RCB vs CSK: ಅದೇ ವೇಗ, ಮತ್ತದೇ ನಿಖರತೆ! ಧೋನಿ ವೇಗದ ಸ್ಟಂಪಿಂಗ್​ಗೆ ಸಾಲ್ಟ್​ ವಿಕೆಟ್​ ಪತನ

ವಿಜಯವಾಣಿ (98)
Published on

RCB vs CSK: ಐಪಿಎಲ್​ 18ನೇ ಆವೃತ್ತಿಯ ಅತ್ಯಂತ ಕುತೂಹಲಕಾರಿ, ರೋಚಕತೆಗೆ ಸಾಕ್ಷಿಯಾಗುವಂತ ಪಂದ್ಯ ಇಂದು (ಮಾ.28) ಚೆನ್ನೈನ ಚೆಪಾಕ್​ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಐಪಿಎಲ್​ ಇತಿಹಾಸದಲ್ಲಿ ಬದ್ಧ ವೈರಿ ತಂಡಗಳು ಎಂದೇ ಗುರುತಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಐದು ಬಾರಿ ಚಾಂಪಿಯನ್ಸ್ ಆಗಿ ಮಿಂಚಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿ ಸೆಣಸಾಡುತ್ತಿದ್ದು, ಟಾಸ್​ ಗೆದ್ದು ಸಿಎಸ್​ಕೆ ಬೌಲಿಂಗ್ ಆಯ್ದುಕೊಂಡಿದೆ.

ಟಾಸ್ ಗೆದ್ದ ರುತುರಾಜ್ ಗಾಯಕ್ವಾಡ್​ ಬೌಲಿಂಗ್ ಆಯ್ಕೆ ಮಾಡಿಕೊಂಡು, ಆರ್​ಸಿಬಿಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿದರು. ಅಂತೆಯೇ ಮೈದಾನಕ್ಕಿಳಿದ ಆರಂಭಿಕ ಬ್ಯಾಟರ್​ಗಳಾದ ವಿರಾಟ್​ ಕೊಹ್ಲಿ ಮತ್ತು ಫಿಲ್​​ ಸಾಲ್ಟ್​ ಉತ್ತಮ ಆರಂಭವನ್ನೇ ನೀಡಿದರು. ಮೊದಲೆರೆಡು ಓವರ್​ಗಳಲ್ಲೇ ಅಬ್ಬರದ ಬ್ಯಾಟಿಂಗ್ ನಡೆಸಿದ ಸಾಲ್ಟ್, ಉತ್ತಮ ರನ್​ ಕಲೆಹಾಕುತ್ತಿದ್ದಂತೆ ಮಹೇಂದ್ರ ಸಿಂಗ್ ಧೋನಿ ಅವರ ವೇಗದ ಸ್ಟಂಪಿಂಗ್​ಗೆ ವಿಕೆಟ್​ ಕಳೆದುಕೊಂಡರು.

ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಆಡುವಾಗ ಕ್ಯಾಪ್ಟನ್​ ಸೂರ್ಯಕುಮಾರ್​ ಯಾದವ್​ ವಿಕೆಟ್​ ಅನ್ನು ಕಬಳಿಸಿದ ಧೋನಿ, ಶರವೇಗದಲ್ಲಿ, ಅದೇ ನಿಖರತೆಯಲ್ಲಿ ಸ್ಟಂಪಿಂಗ್ ಮಾಡಿದ್ದರು. ಈ ಮೂಲಕ ತಮಗೆ ವಯಸ್ಸಾಯಿತು ಎಂದವರಿಗೆ ಖಡಕ್ ತಿರುಗೇಟು ನೀಡಿದ್ದರು. ಐಪಿಎಲ್​ನ ತಮ್ಮ ಮೊದಲ ಪಂದ್ಯದಲ್ಲಿ ತೋರಿದ ವೇಗದ ಸ್ಟಂಪಿಂಗ್​ ಅನ್ನೇ ಆರ್​ಸಿಬಿ ವಿರುದ್ಧದ ಎರಡನೇ ಪಂದ್ಯದಲ್ಲಿಯೂ ಪ್ರದರ್ಶಿಸಿದ ಕ್ಯಾಪ್ಟನ್​ ಕೂಲ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದರ ವಿಡಿಯೋ ತುಣುಕನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮುಖೇನ ಫ್ಯಾನ್ಸ್ ಧೋನಿ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net