

ನವದೆಹಲಿ: ಕೋವಿಡ್-19 ಸಂಪೂರ್ಣವಾಗಿ ನಿಗ್ರಹಗೊಂಡರೆ ಮುಂದಿನ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಪುರುಷರ ಹಾಗೂ ಮಹಿಳಾ ವಿಭಾಗದ ಏಷ್ಯಾ ಬಾಕ್ಸಿಂಗ್ ಚಾಂಪಿಯನ್ಷಿಪ್ಅನ್ನು ಭಾರತದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ.
1980ರಲ್ಲಿ ಮುಂಬೈನಲ್ಲಿ ಕಡೇ ಬಾರಿಗೆ ಪುರುಷರ ವಿಭಾಗದಲ್ಲಿ ನಡೆದರೆ, 2003ರಲ್ಲಿ ಹಿಸಾರ್ನಲ್ಲಿ ಮಹಿಳಾ ವಿಭಾಗದ ಏಷ್ಯಾ ಚಾಂಪಿಯನ್ಷಿಪ್ ಆಯೋಜಿಸಲಾಗಿತ್ತು. ಕಳೆದ ವರ್ಷದಿಂದ ಪುರುಷರ ಹಾಗೂ ಮಹಿಳಾ ವಿಭಾಗ ಏಕಕಾಲದಲ್ಲಿ ನಡೆಯುತ್ತಿದೆ. ಕಳೆದ ಫೆಬ್ರವರಿಯಲ್ಲಿ ನಡೆದ ಏಷ್ಯನ್ ಬಾಕ್ಸಿಂಗ್ ಕಾನ್ಪೆಡರೇಷನ್ ಸಭೆ ವೇಳೆ ಚಾಂಪಿಯನ್ಷಿಪ್ ಆಯೋಜಿಸುವ ಹಕ್ಕು ದಕ್ಕಿದ್ದು, ಕರೊನಾ ವೈರಸ್ ಸಂಪೂರ್ಣ ನಿಯಂತ್ರಣಕ್ಕೆ ಬಂದರೆ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ಕೂಟ ಆಯೋಜಿಸುವ ಗುರಿ ಹೊಂದಿರುವುದಾಗಿ ಭಾರತೀಯ ಬಾಕ್ಸಿಂಗ್ ಫೆಡರೇಷನ್ನ ಕಾರ್ಯಕಾರಿ ನಿರ್ದೇಶಕ ಆರ್ಕೆ ಸಾಚೆಟಿ ತಿಳಿಸಿದ್ದಾರೆ.