

ಬೆಂಗಳೂರು: ವಿಶ್ವಕಪ್ ಸಿದ್ಧತೆಗೆ ಮಹತ್ವದ್ದಾಗಿರುವ ಏಷ್ಯಾಕಪ್ ಏಕದಿನ ಟೂರ್ನಿಗೆ ಕ್ಷಣಗಣನೆ ಆರಂಭಗೊಂಡಿದೆ. ಆಗಸ್ಟ್ 30ರಿಂದ ನಡೆಯಲಿರುವ ಟೂರ್ನಿಯಲ್ಲಿ ಸೆಪ್ಟೆಂಬರ್ 2ರಂದು ನಡೆಯಲಿರುವ ಭಾರತ&ಪಾಕಿಸ್ತಾನ ನಡುವಿನ ಪಂದ್ಯಕ್ಕಾಗಿ ಕ್ರಿಕೆಟ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ ಎಂಬುದು ಎಲ್ಲರ ನಂಬಿಕೆಯಾಗಿತ್ತು. ಆದರೆ ಟೂರ್ನಿಯ ಟಿಕೆಟ್ ಮಾರಾಟ ಪ್ರಕ್ರಿಯೆ ಆರಂಭಗೊಂಡ ಬಳಿಕ ಈ ನಂಬಿಕೆ ಸುಳ್ಳಾಗಿದೆ! ಹೌದು, ಭಾರತ-ಪಾಕ್ ನಡುವಿನ ಪಂದ್ಯಕ್ಕಿಂತ ಆತಿಥೇಯ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯವೇ ಟೂರ್ನಿಯ ಹೈವೋಲ್ಟೇಜ್ ಪಂದ್ಯವೆನಿಸಿದೆ. ಯಾಕೆಂದರೆ ಭಾರತ-ಪಾಕ್ ಪಂದ್ಯಕ್ಕೆ ಮುನ್ನ ಲಂಕಾ-ಬಾಂಗ್ಲಾ ನಡುವಿನ ಪಂದ್ಯದ ಟಿಕೆಟ್ ಸೋಲ್ಡ್ಔಟ್ ಆಗಿದೆ!
ಏಷ್ಯಾಕಪ್ನಲ್ಲಿ ಶ್ರೀಲಂಕಾ-ಬಾಂಗ್ಲಾ ನಡುವಿನ ಪಂದ್ಯ ಆಗಸ್ಟ್ 31ರಂದು ಕ್ಯಾಂಡಿಯಲ್ಲಿ ನಿಗದಿಯಾಗಿದೆ. ಆಗಸ್ಟ್ 17ರಂದು ಟಿಕೆಟ್ ಮಾರಾಟ ಆರಂಭಗೊಂಡ ಕೆಲವೇ ಗಂಟೆಗಳಲ್ಲಿ ಲಂಕಾ-ಬಾಂಗ್ಲಾ ನಡುವಿನ ಪಂದ್ಯದ ಎಲ್ಲ ಟಿಕೆಟ್ಗಳು ಮಾರಾಟವಾಗಿದ್ದರೆ, ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ಕೆಲ ಟಿಕೆಟ್ಗಳು ಇನ್ನೂ ಲಭ್ಯವಿವೆ. ಭಾರತ-ಪಾಕ್ ನಡುವಿನ ಪಂದ್ಯದ ವಿಐಪಿ ಟಿಕೆಟ್ಗಳು ಮಾತ್ರ ಕೆಲವೇ ನಿಮಿಷಗಳಲ್ಲಿ ಸೋಲ್ಡ್ಔಟ್ ಆಗಿವೆ.
ಕಾರಣವೇನು ಗೊತ್ತೇ?
