

ಪುಣೆ: ಭಾರತದ ಅನುಭವಿ ಆ್ ಸ್ಪಿನ್ನರ್ ಆರ್.ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಆ್ ಸ್ಪಿನ್ನರ್ ನಾಥನ್ ಲ್ಯಾನ್ (530) ಅವರನ್ನು ಹಿಂದಿಕ್ಕಿ ಏಳನೇ ಸ್ಥಾನಕ್ಕೇರಿದರು. ಈ ಮೂಲಕ ಪ್ರಸ್ತುತ ಸಕ್ರಿಯ ಆಟಗಾರರ ಪೈಕಿ ಅಗ್ರಸ್ಥಾನಕ್ಕೆ ಜಿಗಿದಿದ್ದಾರೆ.
ಕಿವೀಸ್‌ನ ಡೆವೊನ್ ಕಾನ್‌ವೇ ವಿಕೆಟ್ ಪಡೆಯುವ ಮೂಲಕ ಅಶ್ವಿನ್ 104 ಪಂದ್ಯಗಳಲ್ಲಿ 531ನೇ ವಿಕೆಟ್ ಸಾಧನೆ ಮಾಡಿದರು. ಸಾರ್ವಕಾಲಿಕ ಪಟ್ಟಿಯಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (800), ಆಸ್ಟ್ರೇಲಿಯಾದ ಶೇನ್ ವಾರ್ನ್ (708), ಇಂಗ್ಲೆಂಡ್‌ನ ಜೇಮ್ಸ್ ಆಂಡರ್‌ಸನ್ (704), ಕನ್ನಡಿಗ ಅನಿಲ್ ಕುಂಬ್ಳೆ (619), ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್ (604), ಆಸೀಸ್‌ನ ಗ್ಲೆನ್ ಮೆಕ್‌ಗ್ರಾಥ್ (563) ಕ್ರಮವಾಗಿ 1ರಿಂದ 6ರ ಸ್ಥಾನದಲ್ಲಿದ್ದಾರೆ. ಇದಕ್ಕೆ ಮುನ್ನ ನ್ಯೂಜಿಲೆಂಡ್‌ನ ವಿಲ್ ಯಂಗ್ ವಿಕೆಟ್ ಪಡೆಯುವ ಮೂಲಕ ಅಶ್ವಿನ್ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಬೌಲರ್ ಎನಿಸಿದರು. ಅಶ್ವಿನ್ ಇದುವರೆಗೆ ಆಡಿರುವ 39 ಪಂದ್ಯಗಳಲ್ಲಿ 189 ವಿಕೆಟ್ ಪಡೆದಿದ್ದರೆ, ನಾಥನ್ ಲ್ಯಾನ್43 ಪಂದ್ಯಗಳಲ್ಲಿ 187 ವಿಕೆಟ್ ಗಳಿಸಿದ್ದಾರೆ.
ಮೂರು ವರ್ಷಗಳ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ ತಮಿಳುನಾಡು ಆಲ್ರೌಂಡರ್ ವಾಷಿಂಗ್ಟನ್ ಸುಂದರ್ (58ಕ್ಕೆ 7) ನಡೆಸಿದ ಜೀವನಶ್ರೇಷ್ಠ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದೆ. ಇದರೊಂದಿಗೆ ರೋಹಿತ್ ಶರ್ಮ ಪಡೆ ಮೊದಲ ದಿನದ ಗೌರವ ಸಂಪಾದಿಸಿದೆ. ಪುಣೆಯಲ್ಲಿ ಪುಟಿದೇಳುವ ಮೂಲಕ ಟೀಮ್ ಇಂಡಿಯಾ ತವರಿನ ಸತತ 18 ಟೆಸ್ಟ್ ಸರಣಿ ಗೆಲುವಿನ ಪ್ರಾಬಲ್ಯವನ್ನು ವಿಸ್ತರಿಸುವ ಭರವಸೆ ಮೂಡಿಸಿದೆ.
ಎಂಸಿಎ ಕ್ರೀಡಾಂಗಣದಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಬೆಂಗಳೂರು ಟೆಸ್ಟ್‌ನಲ್ಲಿ ಮಿಂಚಿದ್ದ ಎಡಗೈ ಆರಂಭಿಕ ಡೆವೋನ್ ಕಾನ್‌ವೇ (76 ರನ್, 141 ಎಸೆತ, 11 ಬೌಂಡರಿ) ಹಾಗೂ ಆಲ್ರೌಂಡರ್ ರಚಿನ್ ರವೀಂದ್ರ (65 ರನ್, 105 ಎಸೆತ, 5 ಬೌಂಡರಿ, 1 ಸಿಕ್ಸರ್) ಅರ್ಧಶತಕದ ಬಲದಿಂದ ಕಿವೀಸ್ ಮಧ್ಯಾಹ್ನದವರೆಗೂ ಸುಸ್ಥಿತಿಯಲ್ಲಿತ್ತು. ಬಳಿಕ ವಾಷಿಂಗ್ಟನ್ ಸುಂದರ್ ದಾಳಿಗೆ ತತ್ತರಿಸಿದ ಕಿವೀಸ್ ಚಹಾ ವಿರಾಮದ ಬಳಿಕ 79.1 ಓವರ್‌ಗಳಲ್ಲಿ 259 ರನ್‌ಗಳಿಗೆ ಮೊದಲ ಇನಿಂಗ್ಸ್ ಮುಗಿಸಿತು. ಪ್ರತಿಯಾಗಿ ನಾಯಕ ರೋಹಿತ್ ಶರ್ಮ (0) ವಿಕೆಟ್ ಕಳೆದುಕೊಂಡಿರುವ ಭಾರತ ದಿನದಂತ್ಯಕ್ಕೆ 11 ಓವರ್‌ಗಳಲ್ಲಿ 1 ವಿಕೆಟ್‌ಗೆ 16 ರನ್ ಕಲೆಹಾಕಿದೆ. ಭಾರತ ಸದ್ಯ 243 ರನ್ ಹಿನ್ನಡೆಯಲ್ಲಿದ್ದು, ಯಶಸ್ವಿ ಜೈಸ್ವಾಲ್ (6*) ಜತೆ ಶುಭಮಾನ್ ಗಿಲ್ (10*) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.