

ಶಾಂಘೈ: ಧೀರಜ್ ಬೊಮ್ಮದೇವರ, ತರುಣ್ದೀಪ್ ರೈ ಮತ್ತು ಪ್ರವಿಣ್ ಜಾಧವ್ ಒಳಗೊಂಡ ಭಾರತದ ಪುರುಷರ ರಿಕರ್ವ್ ತಂಡ ಹಾಲಿ ಒಲಿಂಪಿಕ್ಸ್ ಚಾಂಪಿಯನ್ ದ. ಕೊರಿಯಾ ತಂಡಕ್ಕೆ ಆಘಾತ ನೀಡುವ ಮೂಲಕ ಆರ್ಚರಿ ವಿಶ್ವಕಪ್ನಲ್ಲಿ 14 ವರ್ಷಗಳ ಬಳಿಕ ಐತಿಹಾಸಿಕ ಸ್ವರ್ಣ ಪದಕ ಗೆದ್ದ ಸಾಧನೆ ಮಾಡಿದೆ. ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಅನುಭವಿ ಬಿಲ್ಗಾರ್ತಿ ದೀಪಿಕಾ ಕುಮಾರಿ ರಜತ ಪದಕ ಗೆದ್ದುಕೊಂಡರು. ಇದರೊಂದಿಗೆ ಭಾರತ ಕೂಟದಲ್ಲಿ ಒಟ್ಟು 5 ಚಿನ್ನ, 2 ಬೆಳ್ಳಿ ಮತ್ತು 1 ಕಂಚಿನ ಪದಕ ಗೆಲುವಿನೊಂದಿಗೆ ಅಭಿಯಾನ ಮುಗಿಸಿದೆ. ಇದು ಆರ್ಚರಿ ವಿಶ್ವಕಪ್ ಆವೃತ್ತಿಯೊಂದರಲ್ಲಿ ಭಾರತ ಇದುವರೆಗೆ ಗೆದ್ದ ಗರಿಷ್ಠ ಪದಕ ಸಾಧನೆಯಾಗಿದೆ.
40 ವರ್ಷದ ಯೋಧ ತರುಣ್ದೀಪ್ ರೈ ಒಳಗೊಂಡ ಭಾರತ ತಂಡ ಈ ಮುನ್ನ 2010ರಲ್ಲಿ ಕೊನೆಯದಾಗಿ ರಿಕರ್ವ್ ತಂಡ ವಿಭಾಗದಲ್ಲಿ ಚಿನ್ನ ಗೆದ್ದಿತ್ತು. ಫೈನಲ್ ಪಂದ್ಯದಲ್ಲಿ ಭಾರತ ತಂಡ 5-1ರಿಂದ ಕೊರಿಯಾ ತಂಡವನ್ನು ಮಣಿಸಿತು. ಮಿಶ್ರ ತಂಡ ವಿಭಾಗದಲ್ಲಿ ಅಂಕಿತಾ ಭಕತ್ ಮತ್ತು ಧೀರಜ್ ಜೋಡಿ ಕಂಚಿನ ಪದಕ ಜಯಿಸಿತು. ತಾಯ್ತನದ ಬಿಡುವಿನ ಬಳಿಕ ಮರಳಿರುವ ದೀಪಿಕಾ ಕುಮಾರಿ ಫೈನಲ್ನಲ್ಲಿ ಕೊರಿಯಾದ ಲಿಮ್ ಸಿಹ್ಯೋನ್ ವಿರುದ್ಧ 0-6ರಿಂದ ಪರಾಭವಗೊಂಡರು.