ಕನ್ನಡತಿ ನಿಕಿ ಪ್ರಸಾದ್​ ಸಾರಥ್ಯದ ಭಾರತ ಕಿರಿಯರ ತಂಡಕ್ಕೆ ಏಷ್ಯಾಕಪ್​ ಕಿರೀಟ

web asiacup
Published on

ಕೌಲಾಲಂಪುರ: ಕನ್ನಡತಿ ನಿಕಿ ಪ್ರಸಾದ್​ ಸಾರಥ್ಯದ ಭಾರತ ತಂಡ ಚೊಚ್ಚಲ ಆವೃತ್ತಿಯ 19 ವಯೋಮಿತಿ ಏಷ್ಯಾಕಪ್​ ಟಿ20 ಕ್ರಿಕೆಟ್​ ಟೂರ್ನಿಯಲ್ಲಿ ಚಾಂಪಿಯನ್​ ಪಟ್ಟವೇರಿದೆ. ಆರಂಭಿಕ ಆಟಗಾರ್ತಿ ಗೊಂಗಡಿ ತ್ರಿಷಾ (52 ರನ್​, 47 ಎಸೆತ, 5 ಬೌಂಡರಿ, 2 ಸಿಕ್ಸರ್​) ಅರ್ಧಶತಕದಾಟ ಮತ್ತು ಎಡಗೈ ಸ್ಪಿನ್ನರ್​ ಆಯುಷಿ ಶುಕ್ಲಾ (17ಕ್ಕೆ 3) ಮಾರಕ ಬೌಲಿಂಗ್​ ಬಲದಿಂದ ಭಾರತ ತಂಡ ಫೈನಲ್​ನಲ್ಲಿ ಬಾಂಗ್ಲಾದೇಶ ವಿರುದ್ಧ 41 ರನ್​ಗಳಿಂದ ಗೆಲುವು ದಾಖಲಿಸುವ ಮೂಲಕ ಈ ಸಾಧನೆ ಮಾಡಿದೆ. ಈ ಮೂಲಕ ಭಾರತ ತಂಡ ಮುಂದಿನ ವರ್ಷದ ಕಿರಿಯರ ಟಿ20 ವಿಶ್ವಕಪ್​ಗೆ ಭರ್ಜರಿ ಸಿದ್ಧತೆ ನಡೆಸಿದೆ.

ಬಯುಯೆಮಸ್​ ಓವಲ್​ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪ್ರಶಸ್ತಿ ಕಾದಾಟದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಭಾರತ ತಂಡ 7 ವಿಕೆಟ್​ಗೆ 117 ರನ್​ ಗಳಿಸಲಷ್ಟೇ ಶಕ್ತವಾಯಿತು. ಆದರೆ ನಂತರ ಬೌಲಿಂಗ್​ನಲ್ಲಿ ಭಾರತ ದಿಟ್ಟ ತಿರುಗೇಟು ನೀಡಿತು. ಇದರಿಂದ ಬಾಂಗ್ಲಾದೇಶ 18.3 ಓವರ್​ಗಳಲ್ಲಿ ಕೇವಲ 76 ರನ್​ಗಳಿಗೆ ಸರ್ವಪತನ ಕಂಡು ಶರಣಾಯಿತು. ಬಾಂಗ್ಲಾ 7 ಓವರ್​ಗಳಲ್ಲಿ 2 ವಿಕೆಟ್​ಗೆ 44 ರನ್​ ಗಳಿಸಿ ಗೆಲುವಿನ ಹಾದಿಯಲ್ಲಿತ್ತು. ಆದರೆ ನಂತರ ದಿಢೀರ್​ ಕುಸಿತ ಕಂಡು 32 ರನ್​ ಅಂತರದಲ್ಲಿ ಕೊನೇ 8 ವಿಕೆಟ್​ ಕಳೆದುಕೊಂಡಿತು. ಆಯುಷಿಗೆ ಮತ್ತಿಬ್ಬರು ಎಡಗೈ ಸ್ಪಿನ್ನರ್​ಗಳಾದ ಪುರಾಣಿಕಾ ಸಿಸೋಡಿಯಾ (12ಕ್ಕೆ 2) ಮತ್ತು ಸೋನಮ್​ ಯಾದವ್​ (13ಕ್ಕೆ 2) ಉತ್ತಮ ಸಾಥ್​ ನೀಡಿದರು.

ತ್ರಿಷಾ ಅರ್ಧಶತಕದಾಸರೆ

ಭಾರತ ಆರಂಭಿಕ 2 ವಿಕೆಟ್​ಗಳನ್ನು ಬೇಗನೆ ಕಳೆದುಕೊಂಡಿತು. ಆಗ ಗೊಂಗಡಿ ತ್ರಿಷಾ 2ನೇ ವಿಕೆಟ್​ಗೆ ನಾಯಕಿ ನಿಕಿ ಪ್ರಸಾದ್​ (12) ಜತೆಗೂಡಿ 41 ರನ್​ ಜತೆಯಾಟವಾಡಿ ಆಸರೆಯಾದರು. ನಿಕಿ ನಿರ್ಗಮನದ ನಂತರ ತ್ರಿಷಾ ಅರ್ಧಶತಕ ಪೂರೈಸಿದರು. ನಂತರ ಕೊನೆಯಲ್ಲಿ ಮತ್ತೋರ್ವ ಕನ್ನಡತಿ ಮಿಥಿಲಾ ವಿನೋದ್​ (17) ಮತ್ತು ಆಯುಷಿ ಶುಕ್ಲಾ (10) ಉಪಯುಕ್ತ ಕೊಡುಗೆ ನೀಡಿ ಮೊತ್ತವನ್ನು 110ರ ಗಡಿ ದಾಟಿಸಿದರು.

