ಆಂಡರ್​ಸನ್​-ತೆಂಡುಲ್ಕರ್​ ಟ್ರೋಫಿ ಅನಾವರಣ ನಾಳೆ: ಟೀಮ್ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷರ ಬದಲಾವಣೆ?

New Project (3)
Published on

ಲಂಡನ್: ಇಂಗ್ಲೆಂಡ್​ ಆತಿಥ್ಯದಲ್ಲಿ ನಡೆಯುವ ಭಾರತ ವಿರುದ್ಧದ ಟೆಸ್ಟ್​ ಸರಣಿಯ ವಿಜೇತರಿಗೆ ನೀಡಲಾಗುವ ಹೊಸ "ಆಂಡರ್​ಸನ್​-ತೆಂಡುಲ್ಕರ್​ ಟ್ರೋಫಿ'ಯನ್ನು (ಎಟಿಟಿ) ಗುರುವಾರ ಅಧಿಕೃತವಾಗಿ ಅನಾವರಣಗೊಳಿಸಲಾಗುವುದು. ಪಟೌಡಿ ಟ್ರೋಫಿಗೆ ಬದಲಾಗಿ ಈ ಹೊಸ ಹೆಸರನ್ನು ಇಡಲಾಗುತ್ತಿದೆ. ಆದರೆ ಅಹಮದಾಬಾದ್​ ವಿಮಾನ ದುರಂತ ಹಿನ್ನೆಲೆಯಲ್ಲಿ ಟ್ರೋಫಿ ಅನಾವರಣಕ್ಕೆ ಯಾವುದೇ ಸಮಾರಂಭ ನಡೆಯುವುದಿಲ್ಲ. ಬದಲಾಗಿ ಪ್ರಕಟಣೆಯ ಮೂಲಕ ಟ್ರೋಫಿ ಅನಾವರಣಗೊಳ್ಳಲಿದೆ. ಜತೆಗೆ ಸರಣಿಯ ಹೆಸರು ಹೊಂದಿರುವ ಇಬ್ಬರು ದಿಗ್ಗಜ ಕ್ರಿಕೆಟಿಗರಾದ ಸಚಿನ್​ ತೆಂಡುಲ್ಕರ್​ ಮತ್ತು ಜೇಮ್ಸ್​ ಆಂಡರ್​ಸನ್​ ಮೊದಲೇ ಚಿತ್ರೀಕರಿಸಲಾಗಿರುವ ವಿಡಿಯೋ ಮೂಲಕ ಸರಣಿಯ ಪ್ರಸಾರ ವಾಹಿನಿಯಲ್ಲಿ ಹೇಳಿಕೆ ನೀಡಲಿದ್ದಾರೆ.

ಇದರೊಂದಿಗೆ ಸರಣಿಯ ಮರುನಾಮಕರಣಕ್ಕೆ ಸಂಬಂಧಿಸಿ ಹುಟ್ಟಿಕೊಂಡಿದ್ದ ಗೊಂದಲಗಳಿಗೂ ತೆರೆ ಬೀಳಲಿದೆ. ಹಿಂದಿನ ಪಟೌಡಿ ಟ್ರೋಫಿಯನ್ನು ಉಳಿಸಿಕೊಳ್ಳಲು ಸ್ವತ ಸಚಿನ್​ ತೆಂಡುಲ್ಕರ್​ ಮನವಿ ಮಾಡಿದ್ದರೂ, ಆತಿಥೇಯ ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿ ಸರಣಿಯ ವಿಜೇತ ತಂಡದ ನಾಯಕನಿಗೆ ಪಟೌಡಿ ಪದಕವನ್ನು ನೀಡಿ ಗೌರವಿಸಲು ನಿರ್ಧರಿಸಿದೆ. ಈ ಮೂಲಕ ಭಾರತ ತಂಡದ ಮಾಜಿ ನಾಯಕ ಮನ್ಸೂರ್​ ಅಲಿ ಖಾನ್​ ಪಟೌಡಿಗೂ ವಿಶೇಷ ಗೌರವ ಮುಂದುವರಿಯಲಿದೆ.

*ಆಯ್ಕೆ ಸಮಿತಿ ಅಧ್ಯಕ್ಷರಾಗಿ ಅಗರ್ಕರ್​ ಮುಂದುವರಿಕೆ?

ರಾಷ್ಟ್ರೀಯ ಕ್ರಿಕೆಟ್​ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್​ ಅಗರ್ಕರ್​ ಅವಧಿ ಮುಂದಿನ ತಿಂಗಳು ಮುಕ್ತಾಯಗೊಳ್ಳಲಿದೆ. ಆದರೆ ಎರಡು ಐಸಿಸಿ ಟ್ರೋಫಿ ವಿಜೇತ (ಟಿ20 ವಿಶ್ವಕಪ್​, ಚಾಂಪಿಯನ್ಸ್​ ಟ್ರೋಫಿ) ತಂಡವನ್ನು ಆಯ್ಕೆ ಮಾಡಿರುವ ಅಗರ್ಕರ್​, ಹುದ್ದೆಯಲ್ಲಿ ಮುಂದುವರಿಯುವ ನಿರೀಕ್ಷೆ ಇದೆ. 2023ರ 4ರಂದು ಅಗರ್ಕರ್​ 2 ವರ್ಷಗಳ ಅವಧಿಗೆ ನೇಮಕಗೊಂಡಿದ್ದರು.

ಅಗರ್ಕರ್​ ಅವಧಿಯಲ್ಲಿ ರೋಹಿತ್​, ಕೊಹ್ಲಿ (ಟೆಸ್ಟ್​, ಟಿ20), ಆರ್​. ಅಶ್ವಿನ್​ (ಅಂತಾರಾಷ್ಟ್ರೀಯ ಕ್ರಿಕೆಟ್​) ನಿವೃತ್ತಿಯಂಥ ಸ್ಥಿತ್ಯಂತರಗಳು ನಡೆದಿದ್ದು, ಸೂರ್ಯಕುಮಾರ್​ ಯಾದವ್​ (ಟಿ20), ಶುಭಮಾನ್​ ಗಿಲ್​ (ಟೆಸ್ಟ್​) ಅವರಂಥ ಹೊಸ ನಾಯಕರನ್ನೂ ನೇಮಿಸಿದ್ದಾರೆ. ಹೀಗಾಗಿ ಸದ್ಯ ಅವರು ಈ ದಿಟ್ಟ ನಿರ್ಧಾರಗಳಿಂದ ಗಮನಸೆಳೆದಿದ್ದು, 2026ರ ತವರಿನ ಟಿ20 ವಿಶ್ವಕಪ್​ಗೆ ಭಾರತ ತಂಡವನ್ನು ಆಯ್ಕೆ ಮಾಡುವವರೆಗೆ ಅವರು ಹುದ್ದೆಯಲ್ಲಿ ಮುಂದುವರಿಯುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net