

ಮುಂಬೈ: ಕ್ರಿಕೆಟ್ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಅಂಜಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು 30 ವರ್ಷವಾಗಿದೆ. ಈ ದಂಪತಿಗೆ ಪುತ್ರ ಅರ್ಜುನ್ ತೆಂಡೂಲ್ಕರ್, ಪುತ್ರಿ ಸಾರಾ ತೆಂಡೂಲ್ಕರ್ ಎಂಬ ಇಬ್ಬರು ಮಕ್ಕಳಿದ್ದಾರೆ. ಸಚಿನ್ ತನಗಿಂತ ಹಿರಿಯಳಾದ ಅಂಜಲಿಯನ್ನು ಪ್ರೀತಿಸಿ ಮದುವೆಯಾದದ್ದು ಗೊತ್ತೇ ಇದೆ.
ಇದರ ನಡುವೆ ಅಂಜಲಿ ತಾಯಿ ಅನ್ನಾಬೆಲ್ಲೆ ಮೆಹ್ತಾ ಅವರು ಸಚಿನ್ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಇವರಿಬ್ಬರ ಪ್ರೇಮದ ಬಗ್ಗೆ ಅವರು ತಮ್ಮ ಹೊಸ ಪುಸ್ತಕ 'ಮೈ ಪ್ಯಾಸೇಜ್ ಟು ಇಂಡಿಯಾ'ದಲ್ಲಿ ಈ ವಿಷಯಗಳನ್ನು ತಿಳಿಸಿದ್ದಾರೆ.
ಮಗಳು ಅಂಜಲಿ ತಾನು ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದೇನೆ ಮತ್ತು ಅವನನ್ನು ಮದುವೆಯಾಗುವುದಾಗಿ ಹೇಳಿದಳು. ಆಗ ನಾನು ಆ ಹುಡುಗನನ್ನು ನೋಡಲು ಬಯಸಿದ್ದೆ. ಅದರಂತೆ ಮನೆಗೆ ಕರೆತರಲು ಮಗಳಿಗೆ ತಿಳಿಸಿದೆ. ಮಗಳು ಸಚಿನ್‌ಗೆ ತಿಳಿಸಿದ್ದು, ಸಚಿನ್ ತನ್ನನ್ನು ಭೇಟಿಯಾಗಲು ಒಂದು ದಿನ ಬಂದರು ಎಂದು ದಿನದ ಘಟನೆಯನ್ನು ಅನ್ನಾಬೆಲ್ಲೆ ಪುಸ್ತಕದಲ್ಲಿ ಬರೆದಿದ್ದಾರೆ.
ಸಚಿನ್ ಭಾರತೀಯ ಕ್ರಿಕೆಟ್‌ನಲ್ಲಿ ಅತ್ಯಂತ ಪ್ರಭಾವಶಾಲಿ ಸ್ಟಾರ್ ಕ್ರಿಕೆಟಿಗ ಎಂದು ನನಗೆ ಆಗ ಅರಿವಾಯಿತು. ಆತ ಆರು ಅಡಿ ಇರಬಹುದು, ಸುರಸುಂದರಾಂಗನಾಗಿರುತ್ತಾನೆ ಎಂದುಕೊಂಡಿದ್ದೆ. ಆದರೆ ಆತ 19 ವರ್ಷದ ಹುಡುಗನಾಗಿದ್ದ. ಮಗುವಿನಂತೆ ಕಾಣುತ್ತಿದ್ದ. ನನ್ನ ಮಗಳಷ್ಟೇ ಉದ್ದವಿದ್ದ. ಆದರೆ ಅಂಜಲಿ ತನಗಿಂತ ಕಡಿಮೆ ವಯಸ್ಸಿನ ಹುಡುಗನನ್ನು ಪ್ರೀತಿಸಿದ್ದಳು ಎಂದು ಆಗ ನನಗೆ ತಿಳಿಯಿತು ಎಂದು ಬರೆದುಕೊಂಡಿದ್ದಾರೆ.
ಅನೇಕ ಕ್ರಿಕೆಟಿಗರಂತೆ ಸಚಿನ್ ಪ್ಲೇಬಾಯ್ ಆಗಿ ಹೊರಹೊಮ್ಮಬಹುದೆಂದು ನಾನು ಚಿಂತೆ ಮಾಡಿದ್ದೆ. ಆದರೆ ನನ್ನನ್ನು ಭೇಟಿಯಾದಾಗ ಅಂಜಲಿಯನ್ನು ಮದುವೆ ಮಾಡಿಕೊಳ್ಳಬೇಕೆಂದಿದ್ದೇನೆ ಎಂದು ನೇರವಾಗಿ ಹೇಳಿದ್ದು ನನಗೆ ಇಷ್ಟವಾಯಿತು. ಅವರ ಪವಿತ್ರ ಪ್ರೇಮ ನನಗೆ ಆಶ್ಚರ್ಯವನ್ನುಂಟುಮಾಡಿತು. ಆತನಿಗೆ ಲಕ್ಷಾಂತರ ಮಂದಿ ಅಭಿಮಾನಿಗಳಿರುವುದು, ಆತನ ಜನಪ್ರಿಯತೆ ಕಂಡು ಭಯವಾಗಿತ್ತು ಎಂದು ಅನ್ನಾಬೆಲ್ಲೆ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ.