

ಕ್ರಿಕೆಟ್ ಚಟುವಟಿಕೆ ಪೂರ್ಣ ಪ್ರಮಾಣದಲ್ಲಿ ಪುನರಾರಂಭಗೊಳ್ಳದಿದ್ದರೂ ಜನಾಂಗೀಯ ನಿಂದನೆ ಆರೋಪಗಳು ಸದ್ದು ಮಾಡುತ್ತಿವೆ. ಅಮೆರಿಕದಲ್ಲಿ ಇತ್ತೀಚೆಗೆ ಜಾರ್ಜ್ ಫ್ಲಾಯ್್ಡ ಅವರನ್ನು ಸ್ಥಳೀಯ ಪೊಲೀಸರು ಕೊಂದಿದ್ದೆ ತಡ, ಜಾಗತಿಕ ಕ್ರೀಡಾ ಕ್ಷೇತ್ರದಲೂ ವರ್ಣಭೇದ ನೀತಿ ಅನುಸರಿಸಿದ್ದ, ನಿಷೇಧವಿದ್ದರೂ ಅಂಥ ಪದಗಳನ್ನು ಪ್ರಯೋಗಿಸಿದ್ದ ಹಿಂದಿನ ವಿವಾದಗಳೆಲ್ಲವೂ ಮತ್ತೆ ಜೀವ ಪಡೆದುಕೊಳ್ಳಲಾರಂಭಿಸಿವೆ. ಮೈದಾನದಲ್ಲೇ ಆಟಗಾರರು ಪರಸ್ಪರ ನಿಂದಿಸಿಕೊಂಡಿದ್ದನ್ನೂ ನೋಡಿದ್ದೇವೆ. ಅಂಥ ಆಟಗಾರರ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಶಿಸ್ತು ಕ್ರಮಕೈಗೊಂಡಿದ್ದನ್ನೂ ಗಮನಿ ಸಿದ್ದೇವೆ. 60ರ ದಶಕದಿಂದಲೂ ಕ್ರಿಕೆಟ್ನಲ್ಲಿ ಜನಾಂಗೀಯ ನಿಂದನೆ ಆರೋಪಗಳು ಹಾಸುಹೊಕ್ಕಾಗಿವೆ. ಕೆಲ ಖ್ಯಾತ ಕ್ರಿಕೆಟಿಗರೇ ಇಂಥ ವಿವಾದಗಳ ಸುಳಿಯಲ್ಲಿ ಸಿಲುಕಿ ಜಝುರಿತಗೊಂಡಿದ್ದಾರೆ. ಅವುಗಳಲ್ಲಿ ಪ್ರಮುಖ ಘಟನಾವಳಿಗಳ ಸಂಕ್ಷಿಪ್ತ ನೋಟ ಇಲ್ಲಿದೆ.
ದ. ಆಫ್ರಿಕಾ ನಿರ್ಬಂಧಕ್ಕೆ ನಾಂದಿ ಹಾಡಿದ ದ್ವೇಷ
ದಕ್ಷಿಣ ಆಫ್ರಿಕಾದಲ್ಲಿ ಜನಿಸಿದ್ದು 60ರ ದಶಕದಲ್ಲಿ ಇಂಗ್ಲೆಂಡ್ ಪರ ಕ್ರಿಕೆಟ್ ಆಡುತ್ತಿದ್ದ ಬ್ಯಾಸಿಲ್ ಡಿ ಓಲಿವೀರಾ ಅತ್ಯುತ್ತಮ ಆಲ್ರೌಂಡರ್ ಎನಿಸಿದ್ದರು. ದಕ್ಷಿಣ ಆಫ್ರಿಕಾದ ಕೇಪ್ ಪ್ರಾಂತ್ಯದ ಮಿಶ್ರಸಂತತಿಯ ವ್ಯಕ್ತಿಯಾಗಿದ್ದ ಇವರು ಇಂಗ್ಲೆಂಡ್ ತಂಡದೊಂದಿಗೆ 1968ರಲ್ಲಿ ದಕ್ಷಿಣ ಆಫ್ರಿಕಾದ ಪ್ರವಾಸಕ್ಕೆ ತೆರಳಿದ್ದರು. ಆದರೆ ಮಿಶ್ರಸಂತತಿಯವರು ಎಂಬ ಕಾರಣಕ್ಕಾಗಿ ದಕ್ಷಿಣ ಆಫ್ರಿಕಾ ಸರ್ಕಾರ ದೇಶದೊಳಗೆ ಪ್ರವೇಶಿಸದಂತೆ ನಿರ್ಬಂಧಿಸಿತು. ಇದು ದೊಡ್ಡ ವಿವಾದವಾಗಿ ಮಾರ್ಪಟ್ಟು, ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾದ ಪ್ರವಾಸವನ್ನೇ ರದ್ದುಗೊಳಿಸಿತು. ದಕ್ಷಿಣ ಆಫ್ರಿಕಾವನ್ನು ಕ್ರಿಕೆಟ್ ಜಗತ್ತಿನಿಂದ ಪ್ರತ್ಯೇಕಗೊಳಿಸುವ ಜಾಗತಿಕ ನಿಷೇಧಕ್ಕೂ ಈ ಘಟನೆ ನಾಂದಿ ಹಾಡಿತು.
