿಗೆ ಭಾರತ ಒಟ್ಟು 13 ಅಂಕ ಕಲೆಹಾಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡರೆ, ಪಾಕ್ ಟೂರ್ನಿಯಿಂದ ಹೊರಬಿದ್ದಿತು.

ಮೇಯರ್ ರಾಧಾಕೃಷ್ಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಉತ್ತಮ ಪೈಪೋಟಿ ಏರ್ಪಟ್ಟಿತು. ಆರಂಭಿಕ ನಿಮಿಷದಲ್ಲಿ ಪಾಕ್‌ಗೆ ಲಭಿಸಿದ ಪೆನಾಲ್ಟಿ ಅವಕಾಶಕ್ಕೆ ಗೋಲು ಕೀಪರ್ ಕೃಷ್ಣ ಬಹದ್ದೂರ್ ಪಾಠಕ್ ತಡೆಗೋಡೆಯಾದರು. ಮೊದಲ ಕ್ವಾರ್ಟರ್‌ನ ಮುಕ್ತಾಯದ ಸಮಯದಲ್ಲಿ ಭಾರತಕ್ಕೆ ಪಂದ್ಯದಲ್ಲಿ ದೊರೆತ ಮೊದಲ ಪೆನಾಲ್ಟಿ ಕಾರ್ನರ್‌ನಲ್ಲಿ ಹರ್ಮಾನ್‌ಪ್ರೀತ್ ಗೋಲು ಗಳಿಸಿ ಮುನ್ನಡೆ ಒದಗಿಸಿದರು. 2ನೇ ಕ್ವಾರ್ಟರ್‌ನಲ್ಲಿ ಹರ್ಮಾನ್‌ಪ್ರೀತ್ 2ನೇ ಪೆನಾಲ್ಟಿ ಗೋಲು ದಾಖಲಿಸಿ ಭಾರತದ ಮುನ್ನಡೆ ಹಿಗ್ಗಿಸಿದರು. ಮೊದಲಾರ್ಧದಲ್ಲಿ ಭಾರತ 2-0 ಮುನ್ನಡೆ ಕಾಯ್ದುಕೊಂಡಿತು. ದ್ವಿತೀಯಾರ್ಧದಲ್ಲಿ ಜುಗ್ರಾಜ್ ಸಿಂಗ್ (36) ಮತ್ತು ಆಕಾಶ್‌ದೀಪ್ ಸಿಂಗ್ (55) ಗೋಲು ಗಳಿಸಿ ಗೆಲುವಿನ ಅಂತರ ಹಿಗ್ಗಿಸಿದರು. ಇದರೊಂದಿಗೆ ಭಾರತ ಟೂರ್ನಿಯಲ್ಲಿ 17 ಗೋಲು ದಾಖಲಿಸಿದ ಸಾಧನೆ ಮಾಡಿತು.

ಉಪಾಂತ್ಯಕ್ಕೆ ಕೊರಿಯಾ, ಜಪಾನ್

ಮಲೇಷ್ಯಾ ತಂಡ 1-0ರಿಂದ ಹಾಲಿ ಚಾಂಪಿಯನ್ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನ ಖಚಿತ ಪಡಿಸಿಕೊಂಡಿತು. ಸೋಲಿನ ನಡುವೆ ಕೊರಿಯಾ 3ನೇ ಸ್ಥಾನಿಯಾಗಿ ಸೆಮಿೈನಲ್‌ಗೇರಿತು. ಇನ್ನೊಂದೆಡೆ ಜಪಾನ್ ತಂಡ 2-1ರಿಂದ ಚೀನಾ ತಂಡವನ್ನು ಮಣಿಸಿತು ಮತ್ತು ಭಾರತಕ್ಕೆ ಪಾಕ್ ಶರಣಾಗುವುದರೊಂದಿಗೆ ಸೆಮೀಸ್ ಪ್ರವೇಶ ಖಚಿತಪಡಿಸಿಕೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net