

ನವದೆಹಲಿ: ಅಜಿತ್ ಅಗರ್ಕರ್ ಸಾರಥ್ಯದ ಆಯ್ಕೆ ಸಮಿತಿ, ಬಹುನಿರೀಕ್ಷಿತ ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಗೆ ಸೋಮವಾರ ಭಾರತ ತಂಡವನ್ನು ಆರಿಸಲಿದೆ. 17 ಆಟಗಾರರ ತಂಡವನ್ನು ಆಯ್ಕೆ ಮಾಡುವ ನಿರೀಕ್ಷೆ ಇದ್ದು, ಮುಂಬರುವ ಏಕದಿನ ವಿಶ್ವಕಪ್ನಲ್ಲಿ ಆಡಬಲ್ಲ 15 ಆಟಗಾರರೂ ಇದರಲ್ಲಿ ಸ್ಥಾನ ಪಡೆಯಲಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಬ್ಯಾಟರ್ಗಳಾದ ಕನ್ನಡಿಗ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಕೂಡ ಸ್ಥಾನ ಪಡೆಯುವ ಸಾಧ್ಯತೆಗಳಿವೆ. ಈಗಾಗಲೆ ಐರ್ಲೆಂಡ್ನಲ್ಲಿ ಟಿ20 ಸರಣಿಯಲ್ಲಿ ಆಡುತ್ತಿರುವ ವೇಗಿ ಜಸ್ಪ್ರೀತ್ ಬುಮ್ರಾ ಕೂಡ ದೀರ್ಘಕಾಲದ ಬಳಿಕ ಏಕದಿನ ತಂಡಕ್ಕೆ ಮರಳಲಿದ್ದಾರೆ.
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಈಗಾಗಲೆ ಏಷ್ಯಾಕಪ್ಗೆ 17 ಆಟಗಾರರ ತಂಡಗಳನ್ನು ಪ್ರಕಟಿಸಿವೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಈ ಅವಕಾಶವನ್ನೂ ಕಲ್ಪಿಸಿದೆ. ಹೀಗಾಗಿ ಭಾರತ ಕೂಡ 17 ಆಟಗಾರರ ತಂಡವನ್ನೇ ಪ್ರಕಟಿಸಲಿದೆ ಎನ್ನಲಾಗಿದೆ. ಈ ನಡುವೆ, ವಿಶ್ವಕಪ್ಗೆ ಸೆಪ್ಟೆಂಬರ್ 5ರೊಳಗಾಗಿ ಸಂಭಾವ್ಯ ತಂಡವನ್ನು ಐಸಿಸಿಗೆ ಸಲ್ಲಿಸಬೇಕಾಗಿದೆ. ನಂತರ ಅದರಲ್ಲಿ ಬದಲಾವಣೆ ಮಾಡಲು ಸೆಪ್ಟೆಂಬರ್ 27ರವರೆಗೂ ಅವಕಾಶ ಇರುತ್ತದೆ. ಹೀಗಾಗಿ ವಿಶ್ವಕಪ್ನಲ್ಲಿ ಆಡಬಲ್ಲ ಎಲ್ಲ ಆಟಗಾರರೂ ಏಷ್ಯಾಕಪ್ ತಂಡದಲ್ಲೂ ಸ್ಥಾನ ಪಡೆಯುವುದು ನಿಶ್ಚಿತ. ವಿಶ್ವಕಪ್ಗೆ ಸಂಭಾವ್ಯ ತಂಡವನ್ನೂ ಬಿಸಿಸಿಐ, ಸೋಮವಾರವೇ ಪ್ರಕಟಿಸುವುದೇ ಎಂಬುದು ಮಾತ್ರ ಖಚಿತಗೊಂಡಿಲ್ಲ.
