ಚೀನಾ ಕುಸ್ತಿಪಟುಗಳಿಗೆ ವೀಸಾ ನಿರಾಕರಣೆ: ಮಾರಕ ಕೊರೊನಾ ವೈರಸ್ ಭೀತಿ | ದೆಹಲಿಯಲ್ಲಿ ಏಷ್ಯಾ ಕುಸ್ತಿ ಸ್ಪರ್ಧೆಗೆ ಗೈರು

2019_7image
Published on

ನವದೆಹಲಿ: ಮಾರಕ ಕರೊನಾ ಸೋಂಕಿನ ಭೀತಿಯಿಂದಾಗಿ ಚೀನಾದ ಕುಸ್ತಿ ತಂಡಕ್ಕೆ ಭಾರತ ವೀಸಾ ನಿರಾಕರಿಸಿದೆ. ಇದರಿಂದಾಗಿ ಚೀನಾ ತಂಡ ಮಂಗಳವಾರದಿಂದ ನವದೆಹಲಿಯಲ್ಲಿ ನಡೆಯಲಿರುವ ಏಷ್ಯನ್ ಕುಸ್ತಿ ಚಾಂಪಿಯನ್​ಷಿಪ್​ನಿಂದ ಹೊರಗುಳಿಯಲಿದೆ.

ಚೀನಾ ತಂಡ ಕೂಟದಲ್ಲಿ 40 ಪೈಲ್ವಾನರ ಬಲಿಷ್ಠ ತಂಡವನ್ನು ಕಣಕ್ಕಿಳಿಸಬೇಕಾಗಿತ್ತು. ಆದರೆ ಕೇಂದ್ರ ಸರ್ಕಾರ, ಕರೊನಾ ಭೀತಿಯಿಂದಾಗಿ ಚೀನಾ ಪ್ರಜೆಗಳಿಗೆ ವೀಸಾ ನಿರಾಕರಿಸುತ್ತಿದ್ದು, ಅಲ್ಲಿನ ಕುಸ್ತಿ ತಂಡಕ್ಕೂ ಅದನ್ನೇ ಅನ್ವಯಿಸಿದೆ ಎಂದು ಭಾರತೀಯ ಕುಸ್ತಿ ಒಕ್ಕೂಟದ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ತಿಳಿಸಿದ್ದಾರೆ.

ಆದರೆ ಚೀನಾಗೆ ವೀಸಾ ನಿರಾಕರಿಸಿದ್ದರಿಂದ ಭಾರತದ ಭವಿಷ್ಯದ ಕ್ರೀಡಾ ಆತಿಥ್ಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇಲ್ಲ. ಇದೊಂದು ಜಾಗತಿಕ ಆರೋಗ್ಯ ವಿಚಾರದಿಂದ ಕೈಗೊಳ್ಳಲಾಗಿರುವ ನಿರ್ಧಾರವಾಗಿರುವುದು ಇದಕ್ಕೆ ಕಾರಣ. ಈ ಕೂಟಕ್ಕೆ ಬೇರೆ ಯಾವುದಾದರು ದೇಶ ಆತಿಥ್ಯ ವಹಿಸಿದ್ದರೂ ಚೀನಾ ಕುಸ್ತಿಪಟುಗಳಿಗೆ ವೀಸಾ ನಿರಾಕರಿಸುತ್ತಿತ್ತು. ಕೂಟದಲ್ಲಿ ಪಾಲ್ಗೊಳ್ಳುವ ಇತರ ಕುಸ್ತಿಪಟುಗಳ ಆರೋಗ್ಯದ ಕಾಳಜಿಯೂ ಇದರಲ್ಲಿ ಅಡಗಿದೆ ಎಂದು ತೋಮರ್ ಹೇಳಿದ್ದಾರೆ. ಕೂಟದಲ್ಲಿ ಪಾಲ್ಗೊಳ್ಳಲು ಭಾರತ, ಪಾಕಿಸ್ತಾನದ ಕುಸ್ತಿಪಟುಗಳಿಗೆ ವೀಸಾ ನೀಡಿದೆ. 2019ರ ಪುಲ್ವಾಮಾ ದಾಳಿ ಬಳಿಕ ಭಾರತಕ್ಕೆ ಆಗಮಿಸುತ್ತಿರುವ ಪಾಕಿಸ್ತಾನದ ಮೊದಲ ಕ್ರೀಡಾ ತಂಡ ಇದಾಗಿದೆ. ಟೋಕಿಯೊ ಒಲಿಂಪಿಕ್ಸ್​ಗೆ ಪೂರ್ವಭಾವಿಯಾಗಿ ಚೀನಾದಲ್ಲಿ ನಡೆಯಬೇಕಿದ್ದ ಹಲವು ಕ್ರೀಡಾಕೂಟಗಳು ಈಗಾಗಲೆ ಕರೊನಾ ಭೀತಿಯಿಂದಾಗಿ ರದ್ದುಗೊಂಡಿವೆ ಅಥವಾ ಮುಂದೂಡಲ್ಪಟ್ಟಿವೆ.