ಭಾರತ: 7 ವಿಕೆಟ್​ಗೆ 117 (ಜಿ. ತ್ರಿಷಾ 52, ಕಮಲಿನಿ 5, ನಿಕಿ 12, ಮಿಥಿಲಾ 17, ಆಯುಷಿ 10, ರ್ಜನಾ ಇಸ್ಮಿನ್​ 31ಕ್ಕೆ 4, ನಿಶಿತಾ 23ಕ್ಕೆ 2), ಬಾಂಗ್ಲಾದೇಶ: 18.3 ಓವರ್​ಗಳಲ್ಲಿ 76 (ಹೋಮಿದ 18, ೆರ್ದೌಸ್​ 22, ಆಯುಷಿ 17ಕ್ಕೆ 3, ಪಾರುಣಿಕಾ 12ಕ್ಕೆ 2, ಸೋನಮ್​ 13ಕ್ಕೆ 2, ಜೋಶಿತಾ 11ಕ್ಕೆ 1). ಪಂದ್ಯಶ್ರೇಷ್ಠ: ಗೊಂಗಡಿ ತ್ರಿಷಾ.

ಅಜೇಯವಾಗಿ ಪ್ರಶಸ್ತಿ ಜಯ

ಭಾರತ ತಂಡ ಟೂರ್ನಿಯಲ್ಲಿ ಅಜೇಯವಾಗಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ. ಲೀಗ್​ ಹಂತದಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದಿದ್ದರೆ, ನೇಪಾಳ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ನಂತರ ಸೂಪರ್​-4 ಹಂತದಲ್ಲಿ ಭಾರತ ತಂಡ, ಬಾಂಗ್ಲಾದೇಶ ಮತ್ತು ಶ್ರೀಲಂಕಾಕ್ಕೆ ಸೋಲುಣಿಸಿತ್ತು. ೈನಲ್​ನಲ್ಲಿ ಮತ್ತೊಮ್ಮೆ ಬಾಂಗ್ಲಾವನ್ನು ಮಣಿಸಿ ಪ್ರಶಸ್ತಿ ಒಲಿಸಿಕೊಂಡಿತು.

ವಿಜೇತ ತಂಡದಲ್ಲಿ ರಾಜ್ಯದ ಇಬ್ಬರು

ಏಷ್ಯಾಕಪ್​ ವಿಜೇತರ ಭಾರತ ಕಿರಿಯರ ತಂಡದಲ್ಲಿ ಇಬ್ಬರು ಕನ್ನಡತಿಯರು ಉಪಯುಕ್ತ ಕೊಡುಗೆ ನೀಡಿ ಗಮನಸೆಳೆದರು. 19 ವರ್ಷದ ನಿಕಿ ಪ್ರಸಾದ್​ ತಂಡದ ನಾಯಕಿಯೂ ಆಗಿದ್ದರೆ, ಮಿಥಿಲಾ ವಿನೋದ್​ ಕೂಡ ಆಲ್ರೌಂಡರ್​ ಆಗಿ ಗಮನಸೆಳೆದಿದ್ದಾರೆ. ಇವರಿಬ್ಬರು ಮುಂದಿನ ವರ್ಷ ಜನವರಿ 18ರಿಂದ ೆಬ್ರವರಿ 2ರವರೆಗೆ ಮಲೇಷ್ಯಾದಲ್ಲಿ ನಡೆಯಲಿರುವ 19 ವಯೋಮಿತಿ ಮಹಿಳಾ ವಿಶ್ವಕಪ್​ಗೂ ಭಾರತ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವ ನಿರೀೆ ಇದೆ. ನಿಕಿ ಪ್ರಸಾದ್​ ವಿಶ್ವಕಪ್​ನಲ್ಲೂ ನಾಯಕಿಯಾಗಿ ಮುಂದುವರಿಯುವ ನಿರೀಕ್ಷೆ ಇದೆ.

*ನಮಗೆ 20 ರನ್​ ಕಡಿಮೆ ಆದಂತೆ ಅನಿಸಿತ್ತು. ಆದರೆ ಈ ಪಿಚ್​ನಲ್ಲಿ 117 ರನ್​ ಉತ್ತಮ ಮೊತ್ತವೆನಿಸಿತು. ನಮ್ಮ ಬೌಲಿಂಗ್​ ವಿಭಾಗದ ಮೇಲೆ ವಿಶ್ವಾಸವಿತ್ತು. ನಮ್ಮ ಬೌಲರ್​ಗಳು ಮತ್ತು ಫೀಲ್ಡರ್​ಗಳು ಅಮೋ ನಿರ್ವಹಣೆ ತೋರಿದರು. ಜಿ. ತ್ರಿಷಾ ಅಪೂರ್ವವಾಗಿ ಬ್ಯಾಟಿಂಗ್​ ಮಾಡಿದರು.

| ನಿಕಿ ಪ್ರಸಾದ್​, ಭಾರತ ತಂಡದ ನಾಯಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net