

ಮುಂಬೈ: ಎಡಗೈ ಮಧ್ಯಮ ವೇಗದ ಬೌಲರ್ ಅಶ್ವನಿ ಕುಮಾರ್ (24ಕ್ಕೆ 4) ಪದಾರ್ಪಣೆ ಪಂದ್ಯದಲ್ಲೇ ಪ್ರದರ್ಶಿಸಿದ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ 18ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಕೋಲ್ಕತ ನೈಟ್ರೈಡರ್ಸ್ ಎದುರು 8 ವಿಕೆಟ್ಗಳ ಸುಲಭ ಗೆಲುವು ದಾಖಲಿಸಿದೆ. ಆರಂಭಿಕ ಎರಡು ಪಂದ್ಯಗಳಲ್ಲಿ ಸೋಲುಂಡಿರುವ ಹಾರ್ದಿಕ್ ಪಾಂಡ್ಯ ಬಳಗ ತವರಿನ ಅಂಗಣದಲ್ಲಿ ಭರ್ಜರಿ ಕಂಬ್ಯಾಕ್ ಮಾಡಿದೆ. ಸೋಲಿನೊಂದಿಗೆ ಕೆಕೆಆರ್ ಅಂಕಪಟ್ಟಿಯಲ್ಲಿ ಕೊನೇ ಸ್ಥಾನಕ್ಕೆ ಕುಸಿದಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಪಂಜಾಬ್ನ 23 ವರ್ಷದ ಅಶ್ವನಿ ಕುಮಾರ್ (24ಕ್ಕೆ 4) ದಾಳಿ ಎದುರು ಅಗ್ರ ಕ್ರಮಾಂಕದ ಬ್ಯಾಟರ್ಗಳು ವೈಲ್ಯ ಕಂಡರು. 45 ರನ್ಗಳಿಗೆ 5 ವಿಕೆಟ್ ಕಳೆದುಕೊಂಡ ಕೆಕೆಆರ್ ತಂಡ ಅಂತಿಮವಾಗಿ 16.2 ಓವರ್ಗಳಲ್ಲಿ 116 ರನ್ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ವಿಕೆಟ್ ಕೀಪರ್-ಬ್ಯಾಟರ್ ರ್ಯಾನ್ ರಿಕೆಲ್ಟನ್ (62* ರನ್, 41 ಎಸೆತ, 4 ಬೌಂಡರಿ, 5 ಸಿಕ್ಸರ್) ಬಿರುಸಿನಾಟದ ನೆರವಿನಿಂದ ಮುಂಬೈ 12.5 ಓವರ್ಗಳಲ್ಲೇ 2 ವಿಕೆಟ್ಗೆ 121 ರನ್ಗಳಿಸಿ ಗೆಲುವು ಒಲಿಸಿಕೊಂಡಿತು.
ಅಶ್ವನಿ ಕುಮಾರ್ , ಮುಂಬೈ ಆಟಗಾರನಾನು ಕೆಕೆಆರ್ ವಿರುದ್ಧ ಕಣಕ್ಕಿಳಿಯುವ ಬಗ್ಗೆ ಟೀಮ್ ಮ್ಯಾನೇಜ್ಮೆಂಟ್ ತಿಳಿಸಿದಾಗ ಸ್ಪಲ್ಪ ಒತ್ತಡಕ್ಕೆ ಒಳಗಾದೆ. ಈ ಒತ್ತಡ ಹೊಟ್ಟೆ ಹಸಿವನ್ನು ಮರೆಸಿತು. ಕೇವಲ ಒಂದು ಬಾಳೆಹಣ್ಣು ಸೇವಿಸಿ ಕಣಕ್ಕಿಳಿದೆ. ಆದರೆ ನಾಯಕ (ಹಾರ್ದಿಕ್) ಹಾಗೂ ಇತರ ಆಟಗಾರರ ಬೆಂಬಲ ಒತ್ತಡ ತಗ್ಗಿಸಿ, ಸಾಮರ್ಥ್ಯ ಪ್ರದರ್ಶಿಸಲು ನೆರವಾಯಿತು.
10. ಕೆಕೆಆರ್ ತಂಡ ಐಪಿಎಲ್ನಲ್ಲಿ 10 ಬಾರಿ 120 ರನ್ ಒಳಗೆ ಆಲೌಟ್ ಆಗಿದ್ದು, ಇದರಲ್ಲಿ ಮುಂಬೈ ಎದುರೇ 6 ಬಾರಿ ಈ ದೃಷ್ಟಾಂತ ಎದುರಾಗಿದೆ.
4. ಅಶ್ವನಿ ಕುಮಾರ್ ಐಪಿಎಲ್ ಪದಾರ್ಪಣೆಯಲ್ಲಿ 4 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಮೊದಲ ಭಾರತೀಯ ಹಾಗೂ ಒಟ್ಟಾರೆ 6ನೇ ಸಾಧಕ ಎನಿಸಿದರು. ಅಲ್ಜಾರಿ ಜೋಸ್ೆ (12ಕ್ಕೆ6), ಆಂಡ್ರೊ ಟೈ (17ಕ್ಕೆ 5), ಶೋಯಿಬ್ ಅಖ್ತರ್(11ಕ್ಕೆ 4) ಕೆವೊನ್ ಕೂಪರ್ (26ಕ್ಕೆ 4) ಹಾಗೂ ಡೇವಿಡ್ ವೈಸ್ (33ಕ್ಕೆ 4) ಹಿಂದಿನ ಸಾಧಕರು.
1. ಐಪಿಎಲ್ನಲ್ಲಿ ಮುಂಬೈ ಪರ ತಾನೆಸೆದ ಮೊದಲ ಎಸೆತದಲ್ಲಿ ವಿಕೆಟ್ ಪಡೆದ 4ನೇ ಬೌಲರ್ ಅಶ್ವನಿ ಕುಮಾರ್. ಅಲಿ ಮುತರ್ಜಾ, ಅಲ್ಜಾರಿ ಜೋಸ್ೆ, ಡೆವಾಲ್ಡ್ ಬ್ರೇವಿಸ್ ಮೊದಲಿಗರು.
4. ಮನೀಷ್ ಪಾಂಡೆ 18 ಆವೃತ್ತಿಗಳಲ್ಲೂ ಆಡಿದ 4ನೇ ಆಟಗಾರ ಎನಿಸಿದರು. ಎಂಎಸ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಹಿಂದಿನ ಸಾಧಕರು.