ಏಷ್ಯಾಕಪ್​ಗೆ ದುಬೈ ಆತಿಥ್ಯ: ಭಾರತ, ಪಾಕಿಸ್ತಾನ ಭಾಗಿ, ಸೆಪ್ಟೆಂಬರ್​ನಲ್ಲಿ ಟೂರ್ನಿ

Asia Cup
Published on

ಕೋಲ್ಕತ: ಮುಂಬರುವ ಏಷ್ಯಾಕಪ್​ಗೆ ದುಬೈ ಆತಿಥ್ಯ ವಹಿಸಿಕೊಳ್ಳಲಿದ್ದು, ಭಾರತ ಹಾಗೂ ಪಾಕಿಸ್ತಾನ ತಂಡಗಳು ಭಾಗವಹಿಸಲಿವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಶುಕ್ರವಾರ ಖಚಿತಪಡಿಸಿದ್ದಾರೆ.

ಸೆಪ್ಟೆಂಬರ್​ನಲ್ಲಿ ನಡೆಯಲಿರುವ ಟೂರ್ನಿಗೆ ಈ ಪಾಕಿಸ್ತಾನ ಆತಿಥ್ಯವಹಿಸಿಕೊಂಡಿತ್ತು. ಆದರೆ, ಭದ್ರತಾ ಕಾರಣಗಳಿಂದಾಗಿ ಪಾಕಿಸ್ತಾನಕ್ಕೆ ತೆರಳಲು ಕೇಂದ್ರ ಸರ್ಕಾರ ಅನುಮತಿ ನೀಡುವುದಿಲ್ಲ ಎನ್ನುವ ಕಾರಣ ನೀಡಿದ ಭಾರತ ಈ ಟೂರ್ನಿಯಲ್ಲಿ ಭಾಗಹಿಸುವುದಿಲ್ಲ ಎಂದು ಹೇಳಿತ್ತು. ಭಾರತ ತಂಡದ ಆಡದೇ ಇದ್ದಲ್ಲಿ ಏಷ್ಯಾಕಪ್​ನ ಮೌಲ್ಯ ಕುಸಿಯಲಿದೆ ಎನ್ನುವುದನ್ನು ಮನಗಂಡ ಏಷ್ಯನ್ ಕ್ರಿಕೆಟ್ ಸಮಿತಿ ಟೂರ್ನಿಯನ್ನು ದುಬೈಗೆ ಸ್ಥಳಾಂತರ ಮಾಡಿದೆ.

‘ಏಷ್ಯಾಕಪ್ ಈ ಬಾರಿ ದುಬೈನಲ್ಲಿ ನಡೆಯಲಿದ್ದು, ಭಾರತ ಹಾಗೂ ಪಾಕಿಸ್ತಾನ ತಂಡಗಳು ಇದರಲ್ಲಿ ಆಡಲಿವೆ’ ಎಂದು ಎಸಿಸಿ ಸಭೆಗಾಗಿ ದುಬೈಗೆ ತೆರಳುವ ಮುನ್ನ ಸೌರವ್ ಗಂಗೂಲಿ ಹೇಳಿದರು. ಮಾರ್ಚ್ 3ರಂದು ಎಸಿಸಿ ಸಭೆ ನಿಗದಿಯಾಗಿದೆ. ತಟಸ್ಥ ತಾಣದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆತಿಥ್ಯದಲ್ಲಿ ಟೂರ್ನಿ ನಡೆಯಲು ಯಾವುದೇ ಅಭ್ಯಂತರವಿಲ್ಲ ಎಂದು ಬಿಸಿಸಿಐ ಈಗಾಗಲೇ ಸ್ಪಷ್ಟಪಡಿಸಿತ್ತು. 2012-13ರಲ್ಲಿ ಕೊನೆಯ ಬಾರಿಗೆ ಪಾಕಿಸ್ತಾನ ತಂಡ ಸೀಮಿತ ಓವರ್​ಗಳ ಸರಣಿಗಾಗಿ ಭಾರತ ಪ್ರವಾಸ ಕೈಗೊಂಡಿತ್ತು. ಅದಾದ ಬಳಿಕ ಉಭಯ ದೇಶಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರವೇ ಉಭಯ ತಂಡಗಳು ಎದುರಾಗುತ್ತವೆ. -ಪಿಟಿಐ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net