

ಕಕಮಿಗಹರ: ಭರ್ಜರಿ ಫಾರ್ಮ್ನಲ್ಲಿರುವ ಸ್ಟ್ರೈಕರ್ ದಿಲ್ಪ್ರೀತ್ ಸಿಂಗ್ (10, 26, 32ನೇ ನಿಮಿಷ) ಸಿಡಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಭಾರತದ ಪುರುಷರ ತಂಡ ಏಷ್ಯಾಡ್ ಹಾಕಿ ಸ್ಪರ್ಧೆಯ ತನ್ನ 3ನೇ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 8-2 ಅಂತರದಿಂದ ಗೆಲುವು ದಾಖಲಿಸಿದೆ. ಹ್ಯಾಟ್ರಿಕ್ ಗೆಲುವಿನೊಂದಿಗೆ ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿರುವ ಹರ್ಮಾನ್ಪ್ರೀತ್ ಪಡೆ ಸೆಮಿಫೈನಲ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡಿದೆ.
ಗುರುವಾರ ನಡೆದ ಪಂದ್ಯದ ಮೊದಲಾರ್ಧದಲ್ಲಿ ಭಾರತ 5-0 ಮುನ್ನಡೆ ಸಾಧಿಸಿತ್ತು. ಅಭಿಷೇಕ್ (15, 38) 2 ಗೋಲು ಬಾರಿಸಿದರೆ, ಶಿವಾನಂದ ಲಾಕ್ರಾ (4), ನಾಯಕ ಹರ್ಮಾನ್ಪ್ರೀತ್ ಸಿಂಗ್ (11), ರಾಜಿಂದರ್ ಸಿಂಗ್ (60) ತಲಾ ಒಂದು ಬಾರಿಸಿದರು. ಕೊರಿಯಾ ಪರ ಕಿಮ್ ಜೇಯಿ ಹೋ (42) ಮತ್ತು ಕಿಮ್ ಯೊಂಗ್ ಬೊಕ್ (52) ತಲಾ ಒಂದು ಗಳಿಸಿ ಸೋಲಿನ ಅಂತರ ತಗ್ಗಿಸಿದರು.
ಹಾಲಿ ಚಾಂಪಿಯನ್ ಭಾರತ ತಂಡ ತನ್ನ ಮುಂದಿನ ಪಂದ್ಯದಲ್ಲಿ ಶನಿವಾರ ಆತಿಥೇಯ ಜಪಾನ್ ವಿರುದ್ಧ ಆಡಲಿದೆ. ಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ತಂಡ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ಗೆ ನೇರಅರ್ಹತೆ ಗಳಿಸುವ ಅವಕಾಶವನ್ನು ಹೊಂದಿದೆ.