

ಚೆನ್ನೈ: ತವರಿನ ಟೆಸ್ಟ್ ಸರಣಿಗಳಲ್ಲಿ ಭಾರತೀಯ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರವೆನಿಸುವ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ ಈ ಬಾರಿ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗದಲ್ಲೂ ಆತಿಥೇಯರ ರಕ್ಷಣೆಗೆ ನಿಂತಿದ್ದಾರೆ. ಪ್ರಮುಖ ಬ್ಯಾಟರ್ಗಳ ವೈಫಲ್ಯದಿಂದಾಗಿ ಕುಸಿದ ಭಾರತ ತಂಡಕ್ಕೆ ಆರ್. ಅಶ್ವಿನ್ (102*ರನ್, 112 ಎಸೆತ, 10 ಬೌಂಡರಿ, 2 ಸಿಕ್ಸರ್) ಆರನೇ ಟೆಸ್ಟ್ ಶತಕದ ಮೂಲಕ ಆಸರೆಯಾದರೆ, ಆಲ್ರೌಂಡರ್ ರವೀಂದ್ರ ಜಡೇಜಾ (86* ರನ್, 117 ಎಸೆತ, 10 ಬೌಂಡರಿ, 2 ಸಿಕ್ಸರ್) ಸಮರ್ಥ ಬೆಂಬಲ ನೀಡುವ ಮೂಲಕ 5ನೇ ಟೆಸ್ಟ್ ಶತಕದ ಸನಿಹ ನಿಂತಿದ್ದಾರೆ. ಪಾಕ್ನಲ್ಲಿ ಸರಣಿ ಗೆದ್ದ ವಿಶ್ವಾಸದೊಂದಿಗೆ ಆಗಮಿಸಿರುವ ಬಾಂಗ್ಲಾ ತಂಡ ಆರಂಭಿಕ ಮೇಲುಗೈ ಸಾಧಿಸಿದರೂ, ಕೊನೇ ಅವಧಿಯಲ್ಲಿ ಅಶ್ವಿನ್-ಜಡೇಜಾ ಜೋಡಿ ದ್ವಿಶತಕದ ಸನಿಹದ ಜತೆಯಾಟವಾಡಿ ದಿಟ್ಟ ತಿರುಗೇಟು ನೀಡಿದ್ದರಿಂದ ಭಾರತವೇ ಮೊದಲ ದಿನದ ಗೌರವ ಸಂಪಾದಿಸಿದೆ.
ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದ ಬಾಂಗ್ಲಾದೇಶ, ವೇಗದ ಬೌಲರ್ಗಳಿಗೆ ಅನುಕೂಲಕರ ಆಗುವಂತಿದ್ದ ಪಿಚ್ಅನ್ನು ಸಮರ್ಥವಾಗಿ ಬಳಸಿಕೊಂಡಿತು. ಇದರಿಂದಾಗಿ ಭಾರತ ತಂಡ 144 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸಾಧಾರಣ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತು. ಆಗ ತಂಡದ ರಕ್ಷಣೆಗೆ ನಿಂತ ಅಶ್ವಿನ್-ಜಡೇಜಾ ಜೋಡಿ ಮುರಿಯದ 7ನೇ ವಿಕೆಟ್ಗೆ 227 ಎಸೆತಗಳಲ್ಲಿ 195 ರನ್ ಜತೆಯಾಟವಾಡಿ ಭಾರತವನ್ನು ಸುಸ್ಥಿತಿಗೆ ತಂದಿತು. ದಿನದಂತ್ಯಕ್ಕೆ ಭಾರತ 80 ಓವರ್ಗಳಲ್ಲಿ 6 ವಿಕೆಟ್ಗೆ 339 ರನ್ ಪೇರಿಸಿ ಉತ್ತಮ ಮೊತ್ತದತ್ತ ಮುನ್ನಡೆದಿದೆ. ಯುವ ವೇಗಿ ಹಸನ್ ಮಹಮೂದ್ (58ಕ್ಕೆ 4) ಬಿಗಿ ದಾಳಿ ಎದುರು ಭಾರತದ ಅಗ್ರ ಕ್ರಮಾಂಕ ಪರದಾಡಿದರೆ, ಐಸಿಸಿ ಟೆಸ್ಟ್ ಆಲ್ರೌಂಡರ್ ರ್ಯಾಂಕಿಂಗ್ನಲ್ಲಿ ಅಗ್ರ 2 ಸ್ಥಾನದಲ್ಲಿರುವ ಜಡೇಜಾ&ಅಶ್ವಿನ್ ಪ್ರತಿ ಓವರ್ಗೆ 5ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್ ಪೇರಿಸುವ ಮೂಲಕ ಬಾಂಗ್ಲಾ ಬೌಲರ್ಗಳನ್ನು ಬೆಂಡೆತ್ತಿದರು. ಈ ಪಿಚ್ನಲ್ಲಿ ಭಾರತದ ಪಾಲಿಗೆ 350 ಪ್ಲಸ್ ರನ್ ಉತ್ತಮ ಮೊತ್ತವೇ ಆಗಲಿದೆ.
