

ನವದೆಹಲಿ: ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದ ಭಾರತದ ನೀರಜ್ ಚೋಪ್ರಾಗೆ ಈಗ ಪ್ರಬಲ ಪ್ರತಿಸ್ಪರ್ಧಿಯ ಸವಾಲು ಎದುರಾಗಿದೆ. ಅವರೇ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಚಿನ್ನ ಜಯಿಸಿದ ಗ್ರೆನೆಡಾದ ಆಂಡರ್ಸನ್ ಪೀಟರ್ಸ್. 24 ವರ್ಷ ವಯಸ್ಸಿನವರಾಗಿರುವ ನೀರಜ್&ಪೀಟರ್ಸ್ 2016ರ ಜೂನಿಯರ್ಸ್ ದಿನಗಳಿಂದಲೂ ಪರಸ್ಪರ ಪೈಪೋಟಿ ನಡೆಸುತ್ತ ಬಂದಿದ್ದು, ಹಾಲಿ ವರ್ಷ ಈ ಸ್ಪರ್ಧೆ ಇನ್ನಷ್ಟು ರೋಚಕತೆ ಹುಟ್ಟಿಸಿದೆ.
ವಿಶ್ವ ಚಾಂಪಿಯನ್ಷಿಪ್ನಲ್ಲಿ ಪೀಟರ್ಸ್ ಚಿನ್ನ ಗೆದ್ದಿದ್ದರೆ, ಮುಂಬರುವ ಕಾಮನ್ವೆಲ್ತ್ ಗೇಮ್ಸ್ನಲ್ಲಿ ನೀರಜ್ ಸೇಡು ತೀರಿಸಿಕೊಳ್ಳುವ ಅವಕಾಶ ಹೊಂದಿದ್ದಾರೆ. 2016ರ 20 ವಯೋಮಿತಿ ವಿಶ್ವ ಚಾಂಪಿಯನ್ಷಿಪ್ನಲ್ಲಿ ನೀರಜ್ ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದು ವಿಜೃಂಭಿಸಿದಾಗ ಪೀಟರ್ಸ್ ಕಂಚಿಗೆ ತೃಪ್ತಿಪಟ್ಟಿದ್ದರು. 2018ರ ಕಾಮನ್ವೆಲ್ತ್ ಗೇಮ್ಸ್ನಲ್ಲೂ ನೀರಜ್ ಚಿನ್ನ ಗೆದ್ದಾಗ ಪೀಟರ್ಸ್ ಕಂಚಿಗೆ ತೃಪ್ತಿಪಟ್ಟಿದ್ದರು. ಟೋಕಿಯೊ ಒಲಿಂಪಿಕ್ಸ್ನಲ್ಲಿ ನೀರಜ್ ಚಿನ್ನ ಗೆದ್ದಾಗ ಪೀಟರ್ಸ್ ಫೈನಲ್ಸ್ಗೆ ಅರ್ಹತೆ ಪಡೆಯಲೇ ವಿಫಲರಾಗಿದ್ದರು.
ಹಾಲಿ ವರ್ಷ ಪೀಟರ್ಸ್ ಸತತವಾಗಿ 90 ಪ್ಲಸ್ ಮೀಟರ್ ಎಸೆತಗಳ ಮೂಲಕ ಮಿಂಚುತ್ತಿದ್ದರೆ, ನೀರಜ್ 90ರ ಗಡಿ ದಾಟುವ ಸನಿಹದಲ್ಲಿದ್ದಾರೆ. ರ್ಬಮಿಂಗ್ಹ್ಯಾಂ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಇದು ಸಾಧ್ಯವಾದರೆ ನೀರಜ್ ಚಿನ್ನ ಒಲಿಸಿಕೊಳ್ಳಬಹುದಾಗಿದೆ.
ರ್ಬಮಿಂಗ್ಹ್ಯಾಂನಲ್ಲಿ ಆಗಸ್ಟ್ 7ರಂದು ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆ ನಡೆಯಲಿದ್ದು, ಇದು ನೀರಜ್ ಕಳೆದ ವರ್ಷ ಟೋಕಿಯೊದಲ್ಲಿ ಚಿನ್ನದ ಪದಕ ಜಯಿಸಿದ ದಿನವೇ ಆಗಿದೆ ಎಂಬುದು ಗಮನಾರ್ಹ.
ನೀರಜ್ ಪ್ರತಿಸ್ಪರ್ಧಿ ಪೀಟರ್ಸ್ ಕ್ರಿಕೆಟ್ ಪ್ರೇಮಿ!
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಭಾರತದ ನೀರಜ್ ಚೋಪ್ರಾ ಅವರ ಸ್ವರ್ಣ ಪದಕದ ಕನಸು ಭಗ್ನಗೊಳಿಸಿದ ಗ್ರೆನೆಡಾದ ಜಾವೆಲಿನ್ ಥ್ರೋ ಪಟು ಆಂಡರ್ಸನ್ ಪೀಟರ್ಸ್ ಅವರೊಬ್ಬ ಕ್ರಿಕೆಟ್ ಪ್ರೇಮಿ! ವೇಗದ ಬೌಲರ್ ಆಗುವ ಆಸೆಯನ್ನೂ ಹೊಂದಿದ್ದರು! ನಂತರದಲ್ಲಿ ಜಮೈಕಾದ ಮಿಂಚಿನ ಓಟಗಾರ ಉಸೇನ್ ಬೋಲ್ಟ್ ಸ್ಫೂರ್ತಿಯಿಂದ ವೇಗದ ಓಟಗಾರರಾಗುವ ಪ್ರಯತ್ನದಲ್ಲಿದ್ದರು. ಆಗ ಗಾಯದ ಸಮಸ್ಯೆ ಕಾಡಿದ್ದರಿಂದ ಕೊನೆಗೆ ಜಾವೆಲಿನ್ ಥ್ರೋ ಪಟುವಾಗಿದ್ದರು. ಇದೀಗ ಅವರು 90.55 ಮೀ. ಎಸೆತದ ಮೂಲಕ ಅದರಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
"ಬಾಲ್ಯದಲ್ಲಿ ನಾನು ಕ್ರಿಕೆಟ್ ಆಡುತ್ತಿದ್ದೆ. ವೇಗದ ಬೌಲರ್ ಆಗಿ ಬ್ಯಾಟ್ಸ್ಮನ್ ಕಣ್ಣಿಗೆ ಕಾಣದಂತೆ ಚೆಂಡೆಸೆಯಲು ಪ್ರಯತ್ನಿಸುತ್ತಿದ್ದೆ. ಪ್ರತಿ ಬಾರಿ ಗಂಟೆಗೆ 90 ಮೈಲಿ ವೇಗದಲ್ಲಿ ಬೌಲಿಂಗ್ ಮಾಡುವುದೇ ನನ್ನ ಗುರಿಯಾಗಿರುತ್ತಿತ್ತು' ಎಂದು 24 ವರ್ಷದ ಪೀಟರ್ಸ್ ಹೇಳಿದ್ದಾರೆ.