

ಅಡಿಲೇಡ್: ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆತಿಥೇಯ ಆಸ್ಟ್ರೇಲಿಯಾ ಹಾಗೂ ಸರಣಿ ಸಮಬಲದ ನಿರೀಕ್ಷೆಯಲ್ಲಿರುವ ಪ್ರವಾಸಿ ಇಂಗ್ಲೆಂಡ್ ತಂಡಗಳು ಗುರುವಾರ ಆರಂಭವಾಗಲಿರುವ ಆಶಸ್ ಸರಣಿಯ 2ನೇ ಹಾಗೂ ಅಹರ್ನಿಶಿ ಹಣಾಹಣಿಗೆ ಸಜ್ಜಾಗಿವೆ. ಸ್ಟಾರ್ ಬ್ಯಾಟರ್ ಡೇವಿಡ್ ವಾರ್ನರ್ ಫಿಟ್ನೆಸ್ ಗೊಂದಲ ಮುಂದುವರಿದರೆ, ಅಹರ್ನಿಶಿ ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ತೋರಿರುವ ಜೋಸ್ ಹ್ಯಾಸಲ್‌ವುಡ್ ಅಲಭ್ಯತೆಯೂ ಆಸೀಸ್ ತಂಡವನ್ನು ಕಾಡಲಿದೆ. ಮತ್ತೊಂದೆಡೆ, ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋಲು ಕಂಡಿರುವ ಇಂಗ್ಲೆಂಡ್ ತಂಡ ಸರಣಿ ಸಮಬಲದ ತವಕದಲ್ಲಿದೆ. ಹೊನಲು ಬೆಳಕಿನ ಟೆಸ್ಟ್‌ಗಳಲ್ಲಿ ಇದುವರೆಗೆ ಅಜೇಯ ಸಾಧನೆ ಮಾಡಿರುವ ಆಸೀಸ್ ತಂಡ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.
ಗಾಯಾಳು ಜೋಸ್ ಹ್ಯಾಸಲ್‌ವುಡ್ ಬದಲಿಗೆ ಜೇ ರಿಚರ್ಡ್‌ಸನ್ ತಂಡ ಕೂಡಿಕೊಂಡಿದ್ದಾರೆ. ಇಂಗ್ಲೆಂಡ್ ಅಹರ್ನಿಶಿ ಪಂದ್ಯಗಳಲ್ಲಿ ಉತ್ತಮ ದಾಖಲೆ ಹೊಂದಿಲ್ಲ. ಇದುವರೆಗೆ ಆಡಿರುವ 4 ಪಂದ್ಯಗಳಲ್ಲಿ ಒಂದೇ ಗೆಲುವು ದಾಖಲಿಸಿದೆ. ಈ ಬಾರಿ ಅನುಭವಿ ವೇಗಿಗಳಾದ ಜೇಮ್ಸ್ ಆಂಡರ್‌ಸನ್-ಸ್ಟುವರ್ಟ್ ಬ್ರಾಡ್ ಇಬ್ಬರೂ ಕಣಕ್ಕಿಳಿದು ಇಂಗ್ಲೆಂಡ್‌ಗೆ ಬಲ ತುಂಬುವ ನಿರೀಕ್ಷೆ ಇದೆ. 2017ರಲ್ಲಿ ತವರಿನಲ್ಲಿ ವೆಸ್ಟ್ ಇಂಡೀಸ್ ಎದುರು ಕಡೇ ಬಾರಿಗೆ ಗೆಲುವು ದಾಖಲಿಸಿದೆ. ಅಲ್ಲದೆ, ಇಂಗ್ಲೆಂಡ್ ತಂಡಕ್ಕೂ ಗಾಯದ ಸಮಸ್ಯೆ ಎದುರಾಗಿದೆ. ಸ್ಪೋಕ್ಸ್ ಗುರುವಾರದ ವೇಳೆ ಸಂಪೂರ್ಣ ಸುಧಾರಿಸುವ ವಿಶ್ವಾಸದಲ್ಲಿ ಇಂಗ್ಲೆಂಡ್ ತಂಡವಿದೆ.
ಗಾಬಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ 94 ರನ್ ಸಿಡಿಸಿ ಮಿಂಚಿದ್ದ ಡೇವಿಡ್ ವಾರ್ನರ್, ಎರಡನೇ ಇನಿಂಗ್ಸ್‌ನಲ್ಲಿ ಫೀಲ್ಡಿಂಗ್ ಮಾಡಿರಲಿಲ್ಲ. ಅಡಿಲೇಡ್‌ನಲ್ಲಿ ಅಭ್ಯಾಸದ ವೇಳೆಯಲ್ಲೂ ವಾರ್ನರ್ ಪೂರ್ಣ ಪ್ರಮಾಣದಲ್ಲಿ ಸುಧಾರಿಸಿದಂತೆ ಕಾಣಲಿಲ್ಲ. ಹೀಗಾಗಿ ವಾರ್ನರ್ ಅಹರ್ನಿಶಿ ಪಂದ್ಯಕ್ಕೆ ಲಭ್ಯರಾಗುವ ಬಗ್ಗೆ ಪೂರ್ಣಪ್ರಮಾಣದ ಮಾಹಿತಿ ಇಲ್ಲ. ಬ್ರಿಸ್ಬೇನ್‌ನಲ್ಲಿ 152 ರನ್ ಸಿಡಿಸಿದ್ದ ಟ್ರಾವಿಸ್ ಹೆಡ್, ವಾರ್ನರ್ ಎರಡನೇ ಪಂದ್ಯಕ್ಕೆ ಲಭ್ಯರಿರುವರು ಎಂದು ಮಾಹಿತಿ ನೀಡಿದ್ದಾರೆ.
*2 ಅಹರ್ನಿಶಿ ಪಂದ್ಯಗಳು
ಇದೀಗ ಒಂದೇ ಸರಣಿಯಲ್ಲಿ ಎರಡನೇ ಬಾರಿ ಅಹರ್ನಿಶಿ ಪಂದ್ಯಗಳನ್ನಾಡುವ ಅವಕಾಶ ಹೊಂದಿದೆ. ಸರಣಿಯ 5ನೇ ಪಂದ್ಯ ಪರ್ತ್‌ನಿಂದ ಹೋಬರ್ಟ್‌ಗೆ ಸ್ಥಳಾಂತರಗೊಂಡಿದೆ. ಇದೀಗ ಕಡೇ ಪಂದ್ಯ ಕೂಡ ಹೊನಲು ಬೆಳಕಿನಡಿಯಲ್ಲಿ ನಡೆಯಲಿದೆ.
*ಪಂದ್ಯ ಆರಂಭ: ಬೆಳಗ್ಗೆ 9.30
*ನೇರಪ್ರಸಾರ: ಸೋನಿ ನೆಟ್‌ವರ್ಕ್