

ರಾಜ್ಕೋಟ್: ದಿನದ ಆರಂಭದಲ್ಲೇ ಎಡಗೈ ಸ್ಪಿನ್ನರ್ ಜೆ.ಸುಚಿತ್ (85ಕ್ಕೆ 2) ಪ್ರವಾಸಿ ಕರ್ನಾಟಕ ತಂಡಕ್ಕೆ ಮೇಲುಗೈ ತಂದುಕೊಟ್ಟರೂ ರಾಷ್ಟ್ರೀಯ ಟೆಸ್ಟ್ ತಂಡದ ಸದಸ್ಯ ಚೇತೇಶ್ವರ ಪೂಜಾರ (162ರನ್, 238 ಎಸೆತ, 17 ಬೌಂಡರಿ, 1 ಸಿಕ್ಸರ್) ಹಾಗೂ ಶೆಲ್ಡನ್ ಜಾಕ್ಸನ್ (99* ರನ್, 191 ಎಸೆತ, 4 ಬೌಂಡರಿ, 2 ಸಿಕ್ಸರ್) ದಿನವಿಡಿ ಬ್ಯಾಡಿಂಗ್ ಕಾಯ್ದುಕೊಳ್ಳುವ ಮೂಲಕ ಆಘಾತ ನೀಡಿದರು. ಆರಂಭಿಕ ವೈಫಲ್ಯದ ನಡುವೆಯೂ ಆತಿಥೇಯ ಸೌರಾಷ್ಟ್ರ ತಂಡ ರಣಜಿ ಟ್ರೋಫಿಯ 5ನೇ ಸುತ್ತಿನ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಬೃಹತ್ ಮೊತ್ತದತ್ತ ಮುಖಮಾಡಿದೆ.
ಮಾಧವ್ರಾವ್ ಸಿಂಧಿಯಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ಆರಂಭಗೊಂಡ ಬಿ ಗುಂಪಿನ ಪಂದ್ಯದಲ್ಲಿ ಸ್ಪಿನ್ನರ್ ಜೆ.ಸುಚಿತ್ ಮಾರಕ ದಾಳಿ ನಡುವೆಯೂ ಪೂಜಾರ-ಶೆಲ್ಡನ್ ಜಾಕ್ಸನ್ ಜೋಡಿ ಮುರಿಯದ 3ನೇ ವಿಕೆಟ್ಗೆ ಪೇರಿಸಿದ 263 ರನ್ ಫಲವಾಗಿ ಮೊದಲ ದಿನದಾಟದ ಅಂತ್ಯಕ್ಕೆ 2 ವಿಕೆಟ್ಗೆ 296 ರನ್ ಗಳಿಸಿದೆ.
ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಸೌರಾಷ್ಟ್ರ ತಂಡಕ್ಕೆ ಎಡಗೈ ಸ್ಪಿನ್ನರ್ ಜೆ.ಸುಚಿತ್ ಮಾರಕ ದಾಳಿಯಿಂದ ಆಘಾತ ನೀಡಿದರು. ಇದರೊಂದಿಗೆ ಆರಂಭದಲ್ಲೇ ಸ್ಪಿನ್ನರ್ಗಳಿಗೆ ನೆರವೀಯುವ ಪಿಚ್ನ ಲಾಭ ಗಿಟ್ಟಿಸಿಕೊಳ್ಳಲು ಸುಚಿತ್ ಯಶಸ್ವಿಯಾದರು. ಸೌರಾಷ್ಟ್ರ ತಂಡದ ಆರಂಭಿಕರಾದ ಹಾರ್ವಿಕ್ ದೇಸಾಯಿ (13) ಹಾಗೂ ಸ್ನೆಲ್ ಪಟೇಲ್ (16) ಜೋಡಿ ಮಂದಗತಿ ಆರಂಭ ನೀಡಿತು. ಇನಿಂಗ್ಸ್ 17ನೇ ಓವರ್ನಲ್ಲಿ ವಿಕೆಟ್ ಕೀಪರ್- ಬ್ಯಾಟ್ಸ್ಮನ್ ಸ್ನೆಲ್ ಪಟೇಲ್ ಸುಚಿತ್ ಎಸೆತದಲ್ಲಿ ಅವರಿಗೆ ಕ್ಯಾಚ್ ನೀಡಿದರು. ಇದರೊಂದಿಗೆ 28 ರನ್ ಪೇರಿಸುವಷ್ಟರಲ್ಲಿ ಸೌರಾಷ್ಟ್ರ ಮೊದಲ ವಿಕೆಟ್ ಕಳೆದುಕೊಂಡಿತು. ಇದಾದ ಕೆಲಹೊತ್ತಿನಲ್ಲೇ ಹಾರ್ವಿಕ್ ದೇಸಾಯಿ ಕೂಡ ಸುಚಿತ್ ಎಸೆತದಲ್ಲಿ ಸಿದ್ದಾರ್ಥ್ಗೆ ಕ್ಯಾಚ್ ನೀಡಿದರು. 33 ರನ್ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಸೌರಾಷ್ಟ್ರದ ಮೇಲೆ ಕರ್ನಾಟಕ ಮೇಲುಗೈ ಕಂಡಿತ್ತು.
