

ದುಬೈ: ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಶುಭಮಾನ್ ಗಿಲ್ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬೆನ್ನಲ್ಲೇ ಮತ್ತೊಂದು ಗೌರವಕ್ಕೆ ಪಾತ್ರರಾಗಿದ್ದಾರೆ. ಐಸಿಸಿಯ ಫೆಬ್ರವರಿ ತಿಂಗಳ ಆಟಗಾರ ಪ್ರಶಸ್ತಿ ಗೆದ್ದುಕೊಂಡಿರುವ ಶುಭಮಾನ್ ಗಿಲ್, ಮೂರು ಬಾರಿ ಈ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯರೆನಿಸಿದ್ದಾರೆ.
ಗಿಲ್ ಆಸ್ಟ್ರೆಲಿಯಾದ ಸ್ಟೀವನ್ ಸ್ಮಿತ್ ಮತ್ತು ನ್ಯೂಜಿಲೆಂಡ್ನ ಗ್ಲೆನ್ ಫಿಲಿಪ್ಸ್ ಅವರನ್ನು ಹಿಂದಿಕ್ಕಿ ಐಸಿಸಿಯ ಮಾಸಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಆಡಿದ 5 ಏಕದಿನ ಪಂಧ್ಯಗಳಲ್ಲಿ ಗಿಲ್ 2 ಶತಕಗಳ ಸಹಿತ 101.50ರ ಸರಾಸರಿ ಮತ್ತು 94.19 ಸ್ಟ್ರೆ$ಕ್ರೇಟ್ನಲ್ಲಿ 406 ರನ್ ಬಾರಿಸಿದ್ದರು. ಈ ಪೈಕಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಎಲ್ಲ 3 ಪಂದ್ಯಗಳಲ್ಲೂ 50 ಪ್ಲಸ್ ರನ್ ಬಾರಿಸುವ ಮೂಲಕ ಸರಣಿಶ್ರೇಷ್ಠ ಪ್ರಶಸ್ತಿಗೂ ಪಾತ್ರರಾಗಿದ್ದರು. ಚಾಂಪಿಯನ್ಸ್ ಟ್ರೋಫಿಯಲ್ಲೂ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಗಮನಸೆಳೆದಿದ್ದರು.
ಗಿಲ್ ಈ ಮುನ್ನ 2023ರ ಜನವರಿ ಮತ್ತು ಸೆಪ್ಟೆಂಬರ್ ತಿಂಗಳಲ್ಲೂ ಐಸಿಸಿಯ ಮಾಸಿಕ ಪ್ರಶಸ್ತಿ ಗೆದ್ದುಕೊಂಡಿದ್ದರು. ಜಸ್ಪ್ರೀತ್ ಬುಮ್ರಾ 2 ಬಾರಿ ಈ ಪ್ರಶಸ್ತಿ ಗೆದ್ದಿರುವುದು ನಂತರದ ಗರಿಷ್ಠವೆನಿಸಿದೆ.