ಅರ್ಜುನ್‌ ಅಬ್ಬರ, ಪ್ಯಾಂಥರ್ಸ್‌ಗೆ ಜೈಕಾರ: ಬೆಂಗಳೂರು ಬುಲ್ಸ್​ಗೆ ಮತ್ತೆ ಸೋಲು

New Project (2)
Published on

ನೊಯ್ಡಾ: ಅರ್ಜುನ್‌ ದೇಶ್ವಾಲ್‌ ಅವರ ಅಮೋಘ ರೈಡಿಂಗ್‌ ಬಲದಿಂದ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 11ನೇ ಆವೃತ್ತಿಯ 49ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್‌ ತಂಡವನ್ನು 7 ಅಂಕಗಳಿಂದ ಮಣಿಸಿತು. ಇದರೊಂದಿಗೆ ಹಾಲಿ ಟೂರ್ನಿಯಲ್ಲಿ ನಾಲ್ಕನೇ ಜಯ ದಾಖಲಿಸುವಲ್ಲಿ ಪ್ಯಾಂಥರ್ಸ್‌ ಯಶ ಕಂಡಿತು. ಅತ್ತ ಬುಲ್ಸ್‌ ಆಟಗಾರರು 7ನೇ ಸೋಲಿಗೆ ಗುರಿಯಾದರು.

ನೊಯ್ಡಾ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿಪ್ಯಾಂಥರ್ಸ್‌ ತಂಡ 39-32 ಅಂಕಗಳಿಂದ ಬುಲ್ಸ್‌ ತಂಡಕ್ಕೆ ಸೋಲುಣಿಸಿ, ಐದು ಅಂಕ ಕಲೆಹಾಕಿತು. ಆರಂಭಿಕ ಹಿನ್ನಡೆಯ ಹೊರತಾಗಿಯೂ ದ್ವಿತೀಯಾರ್ಧದಲ್ಲಿ ಜೈಪುರ ಆಟಗಾರರು ರೇಡಿಂಗ್‌ ಮತ್ತು ಟ್ಯಾಕಲ್‌ ಎರಡರಲ್ಲೂಮಿಂಚಿದರು. ಇದರೊಂದಿಗೆ ಪಟನಾ ಪೈರೇಟ್ಸ್‌ ವಿರುದ್ಧದ ವೀರೋಚಿತ ಸೋಲಿನಿಂದ ಹೊರಬಂದರು.

ಜೈಪುರ ತಂಡದ ಪರ ಅರ್ಜುನ್‌ ದೇಶ್ವಾಲ್‌ (19 ಅಂಕ) ಮತ್ತು ಲಕಿ ಶರ್ಮ (6 ಅಂಕ) ಗಮನಾರ್ಹ ಪ್ರದರ್ಶನ ನೀಡಿದರೆ, ಬುಲ್ಸ್‌ ಪರ ಅಜಿಂಕ್ಯ (9 ಅಂಕ) ಮತ್ತು ಜತಿನ್‌ (5 ಅಂಕ) ಮಿಂಚಿದರಾದರೂ 2ನೇ ಅವಧಿಯಲ್ಲಿನಿರುತ್ಸಾಹಗೊಂಡರು.

ಇದಕ್ಕೂ ಮುನ್ನ ವಿರಾಮಕ್ಕೂ ಮುನ್ನ ಬುಲ್ಸ್‌ ಬಳಗವನ್ನು ಮೂವರು ಸದಸ್ಯರ ಬಲಕ್ಕೆ ತಳ್ಳಿದ್ದ ಜೈಪುರ, ದ್ವಿತೀಯಾರ್ಧ ಆರಂಭವಾದ ಮರು ನಿಮಿಷದಲ್ಲೇ ಆಲೌಟ್‌ ಮಾಡುವ ಮೂಲಕ ಪಂದ್ಯದಲ್ಲಿಮೊದಲ ಬಾರಿ 20-20 ರಲ್ಲಿ ಸಮಬಲ ಸಾಧಿಸಿತು. ಇದರೊಂದಿಗೆ ಉಭಯ ತಂಡಗಳ ಹೋರಾಟ ಮತ್ತಷ್ಟು ತೀವ್ರಗೊಂಡಿತು. ಉಭಯ ಆಟಗಾರರು ಟ್ಯಾಕಲ್‌ ಮತ್ತು ರೇಡಿಂಗ್‌ನಲ್ಲಿ ಸಮಬಲದ ಹೋರಾಟ ನೀಡಿದ ಕಾರಣ 22-22, 24-24, 25-25 ಹೀಗೆ ಪಂದ್ಯ ಸಾಗಿತು. ಆದರೆ 30 ನಿಮಿಷಗಳ ಆಟ ಮುಕ್ತಾಯಕ್ಕೆ ಜೈಪುರ ಪಿಂಕ್‌ ಪ್ಯಾಂಥರ್ಸ್‌ 2(28-26) ಅಂಕಗಳ ಮುನ್ನಡೆ ಸಾಧಿಸಿ ಎದುರಾಳಿ ತಂಡದ ಮೇಲೆ ಒತ್ತಡ ಹೇರುವ ಪ್ರಯತ್ನವನ್ನು ಯಶಸ್ವಿಯಾಗಿ ಮಾಡಿತು.

ಮುನ್ನಡೆಯ ಬಳಿಕ ಜೈಪುರ ಅತ್ಯಂತ ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರೆ, ಬುಲ್ಸ್‌ ಪುಟಿದೇಳುವ ಯೋಜನೆಯಲ್ಲೇ ಮುಳಗಿತು. ಈ ಮಧ್ಯೆ 9 ಅಂಕಗಳನ್ನು ಕಲೆಹಾಕಿದ ಬೆಂಗಳೂರು ಬುಲ್ಸ್‌ ತಂಡದ ಸ್ಟಾರ್ ‌ರೈಡರ್‌ ಅಜಿಂಕ್ಯ ಪವಾರ್‌, ಟೂರ್ನಿಯಲ್ಲಿ 500 ರೈಡಿಂಗ್‌ ಪಾಯಿಂಟ್ಸ್‌ ಕಲೆಹಾಕಿದ ಕೀರ್ತಿಯನ್ನು ತಮ್ಮದಾಗಿಸಿಕೊಂಡರು. 30ರಿಂದ 35 ನಿಮಿಷಗಳ ಅವಧಿಯಲ್ಲಿಟ್ಯಾಕಲ್‌ ಮತ್ತು ರೈಡಿಂಗ್‌ ಎರಡರಲ್ಲೂದಿಟ್ಟ ಆಟವಾಡಿದ ಜೈಪುರ 4 ಅಂಕಗಳನ್ನು ಗಳಿಸಿದರೆ, ನೀರಸ ಪ್ರದರ್ಶನ ನೀಡಿದ ಬುಲ್ಸ್‌ ಒಂದಂಕವನ್ನು ಗಳಿಸಲು ಸಾಧ್ಯವಾಗಲಿಲ್ಲ. ಪಂದ್ಯ ಮುಕ್ತಾಯಕ್ಕೆ 4 ನಿಮಿಷಗಳಿರುವಾಗ 2ನೇ ಬಾರಿ ಬೆಂಗಳೂರು ತಂಡವನ್ನು ಆಲೌಟ್‌ ಮಾಡಿದ ಜೈಪುರ 36-27ರಲ್ಲಿ ಮೇಲುಗೈ ಸಾಧಿಸುವ ಮೂಲಕ ಗೆಲುವಿನತ್ತ ಹೆಜ್ಜೆ ಹಾಕಿತು.

ಇದಕ್ಕೂ ಮುನ್ನ ಅರ್ಜುನ್‌ ದೇಶ್ವಾಲ್‌ ಅವರ ಸೂಪರ್‌ ಟೆನ್‌ ಸಾಹಸದ ಹೊರತಾಗಿಯೂ ಜತಿನ್‌ ಮತ್ತು ಅಜಿಂಕ್ಯ ಪವಾರ್‌ ಅವರ ಮಿಂಚಿನ ಆಟದ ಬಲದಿಂದ ಬೆಂಗಳೂರು ಬುಲ್ಸ್‌ ತಂಡ ಪಂದ್ಯದ ಮೊದಲಾರ್ಧ ಮುಕ್ತಾಯಕ್ಕೆ 19-17ರಲ್ಲಿಅಲ್ಪ ಮುನ್ನಡೆ ಗಳಿಸಿತು. ಪಂದ್ಯದ ಆರಂಭದಿಂದಲೂ ಮುನ್ನಡೆ ಸಾಧಿಸಿದ ಬುಲ್ಸ್‌ ಆಟಗಾರರು, 8 ನಿಮಿಷಗಳ ಒಳಗೆ ಮಾಜಿ ಚಾಂಪಿಯನ್‌ ಜೈಪುರ ಪಿಂಕ್‌ ಪ್ಯಾಂಥರ್ಸ್‌ ತಂಡವನ್ನು ಕಟ್ಟಿಹಾಕಿತು. ಹೀಗಾಗಿ ಮೊದಲ ಹತ್ತು ನಿಮಿಷಗಳಲ್ಲಿ12-9ರಲ್ಲಿಮೇಲುಗೈ ಸಾಧಿಸಿದ ನಿತಿನ್‌ ನರ್ವಾಲ್‌ ಬಳಗ, ವಿರಾಮದವರೆಗೂ ಮನ್ನಡೆ ಕಾಯ್ದುಕೊಂಡಿತು. ಆರಂಭಿಕ ಹಿನ್ನಡೆಯ ಹೊರತಾಗಿಯೂ ಸ್ಟಾರ್‌ ರೇಡರ್‌ ಅರ್ಜುನ್‌ ದೇಶ್ವಾಲ್‌ ತಂಡವನ್ನು ಪದೇ ಪದೇ ಮೇಲೆತ್ತಿ ಪ್ರತಿರೋಧ ಒಡ್ಡಲು ಕಾರಣರಾದರು. ಮೊದಲಾರ್ಧಕ್ಕೆ ಅವರು 12 ಅಂಕಗಳನ್ನು ಗಳಿಸಿದ್ದು, ಇದಕ್ಕೆ ಸಾಕ್ಷಿಯಿಯಾಯಿತು.

ನವೆಂಬರ್‌ 13ರಂದು ಗುಜರಾತ್‌ ಜಯಂಟ್ಸ್‌ ಮತ್ತು ಬೆಂಗಾಲ್‌ ವಾರಿಯರ್ಸ್‌ ಹಾಗೂ ಪಟನಾ ಪೈರೇಟ್ಸ್‌ ಮತ್ತು ಹರಿಯಾಣ ಸ್ಟೀಲರ್ಸ್‌ ತಂಡಗಳು ಪೈಪೋಟಿ ನಡೆಸಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net