

ನವದೆಹಲಿ: ಅರ್ಜುನ ಪ್ರಶಸ್ತಿಗೆ ಭಾಜನರಾಗಿರುವ ಷಟ್ಲರ್ ಸಾತ್ವಿಕ್ ಸಾಯಿರಾಜ್ ಸೇರಿದಂತೆ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ವಿಜೇತರಾಗಿರುವ ಮೂವರಿಗೆ ಕರೊನಾ ಸೋಂಕು ಕಾಣಿಸಿಕೊಂಡಿದ್ದು, ಶನಿವಾರ ನಡೆಯಲಿರುವ ವರ್ಚುವಲ್ ಕ್ರೀಡಾ ಪ್ರಶಸ್ತಿ ಪ್ರದಾನ ಸಮಾರಂಭದಿಂದ ದೂರ ಉಳಿಯಲಿದ್ದಾರೆ.
ಪ್ರಶಸ್ತಿ ಪುರಸ್ಕೃತ 74 ಮಂದಿಯ ಪೈಕಿ 65 ಜನರು ಹಾಜರಿರಲಿದ್ದಾರೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ತಿಳಿಸಿದೆ. ಗೈರಾಗುತ್ತಿರುವ 9 ಮಂದಿಯ ಪೈಕಿ ಖೇಲ್ರತ್ನ ಪುರಸ್ಕೃತ ಕ್ರಿಕೆಟಿಗ ರೋಹಿತ್ ಶರ್ಮ, ಅರ್ಜುನ ಪುರಸ್ಕೃತ ಇಶಾಂತ್ ಶರ್ಮ ಐಪಿಎಲ್ ಆಡಲು ಯುಎಇಗೆ ತೆರಳಿದ್ದರೆ, ಉಳಿದವರು ಕ್ವಾರಂಟೈನ್ ಮತ್ತು ಇತರ ಆರೋಗ್ಯ ಸಮಸ್ಯೆಯಿಂದಾಗಿ ಸಮಾರಂಭದಿಂದ ದೂರ ಉಳಿಯಲಿದ್ದಾರೆ. ಸಾತ್ವಿಕ್ ಹೊರತಾಗಿ ಪಾಸಿಟಿವ್ ಬಂದಿರುವ ಮತ್ತಿಬ್ಬರ ಹೆಸರನ್ನು ಬಹಿರಂಗಪಡಿಸಲಾಗಿಲ್ಲ.
ಇದೇ ಮೊದಲ ಬಾರಿಗೆ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿ ಸಮಾರಂಭವನ್ನು ಆನ್ಲೈನ್ ಮೂಲಕ ಆಯೋಜಿಸಲಾಗಿದೆ. ಆರೋಗ್ಯ ಸಚಿವಾಲಯದ ಮಾರ್ಗಸೂಚಿಯಂತೆ ಪ್ರಶಸ್ತಿ ಪುರಸ್ಕೃತರನ್ನು ಕೋವಿಡ್-19 ಪರೀೆಗೆ ಒಳಪಡಿಸಲಾಗಿದೆ. ಸಾಯ್ ಕೇಂದ್ರಗಳಲ್ಲಿ ಪ್ರಶಸ್ತಿ ವಿಜೇತರು ಹಾಜರಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ರಾಷ್ಟ್ರಪತಿ ಭವನದಿಂದ ವಿಡಿಯೋ ಕಾನ್ಫೆರೆನ್ಸ್ ಮೂಲಕ ಕ್ರೀಡಾ ಪ್ರಶಸ್ತಿಗಳನ್ನು ವಿತರಿಸಲಿದ್ದರೆ, ಪ್ರಶಸ್ತಿ ವಿಜೇತರು ದೇಶದ ವಿವಿಧ ಭಾಗಗಳ ಸಾಯ್ ಕೇಂದ್ರಗಳಲ್ಲಿ ಹಾಜರಿದ್ದು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಕ್ರೀಡಾ ಸಚಿವ ಕಿರಣ್ ರಿಜಿಜು, ಇನ್ನಿತರ ಅಧಿಕಾರಿಗಳು ವಿಜ್ಞಾನ ಭವನದಲ್ಲಿ ಕುಳಿತು ಸಮಾರಂಭ ವೀಕ್ಷಿಸಿಸಲಿದ್ದಾರೆ. ದೂರದರ್ಶನದಲ್ಲಿ ಕಾರ್ಯಕ್ರಮ ನೇರಪ್ರಸಾರ ಕಾಣಲಿದೆ.
ಬ್ಯಾಡ್ಮಿಂಟನ್ ಆಟಗಾರ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ, ಕಳೆದ ಒಂದು ವಾರದಿಂದ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. ಇದುವರೆಗೂ ಕೋವಿಡ್-19 ಸೋಂಕಿನ ಹೆಚ್ಚಿನ ಲಕ್ಷಣಗಳು ಕಾಣಿಸಿಕೊಂಡಿಲ್ಲ ಎಂದು 20 ವರ್ಷದ ಷಟ್ಲರ್ ತಿಳಿಸಿದ್ದಾರೆ. "ಇದು ಅನಿರೀಕ್ಷಿತವಾದರೂ ನಿಜ. ಕೆಲ ದಿನಗಳ ಹಿಂದೆ ಪರೀಕ್ಷೆಗೆ ಒಳಗಾಗಿದ್ದೆ. ಕಳೆದ ಐದು ದಿನಗಳಿಂದ ಕ್ವಾರಂಟೈನ್ನಲ್ಲಿದ್ದೇನೆ. ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ' ಎಂದು ಸಾತ್ವಿಕ್ ಹೇಳಿದ್ದಾರೆ. ಮುಂದಿನ 3 ದಿನಗಳಲ್ಲಿ ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಲಿದ್ದಾರೆ. ಇದಕ್ಕೂ ಮೊದಲು ರಾಷ್ಟ್ರೀಯ ತರಬೇತಿ ಶಿಬಿರದ ವೇಳೆ ಡಬಲ್ಸ್ ತಜ್ಞೆ ಸಿಕ್ಕಿ ರೆಡ್ಡಿ ಹಾಗೂ ಅವರ ಫಿಸಿಯೋ ಕಿರಣ್ಗೂ ಕರೊನಾ ವೈರಸ್ ಕಾಣಿಸಿಕೊಂಡಿತ್ತು. ಬಳಿಕ ಮರುದಿನವೇ ನಡೆದ ಮತ್ತೊಂದು ಟೆಸ್ಟ್ನಲ್ಲಿ ನೆಗೆಟಿವ್ ವರದಿ ಬಂದಿತ್ತು.