ಅಶ್ವಿನ್-ಜಡೇಜಾ ಸೇರಿಸಿದ 195 ರನ್, ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ 7ನೇ ವಿಕೆಟ್ಗೆ ದಾಖಲಾದ ಗರಿಷ್ಠ ಜತೆಯಾಟವಾಗಿದೆ. ಇನ್ನು 5 ರನ್ ಗಳಿಸಿದರೆ ಅವರು ಟೆಸ್ಟ್ನಲ್ಲಿ 7ನೇ ವಿಕೆಟ್ಗೆ ದ್ವಿಶತಕದ ಜತೆಯಾಟವಾಡಿದ 8ನೇ ಜೋಡಿ ಎನಿಸಲಿದ್ದಾರೆ. ಅಶ್ವಿನ್ ತವರೂರು ಚೆನ್ನೈನಲ್ಲಿ ಸತತ 2ನೇ ಶತಕ ಬಾರಿಸಿದರು. 2021ರಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಇಲ್ಲಿ ಆಡಿದ ಕೊನೇ ಟೆಸ್ಟ್ನಲ್ಲೂ ಅಶ್ವಿನ್ ಶತಕ ಸಿಡಿಸಿದ್ದರು. ಅವರ ಮೊದಲ 4 ಶತಕಗಳು ವಿಂಡೀಸ್ ವಿರುದ್ಧ ಸಿಡಿದಿವೆ.
ಅಶ್ವಿನ್ 38 ವರ್ಷ ಅಥವಾ ನಂತರದಲ್ಲಿ ಟೆಸ್ಟ್ ಶತಕ ಸಿಡಿಸಿದ 4ನೇ ಭಾರತೀಯ ಬ್ಯಾಟರ್. ರಾಹುಲ್ ದ್ರಾವಿಡ್ (5), ವಿನೂ ಮಂಕಡ್ (2), ವಿಜಯ್ ಮರ್ಚೆಂಟ್ (1) ಮೊದಲ ಮೂವರು. ಅಶ್ವಿನ್ ಟೆಸ್ಟ್ನಲ್ಲಿ 8ನೇ ಕ್ರಮಾಂಕದಲ್ಲಿ ಗರಿಷ್ಠ 4 ಶತಕ ಸಿಡಿಸಿದ ನ್ಯೂಜಿಲೆಂಡ್ನ ಡೇನಿಯಲ್ ವೆಟ್ಟೋರಿ ದಾಖಲೆ ಸರಿಗಟ್ಟಿದರು. ಅಶ್ವಿನ್ ಈಗ ಟೆಸ್ಟ್ ಕ್ರಿಕೆಟ್ನಲ್ಲಿ ಎಂಎಸ್ ಧೋನಿ (6) ಅವರಷ್ಟೇ ಶತಕ ಸಿಡಿಸಿದಂತಾಗಿದೆ. ಧೋನಿಗಿಂತ 2 ಇನಿಂಗ್ಸ್ ಬೇಗನೆ ಈ ಸಾಧನೆ ಮಾಡಿದ್ದಾರೆ ಎಂಬುದು ವಿಶೇಷ.
