ಗಾಯದಿಂದ ಬಳಲಿದ ಪಾಕ್​ ಆಟಗಾರ: ಕನ್ನಡಿಗ ರಾಹುಲ್​ ನಡೆಯನ್ನು ಮೆಚ್ಚಿಕೊಂಡ ಕ್ರೀಡಾ ಜಗತ್ತು!

K L Rahul
Published on

ಕೊಲಂಬೋ: ನಿನ್ನೆ ಆರ್​. ಪ್ರೇಮದಾಸ್​ ಕ್ರೀಡಾಂಗಣದಲ್ಲಿ ನಡೆದ ಏಷ್ಯಾ ಕಪ್​ ಟೂರ್ನಿಯ ಸೂಪರ್​-4 ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 228 ರನ್​ ಅಂತರದಿಂದ ಭಾರತ ಬಗ್ಗುಬಡಿದಿದೆ. ಪಾಕ್​ ವಿರುದ್ಧ ಅಬ್ಬರಿಸಿ ಬೊಬ್ಬಿರಿದ ವಿರಾಟ್​ ಕೊಹ್ಲಿ (122 ರನ್​, 94 ಎಸೆತ, 9 ಬೌಂಡರಿ, 3 ಸಿಕ್ಸರ್​) ಮತ್ತು ಕನ್ನಡಿಗ ಕೆ.ಎಲ್​. ರಾಹುಲ್​ (111 ರನ್​, 106 ಎಸೆತ, 12 ಬೌಂಡರಿ, 2 ಸಿಕ್ಸರ್​) ಅಜೇಯ 233 ರನ್​ ಜೊತೆಯಾಟದಿಂದಾಗಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಲ್ಲದೆ, ತಮ್ಮ ಅದ್ಭುತ ಪ್ರದರ್ಶನದೊಂದಿಗೆ ಭಾರತೀಯರ ಮನ ಗೆದ್ದಿದ್ದಾರೆ. ಅದರಲ್ಲೂ ಪಂದ್ಯದ ನಡುವೆ ಕೆ.ಎಲ್​. ರಾಹುಲ್​ ಅವರು ಕ್ರೀಡಾ ಮನೋಭಾವ ಪಾಕ್​ ಕ್ರೀಡಾ ಅಭಿಮಾನಿಗಳು ಸಹ ಚಪ್ಪಾಳೆ ತಟ್ಟುವಂತೆ ಮಾಡಿದೆ.

ರವೀಂದ್ರ ಜಡೇಜಾ ಎಸೆದ ಚೆಂಡನ್ನು ಪಾಕ್​ ಆಟಗಾರ ಅಘಾ ಸಲ್ಮಾನ್​ ಅವರು ಸ್ವೀಪ್​ ಮಾಡಲು ಯತ್ನಿಸಿದರು. ಆದರೆ, ಚೆಂಡ್​ ಬೌನ್ಸ್ ಆಗಿ, ಬ್ಯಾಟಿನ ತುದಿಗೆ ತಾಗಿ ನೇರವಾಗಿ ಮುಖಕ್ಕೆ ಬಡಿಯಿತು. ಇದರ ಪರಿಣಾಮ ಸಲ್ಮಾನ್​ ಮುಖಕ್ಕೆ ಗಾಯವಾಗಿ ರಕ್ತಸ್ರಾವವಾಗಲು ಶುರುವಾಯಿತು. ಸಲ್ಮಾನ್​ ಅವರಿಗೆ ತುಂಬಾ ನೋವು ಸಹ ಆಯಿತು. ಇದರ ಬೆನ್ನಲ್ಲೇ ಪಾಕಿಸ್ತಾನದ ಚಿಕಿತ್ಸಕ ಮೈದಾನಕ್ಕೆ ಓಡಿ ಬಂದು ವಿಚಾರಿಸಿದರು. ಆದರೆ, ಅದಕ್ಕೂ ಮುನ್ನ ಸಲ್ಮಾನ್​ ಅವರ ನೋವಿಗೆ ಸ್ಪಂದಿಸಿದ್ದು, ಕೆ.ಎಲ್​. ರಾಹುಲ್​ ಅವರು.