ತಜ್ಞ ಟೆಸ್ಟ್ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 50ನೇ ಶತಕ ದಾಖಲಿಸಿದರು. ಇದರೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 50 ಶತಕ ಪೂರೈಸಿದ ಭಾರತದ 9ನೇ ಬ್ಯಾಟ್ಸ್ಮನ್ ಎನಿಸಿಕೊಂಡರು. ಸುನೀಲ್ ಗಾವಸ್ಕರ್ (81), ಸಚಿನ್ ತೆಂಡುಲ್ಕರ್ (81), ರಾಹುಲ್ ದ್ರಾವಿಡ್ (68), ವಿಜಯ್ ಹಜಾರೆ (60), ದೀಲಿಪ್ ವೆಂಗ್ಸರ್ಕಾರ್ (55), ವಿವಿಎಸ್ ಲಕ್ಷ್ಮಣ್ (55), ಮೊಹಮದ್ ಅಜರುದ್ದೀನ್ (54) ಹಾಗೂ ವಾಸೀಂ ಜಾಫರ್ (57) ಈ ಸಾಧನೆ ಮಾಡಿದ್ದಾರೆ.
ರಾಷ್ಟ್ರೀಯ ಟೆಸ್ಟ್ ತಂಡದ ಆಟಗಾರ ಚೇತೇಶ್ವರ ಪೂಜಾರ ಹಾಗೂ ಶೆಲ್ಡನ್ ಜಾಕ್ಸನ್ ಜೋಡಿ ಕರ್ನಾಟಕ ದಾಳಿಗೆ ಪ್ರತಿರೋಧ ನೀಡಿತು. ಅಲ್ಪಮೊತ್ತಕ್ಕೆ ಕಡಿವಾಣ ಹಾಕುವ ಯೋಜನೆಯಲ್ಲಿದ್ದ ಕರ್ನಾಟಕ ತಂಡಕ್ಕೆ ದಿನವಿಡಿ ಬ್ಯಾಟಿಂಗ್ ಕಾಯ್ದುಕೊಳ್ಳುವ ಮೂಲಕ ಈ ಜೋಡಿ ಆಘಾತ ನೀಡಿತು. ಬೆಂಗಳೂರಿನಲ್ಲಿ ನಡೆದ ಕಳೆದ ಆವೃತ್ತಿಯ ಸೆಮಿಫೈನಲ್ನಲ್ಲಿ ಹೋರಾಟದಲ್ಲಿ ಕರ್ನಾಟಕ ತಂಡದಿಂದ ಗೆಲುವು ಕಸಿದಿದ್ದ ಈ ಜೋಡಿಯೇ ಮತ್ತೊಮ್ಮೆ ಶ್ರೇಯಸ್ ಗೋಪಾಲ್ ಪಡೆಯನ್ನು ಕಾಡಿತು. ಸುಮಾರು ಎರಡೂವರೆ ಅವಧಿ ಬ್ಯಾಟಿಂಗ್ ಕಾಯ್ದುಕೊಂಡ ಈ ಜೋಡಿ ದಿನವಿಡಿ ಪ್ರಭುತ್ವ ಸಾಧಿಸಿತು. ಈ ಜೋಡಿ ಬೇರ್ಪಡಿಸಲು ನಾಯಕ ಶ್ರೇಯಸ್ ಗೋಪಾಲ್ ನಡೆಸಿದ ಪ್ರಯೋಗ, ಜತೆಗೆ ಪದೆ ಪದೇ ಬೌಲರ್ ಬದಲಿಸಿದರೂ ಪ್ರಯೋಜನವಾಗಲಿಲ್ಲ. ಜತೆಗೆ ಶತಕದಂಚಿನಲ್ಲಿರುವ ಶೆಲ್ಡನ್ ದಿನದಾಟದ ಕೊನೇ ಹಂತದಲ್ಲಿ ವಿಕೆಟ್ ಕೀಪರ್ ಶರತ್ ಅವರಿಂದ ಜೀವದಾನ ಪಡೆದರು.
90 ಓವರ್ಗಳಲ್ಲಿ 2 ವಿಕೆಟ್ಗೆ 296
ಹಾರ್ವಿಕ್ ದೇಸಾಯಿ ಸಿ ಸಿದ್ಧಾರ್ಥ್ ಬಿ ಸುಚಿತ್ 13
ಸ್ನೆಲ್ ಪಟೇಲ್ ಸಿ ಮತ್ತು ಬಿ ಸುಚಿತ್ 16
ಚೇತೇಶ್ವರ ಪೂಜಾರ ಬ್ಯಾಟಿಂಗ್ 162
ಶೆಲ್ಡನ್ ಜಾಕ್ಸನ್ ಬ್ಯಾಟಿಂಗ್ 99
ಇತರ: 6. ವಿಕೆಟ್ ಪತನ: 1-28, 2-33. ಬೌಲಿಂಗ್: ರೋನಿತ್ 18-3-47-0, ಪ್ರತೀಕ್ ಜೈನ್ 15-9-22-0, ಸುಚಿತ್ 23-3-85-2, ಶ್ರೇಯಸ್ ಗೋಪಾಲ್ 12-0-63-0, ಪವನ್ ದೇಶಪಾಂಡೆ 12-0-33-0, ಪ್ರವೀಣ್ ದುಬೆ 10-0-41-0.