ಭಾರತ&ಪಾಕ್ ಪಂದ್ಯಕ್ಕಿಂತ ಲಂಕಾ-ಬಾಂಗ್ಲಾ ನಡುವಿನ ಪಂದ್ಯದ ಟಿಕೆಟ್ ಬೇಗನೆ ಮಾರಾಟವಾಗಲು ಕಾರಣ, ಅವೆರಡು ದೇಶಗಳ ಕ್ರಿಕೆಟ್ ತಂಡಗಳ ನಡುವಿನ ಇತ್ತೀಚೆಗಿನ ವೈರತ್ವ. 2018ರ ನಿದಾಹಾಸ್ ಕಪ್ನಲ್ಲಿ ಲಂಕಾ ವಿರುದ್ಧ ಗೆದ್ದ ಬಳಿಕ ಬಾಂಗ್ಲಾ ತಂಡದ ಆಟಗಾರರು ಪ್ರದರ್ಶಿಸಿದ "ನಾಗಿನ್ ನೃತ್ಯ'ದಿಂದಾಗಿ ಉಭಯ ದೇಶಗಳ ನಡುವೆ ವೈರತ್ವ ಹುಟ್ಟಿಕೊಂಡಿದೆ. ಅದೇ ಟೂರ್ನಿಯ ಫೈನಲ್ನಲ್ಲಿ ಬಾಂಗ್ಲಾ ವಿರುದ್ಧ ಭಾರತ ಗೆದ್ದಾಗ ಲಂಕಾದ ಪ್ರೇಕ್ಷಕರು ನಾಗಿನ್ ನೃತ್ಯ ಪ್ರದರ್ಶಿಸಿ ಸೇಡು ತೀರಿಸಿಕೊಂಡಿದ್ದರು. ನಂತರದಲ್ಲಿ ಬಾಂಗ್ಲಾ ವಿರುದ್ಧದ ಪಂದ್ಯವೆಂದರೆ ಲಂಕನ್ನರು ಕೆರಳುತ್ತಿದ್ದಾರೆ. 2022ರ ಏಷ್ಯಾಕಪ್ನಲ್ಲೂ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಗೆದ್ದ ಬಳಿಕ ಲಂಕಾದ ಆಟಗಾರ ಚಮಿಕಾ ಕರುಣರತ್ನೆ ನಾಗಿನ್ ನೃತ್ಯ ಪ್ರದರ್ಶಿಸಿ ಸಂಭ್ರಮಿಸಿದ್ದರು. ಹೀಗಾಗಿ ಲಂಕಾದ ಕ್ರಿಕೆಟ್ ಪ್ರೇಮಿಗಳು ಬಾಂಗ್ಲಾ ವಿರುದ್ಧದ ಪಂದ್ಯದ ಬಗ್ಗೆ ಹೆಚ್ಚಿನ ಕುತೂಹಲ ಹೊಂದಿರುವುದರಿಂದ ಸಹಜವಾಗಿಯೇ ಪಂದ್ಯದ ಟಿಕೆಟ್ ಖರೀದಿಗೆ ಮುಗಿಬಿದ್ದಿದ್ದಾರೆ.
ಇನ್ನು ಭಾರತ-ಪಾಕ್ ಪಂದ್ಯದ ಟಿಕೆಟ್ ಮಾರಾಟ ಪ್ರಕ್ರಿಯೆ ವಿಳಂಬಗೊಳ್ಳಲು ಈ ಪಂದ್ಯದ ಟಿಕೆಟ್ಗಳ ದುಬಾರಿ ದರವೂ ಕಾರಣವಾಗಿದೆ. ಟಿಕೆಟ್ನ ಕನಿಷ್ಠ ಬೆಲೆಯೇ 2,500 ರೂ. ಆಗಿದ್ದು, ಗರಿಷ್ಠ 25,000 ರೂ. ಬೆಲೆಯ ಟಿಕೆಟ್ಗಳೂ ಲಭ್ಯವಿವೆ. ಲಂಕಾ-ಬಾಂಗ್ಲಾ ಪಂದ್ಯದ ಟಿಕೆಟ್ನ ಕನಿಷ್ಠ ಬೆಲೆ 1,600 ರೂ. ಆಗಿದೆ.