ಟೋನಿ ಗ್ರೇಗ್ ವರ್ಸಸ್ ವೆಸ್ಟ್ ಇಂಡೀಸ್
1975ರ ಇಂಗ್ಲೆಂಡ್ ತಂಡದ ನಾಯಕ ಟೋನಿ ಗ್ರೆಗ್ ಹಾಗೂ ವೆಸ್ಟ್ ಇಂಡೀಸ್ ತಂಡದ ನಡುವಿನ ವಾಗ್ವಾದ ಆಗ ಭಾರಿ ಸದ್ದುಮಾಡಿತ್ತು. ವೆಸ್ಟ್ ಇಂಡೀಸ್ ಕ್ರಿಕೆಟಿಗರನ್ನು ‘ಗ್ರಾವೆಲ್’ (ಅಂಗಲಾಚುವಿಕೆ) ಮಾಡುವಂತೆ ಎಂದು ಗ್ರೆಗ್ ಹೇಳಿದ್ದರು. ‘ಹಿನ್ನಡೆಗೆ ಒಳಗಾದರೆ ಅವರು ತಮ್ಮ ಮಾನವನ್ನು ಕಾಪಾಡುವಂತೆ ಅಂಗಲಾಚುತ್ತಾರೆ. ನನಗೂ ಅದೇ ಬೇಕಿದೆ ’ ಎಂದು ಹೇಳಿದ್ದರು. ವೆಸ್ಟ್ ಇಂಡೀಸ್ನ ಪೂರ್ವಿಕರು ಅನೇಕರು ಜೀತದಾಳುಗಳಾಗಿ ಕೆಲಸ ಮಾಡಿದವರಾಗಿದ್ದರು. ಅವರೆಲ್ಲರೂ ತಮ್ಮನ್ನು ಬಿಡುಗಡೆ ಮಾಡುವಂತೆ ಅಂಗಲಾಚುತ್ತಿದ್ದರು. ಹಾಗಾಗಿ, ವೆಸ್ಟ್ ಇಂಡೀಸ್ನಲ್ಲಿ ಈ ಪದಕ್ಕೆ ನೇತ್ಯಾತ್ಮಾಕ ಅರ್ಥ ಇದೆ ಅಲ್ಲದೆ, ಅವಾಚ್ಯ ಶಬ್ದ ಎನಿಸಿದೆ. ಈ ಹಿನ್ನೆಲೆಯಲ್ಲಿ ಗ್ರೆಗ್ ಅವರ ಗ್ರಾವೆಲ್ ಪದದ ಬಳಕೆ ಬಗ್ಗೆ ಆಗ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಗ್ರೆಗ್ ದಕ್ಷಿಣ ಆಫ್ರಿಕಾ ಮೂಲದ ಬಿಳಿಯ ಆಟಗಾರನಾಗಿದ್ದರಿಂದ, ಇದು ಭಾರಿ ವಿವಾದದ ಸ್ವರೂಪವನ್ನೂ ಪಡೆದುಕೊಂಡಿತ್ತು.
