ಏಷ್ಯಾಕಪ್​ನಲ್ಲಿ ಇಂದು ಲಂಕಾ-ಬಾಂಗ್ಲಾ ಕಾದಾಟ; ಒತ್ತಡದಲ್ಲಿ ಶಕೀಬ್​ ಪಡೆ; ಶನಕ ಬಳಗಕ್ಕೆ ದಾಖಲೆ ತವಕ

sl vs ban web
Published on

ಕೊಲಂಬೊ: ಏಕದಿನ ಕ್ರಿಕೆಟ್​ನಲ್ಲಿ ಸತತ 12 ಗೆಲುವು ದಾಖಲಿಸಿ ಭರ್ಜರಿ ಲಯದಲ್ಲಿರುವ ಶ್ರೀಲಂಕಾ ತಂಡ ಏಷ್ಯಾಕಪ್​ ಟೂರ್ನಿಯ ಸೂಪರ್​-4 ಹಂತದ ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಶನಿವಾರ ಎದುರಿಸಲಿದೆ. ಸೂಪರ್-4 ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಸೋತಿರುವ ಬಾಂಗ್ಲಾ, ಫೈನಲ್​ಗೇರುವ ಆಸೆ ಜೀವಂತ ಉಳಿಸಿಕೊಳ್ಳಲು ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಇದೇ ವೇಳೆ ಉಭಯ ತಂಡಗಳು ಮಳೆ ಅಡಚಣೆಯ ಸವಾಲನ್ನೂ ಎದುರಿಸಬೇಕಾಗಿದೆ.

ಲೀಗ್​ ಹಂತದಲ್ಲಿ ಉಭಯ ತಂಡಗಳು ಒಂದೇ ಗುಂಪಿನಲ್ಲಿದ್ದವು ಮತ್ತು ಬಾಂಗ್ಲಾ ಎದುರು ಲಂಕಾ ಗೆದ್ದು ಬೀಗಿತ್ತು. ವಿಶ್ವಕಪ್​ ಅರ್ಹತಾ ಟೂರ್ನಿಯಿಂದ ಸತತ ಗೆಲುವಿನ ಓಟದಲ್ಲಿರುವ ಲಂಕಾ, ಇದೀಗ 13ನೇ ಪಂದ್ಯದಲ್ಲೂ ಗೆದ್ದರೆ, ಆಸ್ಟ್ರೆಲಿಯಾ (21) ನಂತರದಲ್ಲಿ ಗರಿಷ್ಠ ಸತತ ಗೆಲುವು ಕಂಡ ದಾಖಲೆ ಬರೆಯಲಿದೆ. ಸದ್ಯ ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ (ತಲಾ 12) ಜತೆ ಸಮಬಲದಲ್ಲಿದೆ.

ಕೆಲ ಪ್ರಮುಖ ಆಟಗಾರರ ಗೈರಿನಲ್ಲೂ ಲಂಕಾ ತಂಡ ಟೂರ್ನಿಯಲ್ಲಿ ಸರ್ವಾಂಗೀಣ ನಿರ್ವಹಣೆ ತೋರುತ್ತಿರುವುದು ವಿಶೇಷವಾಗಿದೆ. ಮತ್ತೊಂದೆಡೆ ಬಾಂಗ್ಲಾದೇಶಕ್ಕೆ ಬ್ಯಾಟಿಂಗ್​ ವಿಭಾಗದ ವೈಫಲ್ಯ ಪ್ರಮುಖ ಹಿನ್ನಡೆಯಾಗಿದೆ. ಪಂದ್ಯ ಒಂದು ವೇಳೆ ಮಳೆಯಿಂದ ರದ್ದುಗೊಂಡರೂ, ಬಾಂಗ್ಲಾ ಸವಾಲು ಬಹುತೇಕ ಅಂತ್ಯಗೊಳ್ಳಲಿದೆ.

ಆರಂಭ: ಮಧ್ಯಾಹ್ನ 3.00

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net