ಹಸನ್ ಮಹಮೂದ್ ಟೆಸ್ಟ್ ಇನಿಂಗ್ಸ್ ಒಂದರ ಮೊದಲ 4 ವಿಕೆಟ್ ಕಬಳಿಸಿದ ಬಾಂಗ್ಲಾದ 4ನೇ ವೇಗಿ ಎನಿಸಿದರು. ಖಾಲಿದ್ ಮಹಮೂದ್ (2003), ರೊಬಿಯುಲ್ ಇಸ್ಲಾಂ (2013) ಮತ್ತು ಅಬು ಜಯೆದ್ (2019) ಹಿಂದಿನ ಸಾಧಕರು. ಯಶಸ್ವಿ ಜೈಸ್ವಾಲ್ ತವರಿನ ಟೆಸ್ಟ್ನಲ್ಲಿ ಸತತ 6 ಬಾರಿ 50 ಪ್ಲಸ್ ರನ್ ಗಳಿಸಿದ ಭಾರತದ ಮೊದಲ ಬ್ಯಾಟರ್ ಎನಿಸಿದರು. ರುಸಿ ಮೋದಿ ಸತತ 5 ಅರ್ಧಶತಕ ಬಾರಿಸಿದ್ದು ಹಿಂದಿನ ದಾಖಲೆ. ಚೆಪಾಕ್ನಲ್ಲಿ ನಡೆದ ಟೆಸ್ಟ್ ಪಂದ್ಯವೊಂದರಲ್ಲಿ ಕಳೆದ 42 ವರ್ಷಗಳಲ್ಲಿ ಮೊದಲ ಬಾರಿ ಟಾಸ್ ಗೆದ್ದ ತಂಡ ಬೌಲಿಂಗ್ ಆಯ್ದುಕೊಂಡಿತು. ಇಲ್ಲಿ ಕಳೆದ 21 ಟೆಸ್ಟ್ಗಳಲ್ಲಿ ಟಾಸ್ ಗೆದ್ದ ತಂಡ ಬ್ಯಾಟಿಂಗ್ ಆಯ್ದಿತ್ತು. 1982ರಲ್ಲಿ ಕೊನೆಯದಾಗಿ ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಮಾಡಿತ್ತು.
ಬಾಂಗ್ಲಾ ಓವರ್ರೇಟ್ ಕುಸಿತ
ಮೂವರು ವೇಗಿಗಳಿಂದಲೇ 50 ಓವರ್ ದಾಳಿ ನಡೆಸಿ ಭಾರತವನ್ನು ಕಟ್ಟಿಹಾಕಲು ಯತ್ನಿಸಿದ ಬಾಂಗ್ಲಾ, ಓವರ್ಗತಿಯಲ್ಲಿ ಭಾರಿ ಹಿಂದುಳಿಯಿತು. ದಿನದಂತ್ಯಕ್ಕೆ ಬಾಂಗ್ಲಾ ನಿಗದಿತಕ್ಕಿಂತ 10 ಓವರ್ ಕಡಿಮೆ ಎಸೆಯಿತು. ಇದರಿಂದ ಬಾಂಗ್ಲಾ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಅಂಕಪಟ್ಟಿಯಲ್ಲಿ ಅಂಕ ಕಡಿತದ ಶಿಕ್ಷೆಗೆ ಗುರಿಯಾಗುವ ಭೀತಿ ಎದುರಿಸಿದೆ.
ಮೂವರು ವೇಗಿಗಳು ಕಣಕ್ಕೆ
ಭಾರತ ತಂಡ ಚೆಪಾಕ್ನ ಕೆಂಪು ಮಣ್ಣಿ ಪಿಚ್ ವೇಗಿಗಳಿಗೆ ನೆರವಾಗುವ ನಿರೀೆಯೊಂದಿಗೆ ಮೂವರು ವೇಗದ ಬೌಲರ್ಗಳೊಂದಿಗೆ ಕಣಕ್ಕಿಳಿಯಿತು ಮತ್ತು ಸ್ಪಿನ್ ವಿಭಾಗವನ್ನು ಅಶ್ವಿನ್&ಜಡೇಜಾಗೆ ಸೀಮಿತಗೊಳಿಸಿತು. ಜಸ್ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್ ಜತೆಗೆ ಆಕಾಶ್ ದೀಪ್ 3ನೇ ವೇಗಿಯಾಗಿ ಕಣಕ್ಕಿಳಿದರು. ಪ್ರವಾಸಿ ಬಾಂಗ್ಲಾ ಕೂಡ 3 ವೇಗಿ, 2 ಸ್ಪಿನ್ನರ್ಸ್ ತಂತ್ರವನ್ನೇ ಅನುಸರಿಸಿದೆ.