ಏಷ್ಯಾಕಪ್​: ಯಾರೂ ದೇಶಕ್ಕಿಂತ ದೊಡ್ಡವರಲ್ಲ, ಪಾಕ್​ ಜತೆಗಿನ ಪಂದ್ಯವನ್ನು ಭಾರತ ತಪ್ಪಿಸಬೇಕು ಎಂದ ಭಜ್ಜಿ| Harbhajan Singh

Harbhajan Singh today
Published on

Harbhajan Singh: ಮುಂಬರುವ ಏಷ್ಯಾಕಪ್​ನಲ್ಲಿ ಭಾರತ, ಪಾಕಿಸ್ತಾನದ ಜತೆಗಿನ ಪಂದ್ಯವನ್ನು ಆಡಬಾರದು. ಏಕೆಂದರೆ, ಇದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರನ್ನು ಅಣಕಿಸುತ್ತದೆ ಎಂದು ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.

ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾದ ಜತೆ ಮಾತನಾಡಿರುವ ಭಾರತದ ಮಾಜಿ ಸ್ಪಿನ್ನರ್, ಕ್ರಿಕೆಟ್​ ಮತ್ತು ದೇಶದ ನಡುವೆ ಯಾವುದು ಮುಖ್ಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನನಗೆ, ಗಡಿಯಲ್ಲಿ ನಿಂತಿರುವ ಸೈನಿಕ, ಮತ್ತು ಅವರ ಕುಟುಂಬವು ಹೆಚ್ಚಾಗಿ ನೋಡಲು ಸಾಧ್ಯವಾಗುವುದಿಲ್ಲ. ಸೈನಿಕರ ತ್ಯಾಗ ನಮಗೆಲ್ಲರಿಗೂ ಸ್ಪೂರ್ತಿ. ಸೈನಿಕರ ತ್ಯಾಗಕ್ಕೆ ಹೋಲಿಸಿದರೆ, ಕ್ರಿಕೆಟ್​ ತುಂಬಾ ಸಣ್ಣ ವಿಷಯ ಎಂದು ತಿಳಿಸಿದ್ದಾರೆ.

ಅಲ್ಲದೆ, ನಮ್ಮ ಸರ್ಕಾರವೂ ರಕ್ತ ಮತ್ತು ನೀರು ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂಬ ನಿಲುವನ್ನೇ ಹೊಂದಿದೆ. ಗಡಿಯಲ್ಲಿ ಜಗಳ, ಎರಡೂ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಉಂಟಾಗಿರುವ ನಡುವೆ ನಾವು ಕ್ರಿಕೆಟ್ ಆಡಲು ಹೋಗುವುದು ಸರಿಯಲ್ಲ. ಈ ದೊಡ್ಡ ಸಮಸ್ಯೆಗಳು ಬಗೆಹರಿಯುವವರೆಗೆ ನಾವು ಪಾಕ್​ ಜತೆ ಪಂದ್ಯಗಳನ್ನು ಆಡಬಾರದು. ರಾಷ್ಟ್ರ ಯಾವಾಗಲೂ ಮೊದಲು ಬರುತ್ತದೆ ಎಂದು ಭಜ್ಜಿ ಸ್ಪಷ್ಟಪಡಿಸಿದ್ದಾರೆ.

ದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ ಮತ್ತು ಭಾರತೀಯ ಆಟಗಾರರು ಅದನ್ನು ಗೌರವಿಸಬೇಕು. ನಮ್ಮ ಗುರುತು ಏನೇ ಇರಲಿ, ಅದಕ್ಕೆ ದೇಶವೇ ಕಾರಣ. ನೀವು ಆಟಗಾರರಾಗಿರಲಿ, ನಟರಾಗಿರಲಿ ಅಥವಾ ಬೇರೆ ಯಾರೇ ಆಗಿರಲಿ, ಯಾರೂ ದೇಶಕ್ಕಿಂತ ದೊಡ್ಡವರಲ್ಲ. ದೇಶ ಮೊದಲು, ಮತ್ತು ನಾವು ಅದಕ್ಕೆ ನೀಡಬೇಕಾದ ಕರ್ತವ್ಯಗಳನ್ನು ಪೂರೈಸಬೇಕು ಎಂದು ಹರ್ಭಜನ್ ಹೇಳಿದರು.

ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಪ್ಟೆಂಬರ್ 14 ರಂದು ಏಷ್ಯಾಕಪ್​ನಲ್ಲಿ ಮುಖಾಮುಖಿಯಾಗಲಿವೆ. ಟೂರ್ನಿಯ ಅಂತಿಮ ಪಂದ್ಯ ಸೆಪ್ಟೆಂಬರ್ 28 ರಂದು ನಡೆಯಲಿದೆ.(ಏಜೆನ್ಸೀಸ್)​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net