

ಬೆಂಗಳೂರು: ಭಾರತೀಯ ಅಥ್ಲೆಟಿಕ್ಸ್ ಸಂಸ್ಥೆಯ ನೂತನ ಪದಾಧಿಕಾಗಳ ಆಯ್ಕೆಗೆ ಮುಂದಿನ ವಾರ ಚಂಡೀಗಢದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದ್ದು, ಹಾಲಿ ಅಧ್ಯಕ್ಷ ಆದಿಲ್ ಸುಮರಿವಾಲಾ ಸೇರಿ ಇತರ ಹುದ್ದೆಗಳನ್ನು ನೂತನ ಸದಸ್ಯರು ತುಂಬಲಿದ್ದಾರೆ ಎನ್ನಲಾಗಿದೆ. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ಪದಕ ವಿಜೇತೆ, ಮಾಜಿ ಲಾಂಗ್‌ಜಂಪ್‌ಪಟು ಮತ್ತು ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಅಂಜು ಬಾಬಿ ಜಾರ್ಜ್ ಅಧ್ಯಕ್ಷೆ ಹುದ್ದೆಗೇರಲು ಮುಂಚೂಣಿಯಲ್ಲಿದ್ದಾರೆ. ಅಂಜು ಪ್ರಸಕ್ತ ಉಪಾಧ್ಯಕ್ಷೆ ಆಗಿದ್ದಾರೆ
.ಮುಂದಿನ ಐದು ವರ್ಷ ಅಂದರೆ 2025ರಿಂದ 2029ರವೆರೆಗೆ ಆಡಳಿತ ಮಂಡಳಿಯ ಸದಸ್ಯರ ಆಯ್ಕೆಗೆ ಜ.7 ಅಥವಾ 8ರಂದು ಚಂಡೀಗಢದಲ್ಲಿ ವಾರ್ಷಿಕ ಮಹಾಸಭೆ ನಡೆಯಲಿದೆ. ಈಗಾಗಲೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಇದುವರೆಗೆ ಮೂರು ಅವಧಿಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಸುಮರಿವಾಲಾ ಉತ್ತರಾಧಿಕಾರಿ ಪಟ್ಟವೇರಲು 47 ವರ್ಷದ ಅಂಜು ನಿಕಟ ಪೈಪೋಟಿ ನೀಡಲಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪದಾಧಿಕಾರಿಗಳು ಯಾರೂ ಮುಂದುವರಿಯುವ ಸಾಧ್ಯತೆಗಳಿಲ್ಲ. ಹೊಸ ಅಧಿಕಾರಿಗಳು ನೇಮಕವಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
2020ರಲ್ಲಿ ಉಪಾಧ್ಯಕ್ಷೆಯಾಗಿ ಆಯ್ಕೆಗೊಂಡ ಅಂಜು ಬಾಬಿ, ಈ ಬಾರಿ ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿದರೆ ಸಂಪೂರ್ಣ ಬೆಂಬಲ ನೀಡುವುದಾಗಿ ಇತರ ಸದಸ್ಯರು ಬೆಂಬಲ ಸೂಚಿಸಿದ್ದಾರೆ. ಆದರೆ ವೈಯಕ್ತಿಕ ಕಾರಣಗಳಿಂದ ಉನ್ನತ ಹುದ್ದೆಯನ್ನು ಅವರು ನಿರಾಕರಿಸಿದ್ದಾರೆ. ಜತೆಗೆ ಬದಲಾದ ಸನ್ನಿವೇಶದಲ್ಲಿ ಅಂಜು ಬಾಬಿ, ಸುಮರಿವಾಲಾ ಅವರನ್ನು ಹಿಂದಿಕ್ಕಿದರು ಆಶ್ಚರ್ಯವಿಲ್ಲ ಎನ್ನಲಾಗಿದೆ.
ಕಾರ್ಯದರ್ಶಿ ರವೀಂದರ್ ಚೌಧರಿ ವಿರುದ್ಧದ ಸ್ಪರ್ಧೆಯಿಂದ ಹಿಂದೆಸರಿದಿದ್ದ ಜಂಟಿ ಕಾರ್ಯದರ್ಶಿ ಸಂದೀಪ್ ಮೆಹ್ತಾ, ಈ ಬಾರಿ ಉನ್ನತ ಹುದ್ದೆಗಿಟ್ಟಿಸಿಕೊಳ್ಳುವ ರೇಸ್‌ನಲಿದ್ದಾರೆ. ಮಧುಕಾಂತ್ ಪಾಠಕ್ ಅವರು ಹೊಂದಿರುವ ಖಜಾಂಚಿ ಹುದ್ದೆ ಸ್ಥಾನ ತುಂಬಲು ಬಿಇ ಸ್ಟಾನ್ಲೆ ಜೋನ್ಸ್ ಮುಂಚೂಣಿಯಲ್ಲಿದ್ದಾರೆ. ಒಲಿಂಪಿಯನ್ ಸುಧಾ ಸಿಂಗ್, ಏಷ್ಯನ್ ಗೇಮ್ಸ್ ಮಾಜಿ ಚಾಂಪಿಯನ್ ಬಹದ್ದೂರ್ ಸಿಂಗ್ ಅಥ್ಲೆಟಿಕ್ಸ ಸಮಿತಿಯ ಪ್ರತಿನಿಧಿಗಳ ಹುದ್ದೆಯ ನಿರೀಕ್ಷೆಯಲ್ಲಿದ್ದಾರೆ. ಕಳೆದ ವರ್ಷ ನಡೆದ ವಿಶೇಷ ಮಹಾಸಭೆಯಲ್ಲಿ ನಡೆಯಬೇಕಿದ್ದ ಚುನಾವಣೆಯನ್ನು ಮುಂದೂಡಲಾಗಿತ್ತು.