ತಪ್ಪಿನ ಅರಿವಾಗಿ ಕ್ಷಮೆ ಕೇಳಿದ ಸರ್ಫ್ರಾಜ್
ಕಳೆದ ವರ್ಷದ ದರ್ಬಾನ್ನಲ್ಲಿ ನಡೆದ ಏಕದಿನ ಪಂದ್ಯದ ವೇಳೆ ಪಾಕಿಸ್ತಾನದ ನಾಯಕ ಸರ್ಫ್ರಾಜ್ ಅಹಮದ್, ದಕ್ಷಿಣ ಆಫ್ರಿಕಾದ ಅಂಡಿಲ್ ಫ್ಲೆಹುಕ್ವಾಯೊ ಅವರನ್ನು ಜನಾಂಗೀಯವಾಗಿ ನಿಂದಿಸಿದ್ದರು. ‘ಹೇ ಕರಿಯ, ಇಂದು ನಿನ್ನ ಅಮ್ಮ ಎಲ್ಲಿ ಕುಳಿತಿದ್ದಾರೆ? ಏನೆಂದು ನಿನ್ನನ್ನು ಹುರಿದುಂಬಿಸಲು ಆಕೆಗೆ ಹೇಳಿಕೊಟ್ಟಿರುವೆ’ ಎಂದು ನೋಯಿಸುವ ರೀತಿಯಲ್ಲಿ ಮಾತನಾಡಿದ್ದರು. ಆದರೆ ಆ ಕ್ಷಣವೆ ತಮ್ಮ ತಪ್ಪಿನ ಅರಿವಾಗುತ್ತಲೇ ಅವರು ಫ್ಲೆಹುಕ್ವಾಯೊ ಅವರ ಬಳಿ ಕ್ಷಮೆಯಾಚಿಸಿ, ವಿವಾದವಾಗದಂತೆ ಎಚ್ಚರಿಕೆ ವಹಿಸಿದ್ದರು.
ಮೊಯಿನ್ ಅಲಿಗೆ ಒಸಾಮ ಎಂದಿದ್ದರು
ಇಂಗ್ಲೆಂಡ್ ತಂಡದ ಆಲ್ರೌಂಡರ್ ಮೊಯಿನ್ ಅಲಿ ಅವರನ್ನು ಆಸ್ಟ್ರೇಲಿಯಾದ ಆಟಗಾರೊಬ್ಬರು ಜಾಗತಿಕ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಎಂದು ಜರಿದು ವಿವಾದ ಸೃಷ್ಟಿಸಿದ್ದರು. 2015ರ ಆಶಸ್ ಸರಣಿಯ ಕಾರ್ಡಿಫ್ ಟೆಸ್ಟ್ನಲ್ಲಿ ಈ ದುರ್ಘಟನೆ ನಡೆದಿತ್ತು. ‘ಆಸ್ಟ್ರೇಲಿಯಾದ ಆಟಗಾರರೊಬ್ಬರು ನನ್ನನ್ನು ಉದ್ದೇಶಿಸಿ, ಈ ಒಸಾಮಾನನ್ನು ತಕ್ಷಣವೇ ಪೆವಿಲಿಯನ್ಗೆ ಕಳುಹಿಸಿ’ ಎಂದು ಕೂಗಿ ಹೇಳಿದ್ದರು. ಇದು ನನ್ನ ಕಿವಿಗೆ ಬಿದ್ದಾಗ ಒಂದು ಕ್ಷಣ ನಂಬಲಿಲ್ಲ. ನಾನು ಮೈದಾನದಲ್ಲಿ ಸಿಟ್ಟಾಗುವುದು ಕಡಿಮೆ. ಆದರೆ, ಈ ಮಾತು ನನ್ನನ್ನು ತೀವ್ರವಾಗಿ ಕೆರಳಿಸಿತ್ತು’ ಎಂದು ಮೊಯಿನ್ ತಮ್ಮ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.
