ASIAN GAMES: ಪಿಸ್ತೂಲ್​ ಶೂಟಿಂಗ್​ನಲ್ಲಿ ಪುರುಷರಿಗೂ ನಿರಾಸೆ; 4ನೇ ಸ್ಥಾನದೊಂದಿಗೆ ಭಾರತ ಪದಕ ವಂಚಿತ!

ಭಾರತ ತಂಡ 1,730 ಅಂಕ ಗಳಿಸಿತು. ಚೀನಾ (1743) ಚಿನ್ನ, ಇಂಡೋನೇಷ್ಯಾ (1743) ಬೆಳ್ಳಿ ಮತ್ತು ಜಪಾನ್​ (1730) ಕಂಚಿನ ಪದಕ ಜಯಿಸಿತು.
asian games
ಪಿಸ್ತೂಲ್​ ಶೂಟಿಂಗ್ ಟೀಮ್​ಸಂಗ್ರಹ ಚಿತ್ರ
Published on: 

ಐಚಿ-ನಗೋಯಾ: ಮನು ಭಾಕರ್​ ಸಾರಥ್ಯದ ಭಾರತ ಮಹಿಳಾ ತಂಡದ ನಿರಾಶಾದಾಯಕ ನಿರ್ವಹಣೆಯ ಬಳಿಕ ಭಾರತದ ಪುರುಷರ ಪಿಸ್ತೂಲ್​ ತಂಡವೂ ಪದಕ ಗೆಲ್ಲದೆ ನಿರಾಸೆ ಮೂಡಿಸಿದೆ. ಕಮಲ್​ಜೀತ್​, ಆಕಾಶ್​ ಭಾರದ್ವಾಜ್​ ಮತ್ತು ಕನ್ನಡಿಗ ಕೇದಾರಲಿಂಗ ಬಾಲಕೃಷ್ಣ ಉಚಗಾಂವೆ ಒಳಗೊಂಡ ಭಾರತ ತಂಡ ಗುರುವಾರ ನಡೆದ ಪುರುಷರ 10 ಮೀ. ಏರ್​ ಪಿಸ್ತೂಲ್​ ವಿಭಾಗದಲ್ಲಿ 4ನೇ ಸ್ಥಾನದೊಂದಿಗೆ ಪದಕ ವಂಚಿತವಾಯಿತು.

ಭಾರತ ತಂಡ 1,730 ಅಂಕ ಗಳಿಸಿತು. ಚೀನಾ (1743) ಚಿನ್ನ, ಇಂಡೋನೇಷ್ಯಾ (1743) ಬೆಳ್ಳಿ ಮತ್ತು ಜಪಾನ್​ (1730) ಕಂಚಿನ ಪದಕ ಜಯಿಸಿತು. ಭಾರತೀಯ ಶೂಟರ್​ಗಳು ವೈಯಕ್ತಿಕ ವಿಭಾಗದಲ್ಲೂ ಫೈನಲ್​ಗೇರಲು ವಿಫಲರಾದರು. ಕಮಲ್​ಜೀತ್​ 9, ಆಕಾಶ್​ 11 ಮತ್ತು ಕೇದಾರಲಿಂಗ 35ನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಟಿಟಿಯಲ್ಲಿ ಭಾರತೀಯರ ಮುನ್ನಡೆ

ಟೇಬಲ್​ ಟೆನಿಸ್​ ಸ್ಪರ್ಧೆಯಲ್ಲಿ ಭಾರತೀಯರು ಗುರುವಾರ ಗೆಲುವು ದಾಖಲಿಸಿದ್ದಾರೆ. ಮಹಿಳಾ ಡಬಲ್ಸ್​ ವಿಭಾಗದಲ್ಲಿ ಶ್ರೀಜಾ ಅಕುಲಾ-ಸಿಂಡ್ರೆಲಾ ದಾಸ್​ ಮತ್ತು ಕನ್ನಡತಿ ಯಶಸ್ವಿ ಘೋರ್ಪಡೆ-ದಿವ್ಯಾ ಚಿತಾಲೆ ಜೋಡಿ ಪ್ರಿ ಕ್ವಾರ್ಟರ್​ಫೈನಲ್​ ಪ್ರವೇಶಿಸಿದೆ. ಪುರುಷರ ಸಿಂಗಲ್ಸ್​ ವಿಭಾಗದಲ್ಲಿ ಮಾನುಷ್​ ಶಾ ಮತ್ತು ಮಾನವ್​ ಠಕ್ಕರ್​ ಮುನ್ನಡೆದಿದ್ದಾರೆ. ಯಶಸ್ವಿನಿ-ದಿವ್ಯಾ ಜೋಡಿ ಇರಾನ್​ನ ಸೆತಯೇಶ್​ ಇಲೌಖನಿ-ಮಹ್ಶಿದ್​ ಅಸ್ತರಿ ವಿರುದ್ಧ 3-0ಯಿಂದ ಗೆದ್ದರೆ, ಶ್ರೀಜಾ-ಸಿಂಡ್ರೆಲಾ ಜೋಡಿ ಮಂಗೋಲಿಯಾದ ಬುರೆನ್​ರ್ಜಗಲ್​ ಸಂಜಾ-ಬೊಲೊರ್​ ಎರ್ಡೆನ್​ ಬಟ್ಮುಖ್​ ಜೋಡಿಯನ್ನು 3-0ಯಿಂದ ಮಣಿಸಿತು. ವಿಶ್ವ ನಂ. 43 ಮಾನುಷ್​ 32ರ ಘಟ್ಟದಲ್ಲಿ ಮಲೇಷ್ಯಾದ ವೊಂಗ್​ ಖಿ ಶೆನ್​ ವಿರುದ್ಧ 4-0ಯಿಂದ ಗೆದ್ದರೆ, ವಿಶ್ವ ನಂ. 48 ಮಾನವ್​ ಮೊದಲ ಸುತ್ತಿನಲ್ಲಿ ಬೈ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net