297: ಪ್ರವೀಣ್ ದುಬೆ, ರಣಜಿ ಟ್ರೋಫಿಯಲ್ಲಿ ಕರ್ನಾಟಕ ಪರ ಆಡಿದ 297ನೇ ಆಟಗಾರ ಎನಿಸಿಕೊಂಡರು. ಜತೆಗೆ ಪ್ರಸಕ್ತ ವರ್ಷ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ 3ನೇ ಆಟಗಾರ. ಇದಕ್ಕೂ ಮೊದಲು ವಿ.ಕೌಶಿಕ್, ರೋಹನ್ ಕದಂ ಪದಾರ್ಪಣೆ ಮಾಡಿದ್ದರು.
21: ಚೇತೇಶ್ವರ ಪೂಜಾರ, 66ನೇ ರಣಜಿ ಟ್ರೋಫಿ ಪಂದ್ಯದಲ್ಲಿ 21ನೇ ಶತಕ ಸಿಡಿಸಿದರು. ಸೌರಾಷ್ಟ್ರ ಪರ ಅತಿ ಹೆಚ್ಚು ಶತಕ ಸಿಡಿಸಿದ ಬ್ಯಾಟ್ಸ್ಮನ್ ಎನಿಸಿಕೊಂಡರು.
04: ಚೇತೇಶ್ವರ ಪೂಜಾರ, ರಣಜಿ ಟ್ರೋಫಿಯಲ್ಲಿ ಕರ್ನಾಟಕ ವಿರುದ್ಧ 4ನೇ ಶತಕ ಸಿಡಿಸಿದರು. ಇದಕ್ಕೂ ಮೊದಲು 2018-19ರಲ್ಲಿ (131*), 2012-13 (352), ಹಾಗೂ 2008-09 (112*) ಶತಕ ಬಾರಿಸಿದ್ದರು.
ಕರ್ನಾಟಕ ತಂಡದ ಮಾಜಿ ಆಟಗಾರ, ಗೋವಾ ತಂಡ ಮುನ್ನಡೆಸುತ್ತಿರುವ ಅಮಿತ್ ವರ್ಮ (113*ರನ್, 192 ಎಸೆತ, 15 ಬೌಂಡರಿ) ಪುದುಚೇರಿ ಎದುರು ಶತಕ ಸಿಡಿಸಿ ಸಂಭ್ರಮಿಸಿದರು. ಮೊದಲ ದಿನದಾಟದಲ್ಲಿ ಬಿಹಾರ್ ತಂಡದ ಇಂದ್ರಜಿತ್ ಕುಮಾರ್ (134), ಛತ್ತೀಸ್ಗಢ ತಂಡದ ಅಮಾನ್ದೀಪ್ ಖರೆ (105), ನಾಗಾಲ್ಯಾಂಡ್ ತಂಡದ ಶ್ರೀಕಾಂತ್ ಮುಂಡೆ (166), ಜಮ್ಮು ಕಾಶ್ಮೀರ ತಂಡದ ಪರ್ವೆಜ್ ರಸೂಲ್ (171*) ಶತಕ ದಾಖಲಿಸಿದರೆ, ಆಂಧ್ರದ ಕೆವಿ ಶಶಿಕಾಂತ್ (60ಕ್ಕೆ 5), ರೈಲ್ವೇಸ್ ತಂಡದ ಹಿಮಾಂಶು ಸಂಗ್ವಾನ್ (33ಕ್ಕೆ 6), ವಿದರ್ಭ ತಂಡದ ಅಕ್ಷಯ್ ವಾಖರೆ (56ಕ್ಕೆ 5), ಒಡಿಶಾದ ಸೂರ್ಯಕಾಂತ್ ಪ್ರಧಾನ್ (36ಕ್ಕೆ 6) 5 ವಿಕೆಟ್ ಗೊಂಚಲು ಪಡೆದರು. ಅಗರ್ತಲಾದಲ್ಲಿ ನಿಗದಿಯಾಗಿರುವ ತ್ರಿಪುರ ಹಾಗೂ ಉತ್ತರಾಖಂಡ ನಡುವಿನ ಎಲೈಟ್ ಸಿ ಗುಂಪಿನ ಪಂದ್ಯದ ಮೊದಲ ದಿನದಾಟ ಮಂದ ಬೆಳಕಿನಿಂದಾಗಿ ರದ್ದುಗೊಂಡಿತು.