ಕೆಎಲ್ ರಾಹುಲ್ ಈಗಾಗಲೆ ಬೆಂಗಳೂರಿನ ಎನ್ಸಿಎಯಲ್ಲಿ ನಡೆದ ಫಿಟ್ನೆಸ್ ಪರೀೆಯಲ್ಲಿ ಉತ್ತೀರ್ಣರಾಗಿದ್ದರೆ, ಶ್ರೇಯಸ್ ಅಯ್ಯರ್ ಎನ್ಸಿಎಯಲ್ಲಿ ನಡೆದ ಅಭ್ಯಾಸ ಪಂದ್ಯವೊಂದರಲ್ಲಿ 38 ಓವರ್ ಬ್ಯಾಟಿಂಗ್ ಮಾಡಿ, 50 ಓವರ್ ಫೀಲ್ಡಿಂಗ್ ನಡೆಸಿ ಫಿಟ್ನೆಸ್ ನಿರೂಪಿಸಿದ್ದಾರೆ ಎನ್ನಲಾಗಿದೆ.
ಆಯ್ಕೆಯಾಗಬಹುದಾದ ಸಂಭಾವ್ಯ ತಂಡ: ರೋಹಿತ್ ಶರ್ಮ (ನಾಯಕ), ಶುಭಮಾನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ (ವಿ.ಕೀ), ಶ್ರೇಯಸ್ ಅಯ್ಯರ್ (ಫಿಟ್ನೆಸ್ ಆಧಾರಿತ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಮೊಹಮದ್ ಶಮಿ, ಮೊಹಮದ್ ಸಿರಾಜ್, ಕುಲದೀಪ್ ಯಾದವ್, ಇಶಾನ್ ಕಿಶನ್ (2ನೇ ಕೀಪರ್), ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್/ಪ್ರಸಿದ್ಧ ಕೃಷ್ಣ, ಸೂರ್ಯಕುಮಾರ್, ತಿಲಕ್ ವರ್ಮ, ಯಜುವೇಂದ್ರ ಚಾಹಲ್/ಆರ್. ಅಶ್ವಿನ್.
ದ್ರಾವಿಡ್, ರೋಹಿತ್ ಭಾಗಿ
ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಸಭೆಯಲ್ಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮ ಖುದ್ದಾಗಿ ಅಥವಾ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಲಿದ್ದಾರೆ. ಈ ಹಿಂದೆ ಕೋಚ್ಗಳಾಗಿದ್ದ ಅನಿಲ್ ಕುಂಬ್ಳೆ ಮತ್ತು ರವಿಶಾಸ್ತ್ರಿಗೆ ಸಿಗದ ಅವಕಾಶ ದ್ರಾವಿಡ್ಗೆ ಲಭಿಸಿದೆ. ಆದರೆ, ಆಸ್ಟ್ರೆಲಿಯಾದಲ್ಲಿನ ಪದ್ಧತಿಯಂತೆ, ಇಲ್ಲಿ ಕೋಚ್ಗೆ ಆಯ್ಕೆ ಪ್ರಕ್ರಿಯೆಯಲ್ಲಿ ಮತ ಹಾಕುವ ಅವಕಾಶ ಲಭಿಸುವುದಿಲ್ಲ. ಅವರು ಆಯ್ಕೆಗಾರರಿಗೆ ಸಲಹೆ&ಅಭಿಪ್ರಾಯಗಳನ್ನಷ್ಟೇ ತಿಳಿಸಬಹುದಾಗಿದೆ.
ಮ.1.30ಕ್ಕೆ ಸುದ್ದಿಗೋಷ್ಠಿ
ಸೋಮವಾರ ಮಧ್ಯಾಹ್ನ 1.30ಕ್ಕೆ ತಂಡವನ್ನು ಪ್ರಕಟಿಸಿದ ಬಳಿಕ ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಯಲಿದ್ದು, ಇದರಲ್ಲಿ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ನಾಯಕ ರೋಹಿತ್ ಶರ್ಮ ಹಾಜರಿದ್ದು ಮಾತನಾಡಲಿದ್ದಾರೆ ಎನ್ನಲಾಗಿದೆ.