ಏಷ್ಯಾ ಕಪ್​ಗೆ ಭಾರತ ತಂಡ ಪ್ರಕಟ ವಿಳಂಬ ಸಾಧ್ಯತೆ! ಕಾರಣ ಹೀಗಿದೆ... Asia Cup 2025

Asia Cup 2025
Published on

Asia Cup 2025 : ಈ ಬಾರಿಯ ಏಷ್ಯಾ ಕಪ್‌ (2025) ಗೆ ಭಾರತ ತಂಡವನ್ನು ಪ್ರಕಟಿಸುವುದು ವಿಳಂಬವಾಗುವ ಸಾಧ್ಯತೆಯಿದೆ. ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಮತ್ತು ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮಂಗಳವಾರ (ಆಗಸ್ಟ್​ 19) ಮಧ್ಯಾಹ್ನ 1.30ಕ್ಕೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಆದರೆ, ಮುಂಬೈನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ತಮ್ಮ ಪತ್ರಿಕಾಗೋಷ್ಠಿ ವಿಳಂಬವಾಗಬಹುದು ಎಂದು ಬಿಸಿಸಿಐ, ಮಾಧ್ಯಮ ಸಂಸ್ಥೆಗಳಿಗೆ ತಿಳಿಸಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಮುಂಬೈನಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ರೆಡ್ ಅಲರ್ಟ್ ಘೋಷಿಸಿದ್ದಾರೆ. ಅಲ್ಲದೆ, ಮುನ್ನೆಚ್ಚರಿಕಾ ಕ್ರಮವಾಗಿ ಮುಂಬೈನಾದ್ಯಂತ ಶಾಲೆಗಳು ಮುಚ್ಚಲ್ಪಟ್ಟಿವೆ. ಹಲವಾರು ಕಾರ್ಯಕ್ರಮಗಳನ್ನು ಸಹ ರದ್ದುಗೊಳಿಸಲಾಗಿದೆ. 200ಕ್ಕೂ ಅಧಿಕ ವಿಮಾನಗಳ ಸಂಚಾರ ವಿಳಂಬವಾಗಿದೆ. ರಸ್ತೆಗಳು ಜಲಾವೃತಗೊಂಡಿದ್ದು, ತಗ್ಗು ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ತಲೆದೂರಿದೆ. ಅಕ್ಷರಶಃ ಮುಂಬೈ ಮಳೆರಾಯನ ಅಬ್ಬರಕ್ಕೆ ತತ್ತರಿಸಿ ಹೋಗಿದೆ. ಒಂದು ವೇಳೆ ಮಳೆ ಕಡಿಮೆಯಾಗದಿದ್ದರೆ, ಅಗರ್ಕರ್ ಮತ್ತು ಸೂರ್ಯಕುಮಾರ್​ ಅವರು ವರ್ಚವಲ್ ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆಯಿದೆ.

ಆಯ್ಕೆ ಸಮಿತಿಯು ಏಷ್ಯಾ ಕಪ್‌ಗಾಗಿ 15 ಸದಸ್ಯರ ತಂಡವನ್ನು ಹೆಸರಿಸಿದೆ ಎಂದು ವರದಿಯಾಗಿದೆ. ಆದಾಗ್ಯೂ, ಟೆಸ್ಟ್ ನಾಯಕ ಶುಭ್‌ಮನ್ ಗಿಲ್ ಈ ತಂಡದಲ್ಲಿ ಸ್ಥಾನ ಪಡೆಯುತ್ತಾರೆಯೇ ಎಂದು ನೋಡಲು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಆರಂಭಿಕ ಸ್ಥಾನಕ್ಕೆ ಗಿಲ್ ಮತ್ತು ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಮತ್ತು ಅಭಿಷೇಕ್ ಶರ್ಮ ಅವರ ನಡುವೆ ತೀವ್ರ ಸ್ಪರ್ಧೆ ನಡೆಯುತ್ತಿದೆ.

ಆದಾಗ್ಯೂ, ಆಯ್ಕೆದಾರರು ಈ ತಂಡದಲ್ಲಿ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ಸೇರಿಸಿಕೊಂಡಿದ್ದಾರೆ ಎಂದು ತೋರುತ್ತದೆ. ರಿಯಾನ್ ಪರಾಗ್ ಬದಲಿಯಾಗಿ ಸುಂದರ್​ ಸ್ಥಾನ ಪಡೆದಿದ್ದಾರೆ ಎಂದು ವರದಿಯಾಗಿದೆ. ಆದರೆ, ತಂಡದಲ್ಲಿ ಯಾರೆಲ್ಲ ಸ್ಥಾನ ಪಡೆದಿದ್ದಾರೆ ಎಂದು ತಿಳಿಯಲು ಅಧಿಕೃತವಾಗಿ ತಂಡ ಪ್ರಕಟವಾಗುವವರೆಗೂ ಕಾಯಬೇಕಿದೆ.

ಭಾರತ ತಂಡ (ಅಂದಾಜು)

ಸೂರ್ಯಕುಮಾರ್ ಯಾದವ್ (ನಾಯಕ), ಶುಭಮಾನ್​ ಗಿಲ್, ಅಕ್ಷರ್ ಪಟೇಲ್, ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ ಮತ್ತು ಜಿತೇಶ್ ಶರ್ಮಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net