ವಿಕೆಟ್​ ಕೀಪಿಂಗ್​ ಮಾಡುತ್ತಿದ್ದ ಕೆ.ಎಲ್​. ರಾಹುಲ್​, ಸಲ್ಮಾನ್​ ಬಳಿ ಹೋಗಿ ಗಾಯದ ಬಗ್ಗೆ ವಿಚಾರಿಸಿದರು. ಬಾಲ್​ ಬಿದ್ದು ಗಾಯಗೊಂಡ ಸ್ಥಳದ ಬಗ್ಗೆ ಪರಿಶೀಲಿಸಿ ಕ್ರೀಡಾ ಮನೋಭಾವ ಮೆರೆದರು. ರಾಹಲ್​ ಅವರ ಈ ನಡೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ನಿಜಕ್ಕೂ ಅತ್ಯುತ್ತಮ ನಡೆ ಇದು. ಕ್ರೀಡಾ ಮನೋಭಾವ ಮತ್ತು ಕ್ರೀಡಾ ಧರ್ಮವನ್ನು ರಾಹುಲ್​ ಮೆರೆದಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ಪಂದ್ಯದ ವಿಚಾರಕ್ಕೆ ಬಂದರೆ, ಮೀಸಲು ದಿನ ಸೋಮವಾರ 147 ರನ್​ಗಳಿಂದ ಆಟ ಮುಂದುವರಿಸಿದ ಟೀಮ್ ಇಂಡಿಯಾ, ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ನಡುವಿನ ದಾಖಲೆಯ ಜತೆಯಾಟದ ನೆರವಿನಿಂದ 2 ವಿಕೆಟ್​ಗೆ 356 ರನ್​ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ 32 ಓವರ್​ಗಳಲ್ಲಿ 128 ರನ್​ಗಳ ನಿಕೃಷ್ಟ ಮೊತ್ತಕ್ಕೆ ಕುಸಿದ ಪಾಕ್ ಅತಿ ದೊಡ್ಡ ಅಂತರದ ಮುಖಭಂಗ ಅನುಭವಿಸಿತು.

ನಾಯಕ ರೋಹಿತ್ ಶರ್ಮ ಹಾಗೂ ಶುಭಮಾನ್ ಗಿಲ್ ಭಾನುವಾರ ಭದ್ರ ಆರಂಭ ಒದಗಿಸಿದ್ದು ಬೃಹತ್ ಮೊತ್ತ ಪೇರಿಸಲು ನೆರವಾಯಿತು. ಪ್ರತಿಯಾಗಿ ಚೇಸಿಂಗ್ ನಡೆಸಿದ ಪಾಕಿಸ್ತಾನ 11 ಓವರ್​ಗಳಲ್ಲಿ 2 ವಿಕೆಟ್​ಗೆ 44 ರನ್​ಗಳಿಸಿದಾಗ ಮಳೆ ಆಡಚಣೆ ತಂದಿತ್ತು. ಬಳಿಕ ಮಳೆ ಬಿಡುವು ಕೊಟ್ಟು ಆಟ ನಡೆದಾಗ ಪಾಕ್ ಗುರಿ ಬೆನ್ನಟ್ಟಲಾಗದೆ ಕೈಚೆಲ್ಲಿತು. ಬೌಲಿಂಗ್​ನಲ್ಲಿ ಕುಲ್​ದೀಪ್ ಯಾದವ್ 25ಕ್ಕೆ 5 ವಿಕೆಟ್ ಕಬಳಿಸಿ ಪಾಕ್ ಬೆನ್ನೆಲುಬು ಮುರಿದರು.