ಆಮ್ಲರನ್ನು ಟೆರರಿಸ್ಟ್ ಎಂದು ಕೆಲಸ ಕಳೆದುಕೊಂಡ ಜಾನ್ಸ್
ಆಸ್ಟ್ರೇಲಿಯಾದ ಮಾಜಿ ಆಟಗಾರ ಡೀನ್ ಜಾನ್ಸ್ ಶ್ರೀಲಂಕಾದಲ್ಲಿ ವೀಕ್ಷಕ ವಿವರಣೆ ನೀಡುವಾಗ ಭಾರಿ ವಿವಾದವೊಂದಕ್ಕೆ ನಾಂದಿ ಹಾಡಿದರು. ಇದೇ ಕಾರಣಕ್ಕಾಗಿ ಆ ತಕ್ಷಣದಿಂದಲೇ ಅವರು ತಮ್ಮ ಕೆಲಸವನ್ನೂ ಕಳೆದುಕೊಂಡರು! ಆಗಿದ್ದು ಏನೆಂದರೆ, 2006ರಲ್ಲಿ ಕೊಲಂಬೊದಲ್ಲಿ ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾದ ನಡುವೆ ಟೆಸ್ಟ್ ಪಂದ್ಯ ನಡೆಯುತ್ತಿತ್ತು. ನಾಲ್ಕನೇ ದಿನದಾಟದ ವೇಳೆ ಕುಮಾರ ಸಂಗಕ್ಕರ ಬ್ಯಾಟ್ನಿಂದ ಬ್ಯಾಟ್ನಿಂದ ಸಿಡಿದ ಕ್ಯಾಚ್ ಅನ್ನು ಹಶೀಂ ಆಮ್ಲಾ ಹಿಡಿದಿದ್ದರು. ತಕ್ಷಣವೇ ಜಾನ್ಸ್, ಭಯೋತ್ಪಾದಕನಿಗೆ ಮತ್ತೊಂದು ವಿಕೆಟ್ ಎಂದು ಉದ್ಗರಿಸಿದ್ದರು. ಇದು ಭಾರಿ ವಿವಾದದ ಸ್ವರೂಪ ಪಡೆದುಕೊಳ್ಳುವ ಮುನ್ನವೇ ಎಚ್ಚೆತ್ತುಕೊಂಡ ಸಂಸ್ಥೆ ಜಾನ್ಸ್ ಅವರನ್ನು ವೀಕ್ಷಕ ವಿವರಣೆಕಾರರ ಸ್ಥಾನದಿಂದ ಕಿತ್ತೊಗೆದಿತ್ತು.
ಸಂಚಲನ ಮೂಡಿಸಿದ ಮಂಕಿಗೇಟ್
ಭಾರತ ಕ್ರಿಕೆಟ್ ತಂಡ ಅನಿಲ್ ಕುಂಬ್ಳೆ ನೇತೃತ್ವದಲ್ಲಿ 2008ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ಆಸ್ಟ್ರೇಲಿಯಾದ ಆಂಡ್ರ್ಯೂ ಸೈಮಂಡ್ಸ್ ಇದ್ದಕಿದ್ದಂತೆ ಹರ್ಭಜನ್ ಸಿಂಗ್ ತಮ್ಮನ್ನು ಮಂಗ (ಮಂಕಿ) ಎಂದು ಕರೆದು ಜನಾಂಗೀಯವಾಗಿ ನಿಂದಿಸಿದ್ದಾಗಿ ಹೇಳುವ ಮೂಲಕ ಭಾರಿ ವಿವಾದಕ್ಕೆ ನಾಂದಿ ಹಾಡಿದರು. ತನ್ಮೂಲಕ ಎರಡೂ ತಂಡಗಳ ಆಟಗಾರರ ನಡುವೆ ತೀವ್ರ ತಿಕ್ಕಾಟಕ್ಕೆ ಇದು ಕಾರಣವಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ಮ್ಯಾಚ್ ರೆಫ್ರಿ ಮೈಕ್ ಪ್ರೊಕ್ಟರ್, ಹರ್ಭಜನ್ ಸಿಂಗ್ಗೆ ಮೂರು ಟೆಸ್ಟ್ ಪಂದ್ಯ ನಿಷೇಧ ಹೇರಿದ್ದರು. ಆದರೆ ಅತ್ಯಂತ ಪ್ರಬುದ್ಧವಾಗಿ ಪ್ರಕರಣವನ್ನು ನಿರ್ವಹಿಸಿದ ತಂಡದ ನಾಯಕರಾಗಿದ್ದ ಅನಿಲ್ ಕುಂಬ್ಳೆ, ಮೇಲ್ಮನವಿ ಸಲ್ಲಿಸಿ, ಶಿಕ್ಷೆಯನ್ನು ಮರುಪರಿಶೀಲಿಸುವಂತೆ ಮಾಡಿದರು. ತತ್ಪರಿಣಾಮ ಭಜ್ಜಿಗೆ ಪಂದ್ಯದ ಸಂಭಾವನೆಯ ಶೇ.50 ಭಾಗವನ್ನು ಜುಲ್ಮಾನೆಯಾಗಿ ಪಾವತಿಸುವ ಶಿಕ್ಷೆ ನೀಡಲಾಯಿತು.