

Anil Kumble: ನಿನ್ನೆ (ಡಿ.17) ದಿ ಗಬ್ಬಾ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯ ಮಳೆಗೆ ಡ್ರಾ ಆದ ಬೆನ್ನಲ್ಲೇ ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೂರನೇ ಟೆಸ್ಟ್ ಪಂದ್ಯದ ಕೊನೆಯಲ್ಲಿ ಅಶ್ವಿನ್ ಅವರು ತಮ್ಮ ನಿರ್ಧಾರಗಳನ್ನು ಮಾಧ್ಯಮದವರ ಮುಂದೆ ಅಧಿಕೃತವಾಗಿ ಪ್ರಕಟಿಸಿದರು. ತಕ್ಷಣದಿಂದಲೇ ಜಾರಿಗೆ ಬರುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ (Retirement) ಘೋಷಿಸಿದ್ದೇ ತಡ ಜಾಲತಾಣಗಳಲ್ಲಿ ಅಶ್ವಿನ್ ಅವರ ಕೊಡುಗೆಯನ್ನು ಸ್ಮರಿಸಿ ಅಭಿಮಾನಿಗಳು ಮತ್ತು ಹಿರಿಯ ಕ್ರಿಕೆಟಿಗರು ಮೆಚ್ಚುಗೆ ಸಲ್ಲಿಸಿದರು.
ಅನೇಕ ಟೀಮ್ ಇಂಡಿಯಾದ ಮಾಜಿ ಹಿರಿಯ ಕ್ರಿಕೆಟಿಗರು ಅಶ್ವಿನ್ ನಿವೃತ್ತಿಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಒಂದೇ ಪಂದ್ಯದಲ್ಲಿ 10 ವಿಕೆಟ್ ಕಬಳಿಸಿ, ದಾಖಲೆ ಬರೆದ ಕನ್ನಡಿಗ ಅನಿಲ್ ಕುಂಬ್ಳೆ ಅವರು ಬೇಸರ ಹೊರಹಾಕಿದ್ದಾರೆ. "ಅಭಿನಂದನೆಗಳು ಅಶ್ವಿನ್, ಈ ಅದ್ಭುತವಾದ ವೃತ್ತಿಜೀವನಕ್ಕೆ. ನೀವು ಭಾರತಕ್ಕೆ ಚಾಂಪಿಯನ್ ಬೌಲರ್ ಆಗಿದ್ದೀರಿ. ಟೀಮ್ ಇಂಡಿಯಾ ಚಾಂಪಿಯನ್ ಆಲ್‌ರೌಂಡರ್ ಆಗಿ ಹೊರಹೊಮ್ಮಿದ್ದೀರಿ. ಖಂಡಿತವಾಗಿಯೂ ನಾವು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೀವಿ. ನಿವೃತ್ತಿ ಅನ್ನೋದು ಅಷ್ಟು ಸುಲಭವಲ್ಲ. ಟೀಮ್ ಇಂಡಿಯಾ ಮತ್ತು ಫ್ಯಾನ್ಸ್ ನಿಮ್ಮನ್ನು ಬಹಳ ಮಿಸ್ ಮಾಡುಕೊಳ್ಳಲಿದ್ದಾರೆ" ಎಂದರು.
"ನಿಮ್ಮ ನಿವೃತ್ತಿ ಘೋಷಣೆ ನನ್ನಲ್ಲಿ ಅಸಮಾಧಾನ ತಂದಿದೆ. ಅದಕ್ಕೆ ಕಾರಣವು ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಮ್ಮ ವೃತ್ತಿಜೀವನವನ್ನು ಕೊನೆಗೊಳಿಸಿದ್ದಕ್ಕಾಗಿ ನಾನು ಸ್ವಲ್ಪ ನಿರಾಶೆಗೊಂಡಿದ್ದೇನೆ. ತಾತ್ತ್ವಿಕವಾಗಿ ನೀವು 619ರ ಗಡಿದಾಟಬೇಕಿತ್ತು ಎಂಬುದು ನನ್ನ ಆಶಯವಾಗಿತ್ತು. ಆದರೆ, ಅದಕ್ಕೆ ನಿಮ್ಮದೇ ಆದ ಕಾರಣಗಳಿವೆ. ನಿಮ್ಮ ಎರಡನೇ ಅಧ್ಯಾಯಕ್ಕೆ ಶುಭಾಶಯಗಳು ಮತ್ತು ಮೊದಲನೇ ಇನ್ನಿಂಗ್ಸ್ಗಿಂತಲೂ ನಿಮ್ಮ ಎರಡನೇ ಮತ್ತಷ್ಟು ಚೆನ್ನಾಗಿರಲಿದೆ ಎಂಬ ಖಾತ್ರಿ ನನಗಿದೆ. ಮತ್ತೊಮ್ಮೆ ಅಭಿನಂದನೆಗಳು. ಆಲ್ ದಿ ಬೆಸ್ಟ್, ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗುವೆ" ಎಂದು ಕುಂಬ್ಳೆ ಹೇಳಿದ್ದಾರೆ,(ಏಜೆನ್ಸೀಸ್).