

ಅರ್ಜೆಂಟೀನಾ ತಂಡ 36 ವರ್ಷಗಳ ಬಳಿಕ ಫುಟ್ಬಾಲ್ ಜಗತ್ತಿನ ಚಾಂಪಿಯನ್ ಪಟ್ಟವೇರಿದೆ. ಸ್ಟಾರ್ ಆಟಗಾರ ಹಾಗೂ ನಾಯಕ ಲಿಯೋನೆಲ್ ಮೆಸ್ಸಿ ಬಾರಿಸಿದ ಅವಳಿ ಗೋಲು ಮತ್ತು ಪೆನಾಲ್ಟಿ ಶೂಟೌಟ್ನಲ್ಲಿ ಗೋಲು ಕೀಪರ್ ಡೇಮಿಯನ್ ಮಾರ್ಟಿನೇಜ್ ತೋರಿದ ಸಾಹಸದ ನೆರವಿನೊಂದಿಗೆ ಅರ್ಜೆಂಟೀನಾ ತಂಡ ಕತಾರ್ನಲ್ಲಿ ಭಾನುವಾರ ನಡೆದ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು ಪರಾಭವಗೊಳಿಸಿತು.
ಪೆನಾಲ್ಟಿ ಶೂಟೌಟ್ನಲ್ಲಿ ಅರ್ಜೆಂಟೀನಾ 4-2ರಿಂದ ಜಯಿಸಿತು. ಇದಕ್ಕಿಂತ ಮುನ್ನ ಪಂದ್ಯ ನಿಗದಿತ ಸಮಯದಲ್ಲಿ 2-2 ಮತ್ತು ಹೆಚ್ಚುವರಿ ಸಮಯದಲ್ಲಿ 3-3ರಿಂದ ಸಮಬಲಗೊಂಡಿತು. ಇದರಿಂದ ಸತತ 2ನೇ ಬಾರಿ ಪ್ರಶಸ್ತಿ ಜಯಿಸುವ ಫ್ರಾನ್ಸ್ ಕನಸು ಭಗ್ನಗೊಂಡಿತು. ಫ್ರಾನ್ಸ್ ಯುವತಾರೆ ಕೈಲಿಯಾನ್ ಎಂಬಪೆ ಬಾರಿಸಿದ ಹ್ಯಾಟ್ರಿಕ್ ಗೋಲುಗಳ ಸಾಹಸವೂ ವ್ಯರ್ಥಗೊಂಡಿತು.
ಅರ್ಜೆಂಟೀನಾದ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ವೃತ್ತಿಜೀವನದ 5ನೇ ಹಾಗೂ ಕೊನೆಯ ವಿಶ್ವಕಪ್ನಲ್ಲಿ ಕೊನೆಗೂ ಫಿಫಾ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕುವ ಕನಸನ್ನು ನನಸಾಗಿಸಿದರು. ಕ್ಲಬ್ ಮತ್ತು ರಾಷ್ಟ್ರೀಯ ತಂಡದ ಪರ ಉಳಿದೆಲ್ಲ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದ 35 ವರ್ಷದ ಮೆಸ್ಸಿಗೆ ವಿಶ್ವಕಪ್ ಟ್ರೋಫಿಯೊಂದೇ ಇದುವರೆಗೆ ಒಲಿದಿರಲಿಲ್ಲ. ಇದೀಗ ವಿಶ್ವಕಪ್ ಗೆದ್ದ ಪೀಲೆ, ಮರಡೋನಾ, ಜಿದಾನ್ ಮುಂತಾದ ದಿಗ್ಗಜರ ಸಾಲಿಗೆ ಮೆಸ್ಸಿ ಕೂಡ ಸೇರ್ಪಡೆಗೊಂಡಿದ್ದಾರೆ.
ಮೂರನೇ ವಿಶ್ವ ಕಿರೀಟ: ಅರ್ಜೆಂಟೀನಾ ತಂಡ 3ನೇ ಬಾರಿ ವಿಶ್ವಕಪ್ ಜಯಿಸಿತು. ಆಡಿದ 6 ಫೈನಲ್ಗಳ ಪೈಕಿ ಅರ್ಜೆಂಟೀನಾ, 1978 ಮತ್ತು 1986ರಲ್ಲೂ ವಿಶ್ವಕಪ್ ಜಯಿಸಿತ್ತು. 1930, 1990, 2014ರಲ್ಲಿ ರನ್ನರ್ಅಪ್ ಆಗಿತ್ತು.
ಎಂಬಪೆಗೆ ಗೋಲ್ಡನ್ ಬೂಟ್ ಸಮಾಧಾನ: ಟೂರ್ನಿಯಲ್ಲಿ ಒಟ್ಟು 8 ಗೋಲು ಸಿಡಿಸಿದ ಫ್ರಾನ್ಸ್ನ ಕೈಲಿಯಾನ್ ಎಂಬಪೆ ಗೋಲ್ಡನ್ ಬೂಟ್ ಪ್ರಶಸ್ತಿ ಗೆದ್ದರು.