ಇಂದಿನಿಂದ ಏಷ್ಯನ್ ಕುಸ್ತಿ ಸ್ಪರ್ಧೆ ಭಜರಂಗ್, ವಿನೇಶ್ ಪೋಗಟ್ ಕಣಕ್ಕೆ: ಏಷ್ಯನ್ ಕುಸ್ತಿ ಚಾಂಪಿಯನ್​ಷಿಪ್ ಮಂಗಳವಾರ ಆರಂಭವಾಗಲಿದ್ದು, ಭಜರಂಗ್ ಪೂನಿಯಾ ಪುರುಷರ 65 ಕೆಜಿ ವಿಭಾಗ ಮತ್ತು ವಿನೇಶ್ ಪೋಗಟ್ 53 ಕೆಜಿ ವಿಭಾಗದಲ್ಲಿ ಆತಿಥೇಯ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ. ಕೆಡಿ ಜಾಧವ್ ಕುಸ್ತಿ ಕ್ರೀಡಾಂಗಣದಲ್ಲಿ 6 ದಿನಗಳ ಕಾಲ ನಡೆಯಲಿರುವ ಕೂಟ, ಒಲಿಂಪಿಕ್ಸ್​ಗೆ ಮುನ್ನ ಏಷ್ಯಾದ ಪ್ರಮುಖ ಕುಸ್ತಿಪಟುಗಳೆದುರು ಭಾರತದ ಪೈಲ್ವಾನರ ಸಾಮರ್ಥ್ಯ ಪರೀಕ್ಷೆಗೆ ಉತ್ತಮ ವೇದಿಕೆಯಾಗಿದೆ.

ಒಲಿಂಪಿಕ್ಸ್ ವಿಶೇಷಾಧಿಕಾರದ ಪ್ರಕಾರ ನಾವು ಯಾವುದೇ ದೇಶಕ್ಕೆ ವೀಸಾ ನಿರಾಕರಿಸುವಂತಿಲ್ಲ. ಕ್ರೀಡೆಯಿಂದ ರಾಜಕೀಯವನ್ನು ದೂರವಿಡಲು ಯತ್ನಿಸುತ್ತೇವೆ. ಆದರೆ ಆರೋಗ್ಯ ಕಳವಳ ಅಥವಾ ತಾಂತ್ರಿಕ ಸಮಸ್ಯೆಗಳಿದ್ದಾಗ ಅದಕ್ಕೆ ಬೇರೆಯೇ ಅವಕಾಶವಿರುತ್ತದೆ. ನಾವಿಲ್ಲಿ ಯಾರ ಬಗ್ಗೆಯೂ ಪಕ್ಷಪಾತ ಮಾಡುತ್ತಿಲ್ಲ. ಆದರೆ ಗಂಭೀರ ಆರೋಗ್ಯ ಸಮಸ್ಯೆಯನ್ನು ಕಡೆಗಣಿಸಲು ಸಾಧ್ಯವಿಲ್ಲ.

| ಕಿರಣ್ ರಿಜಿಜು ಕ್ರೀಡಾ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net