ಕೊಹ್ಲಿ-ರಾಹುಲ್ ಬಿರುಸಿನಾಟ: ಶುಭಮಾನ್ ಗಿಲ್ ವಿಕೆಟ್ ಬಳಿಕ 3ನೇ ವಿಕೆಟ್​ಗೆ 24 ರನ್ ಪೇರಿಸಿ ಕ್ರೀಸ್​ನಲ್ಲಿದ್ದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ರಾಹುಲ್ 24.1 ಓವರ್​ಗಳಿಂದಲೇ ಬ್ಯಾಟಿಂಗ್ ಮುಂದುವರಿಸಿದರು. 3ನೇ ವಿಕೆಟ್​ಗೆ ಇವರಿಬ್ಬರೂ 233 ರನ್ ಕಲೆಹಾಕಿದರು. ಸ್ಪಿನ್ನರ್ ಶಾದಾಬ್ ಖಾನ್ ಹಾಗೂ ಅರೆಕಾಲಿಕ ಬೌಲರ್ ಇಫ್ತಿಕರ್ ಅಹ್ಮದ್ ಅವರನ್ನು ಟಾರ್ಗೆಟ್ ಮಾಡಿದ ರಾಹುಲ್, 60 ಎಸೆತಗಳಲ್ಲಿ, ಕೊಹ್ಲಿ 55 ಎಸೆತದಲ್ಲಿ ಅರ್ಧಶತಕ ಪೂರೈಸಿದರು. ಇಲ್ಲಿಂದ ರನ್​ಗಳಿಕೆಗೆ ಚುರುಕು ಮುಟ್ಟಿಸಿದ ಈ ಜೋಡಿ ಪಾಕ್ ಬೌಲರ್​ಗಳನ್ನು ಬೆಂಡೆತ್ತಿದ್ದರು. ಏಕದಿನ ಕ್ರಿಕೆಟ್​ನಲ್ಲಿ 6ನೇ ಶತಕ ಸಿಡಿಸಿದ ರಾಹುಲ್ ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರಿಸಿದರು. ವಿರಾಟ್ ಕೊಹ್ಲಿ ಅನುಭವಿ ಆಟದ ಮೂಲಕ ತಂಡದ 84 ಎಸೆತದಲ್ಲಿ ಶತಕ ಪೂರೈಸಿದರು. ಸ್ಲಾಗ್ ಓವರ್​ಗಳಲ್ಲಿ ರನ್ ಮಳೆ ಜತೆಗೆ ಆಕ್ರಮಣಕಾರಿ ಹೊಡೆತಗಳ ಮೂಲಕ ಇವರಿಬ್ಬರೂ ಅಂತಿಮ ಐದು ಓವರ್​ಗಳಲ್ಲಿ 56 ರನ್ ಕಸಿದು ಅಬ್ಬರಿಸಿ ತಂಡದ ಮೊತ್ತವನ್ನು 350ರ ಗಡಿ ದಾಟಿಸಿದರು.

ಕುಲದೀಪ್ ದಾಳಿಗೆ ಲಯ ತಪ್ಪಿದ ಪಾಕ್

ಕಠಿಣ ಗುರಿ ಬೆನ್ನತ್ತಿದ್ದ ಪಾಕಿಸ್ತಾನ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್(25ಕ್ಕೆ 5) ಮಾರಕ ದಾಳಿಗೆ ದಿಟ್ಟ ಉತ್ತರ ನೀಡುವಲ್ಲಿ ವೈಫಲ್ಯ ಕಂಡಿತು. ಇಮಾಮ್ ಉಲ್ ಹಕ್​ರನ್ನು ಎಲ್​ಬಿ ಬಲೆಗೆ ಬೀಳಿಸಿದ ಬುಮ್ರಾ ಮೊದಲ ಯಶಸ್ಸು ತಂದರು. ಬಾಬರ್ ಅಜಮ್ (10), ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ಪೆವಿಲಿಯನ್ ಹಾದಿ ಹಿಡಿದರು. ಫಖರ್ ಜಮಾನ್ (27) ಹಾಗೂ ಅಘಾ ಸಲ್ಮಾನ್ (23) 4ನೇ ವಿಕೆಟ್​ಗೆ 30 ರನ್​ಗಳಿಸಿದ್ದು ಹೊರತುಪಡಿಸಿ, ಇಫ್ತಿಕರ್ ಅಹ್ಮದ್ (23) ತುಸು ರನ್ ಕಲೆಹಾಕಿದ್ದು ಬಿಟ್ಟರೆ ಇತರ ಬ್ಯಾಟರ್​ಗಳು ಪೆವಿಲಿಯನ್ ಪರೇಡ್ ನಡೆಸಿದರು. ನಿಧಾನವಾಗಿ ಕ್ರೀಸಿಗೆ ಗಟ್ಟಿಯಾದ ಫಖರ್ ಅವರ ವಿಕೆಟ್ ಕಬಳಿಸುವ ಮೂಲಕ ಪಾಕ್ ತಂಡ ಕುಸಿತಕ್ಕೆ ಮುನ್ನುಡಿ ಬರೆದ ಕುಲದೀಪ್, ಮಧ್ಯಮ ಕ್ರಮಾಂಕದ ಬೆನ್ನೆಲುಬನ್ನು ಮುರಿದರು. ಸ್ಪಿನ್ ಜಾಲದ ಎದುರು ರನ್​ಗಳಿಸಲು ಪರದಾಡಿದ ಫಹೀಮ್ ಆಶ್ರಫ್ (4 ) ವಿಕೆಟ್ ಕಬಳಿಸಿದ ಕುಲದೀಪ್ ಪಾಕ್ ಇನಿಂಗ್ಸ್​ಗೆ ತೆರೆ ಎಳೆದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net