ಲೀಡ್ಸ್ ಟೆಸ್ಟ್‌ನಲ್ಲಿ ಮೊದಲ ದಿನವೇ ಆಂಗ್ಲರಿಗೆ ಲೀಡ್ ಬಿಟ್ಟುಕೊಟ್ಟ ಟೀಮ್ ಇಂಡಿಯಾ

leeds test web
Published on

ಲೀಡ್ಸ್: ಪ್ರತಿಷ್ಠಿತ ಲಾರ್ಡ್ಸ್ ಮೈದಾನದಲ್ಲಿ ಸಾಧಿಸಿದ ಐತಿಹಾಸಿಕ ಗೆಲುವಿನ ಗುಂಗಿನಲ್ಲಿದ್ದ ಪ್ರವಾಸಿ ಭಾರತ ತಂಡಕ್ಕೆ ಆತಿಥೇಯ ಇಂಗ್ಲೆಂಡ್ ತಂಡ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನವೇ ತಿರುಗೇಟು ನೀಡಿದೆ. ಸತತ ಟಾಸ್ ಸೋಲಿನಿಂದ ಕಂಗೆಟ್ಟಿದ್ದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಡೆಗೂ ಟಾಸ್ ಜಯಿಸಿದರೂ ಅದರ ಸಂಭ್ರಮ ಮಾತ್ರ ಹೆಚ್ಚು ಹೊತ್ತು ಇರಲಿಲ್ಲ. 19 ವರ್ಷಗಳ ಬಳಿಕ ಹೆಡಿಂಗ್ಲೆಯಲ್ಲಿ ಕಣಕ್ಕಿಳಿದ ಭಾರತ ತಂಡವನ್ನು ಜೇಮ್ಸ್ ಆಂಡರ್‌ಸನ್ (6ಕ್ಕೆ 3) ಸಾರಥ್ಯದಲ್ಲಿ ಇಂಗ್ಲೆಂಡ್ ವೇಗಿಗಳು ಅಲ್ಪಮೊತ್ತಕ್ಕೆ ಕಟ್ಟಿಹಾಕಿದರು. 2ನೇ ಟೆಸ್ಟ್ ಪಂದ್ಯದ ಹೀನಾಯ ಸೋಲಿನಿಂದ ಕಂಗೆಟ್ಟಿದ್ದ ಇಂಗ್ಲೆಂಡ್ ತಂಡ ದಿಟ್ಟ ತಿರುಗೇಟು ನೀಡಿದ್ದು, ಮೊದಲ ದಿನದಾಟದಲ್ಲೇ ಇನಿಂಗ್ಸ್ ಮುನ್ನಡೆ ಸಾಧಿಸುವ ಮೂಲಕ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ.

ಬುಧವಾರ ಆರಂಭಗೊಂಡ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ಇಂಗ್ಲೆಂಡ್ ಬೌಲರ್‌ಗಳ ಮಾರಕ ದಾಳಿಗೆ ನಲುಗಿ 40.4 ಓವರ್‌ಗಳಲ್ಲಿ ಕೇವಲ 78 ರನ್‌ಗಳಿಗೆ ಸರ್ವಪತನ ಕಂಡಿತು. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ 9ನೇ ಕನಿಷ್ಠ ಮೊತ್ತ ಇದಾಗಿದೆ. ಅಲ್ಲದೆ, ಇಂಗ್ಲೆಂಡ್ ನೆಲದಲ್ಲಿ ದಾಖಲಿಸಿದ 3ನೇ ಕನಿಷ್ಠ ಮೊತ್ತವಾಗಿದೆ. ಪ್ರತಿಯಾಗಿ ಇಂಗ್ಲೆಂಡ್ ತಂಡ ಎಚ್ಚರಿಕೆ ಆರಂಭ ಕಂಡಿದ್ದು, ದಿನದಂತ್ಯಕ್ಕೆ 42 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 120 ರನ್‌ಗಳಿಸಿ 42 ರನ್ ಮುನ್ನಡೆ ಸಾಧಿಸಿದೆ. ಆರಂಭಿಕರಾಗಿ ಬಡ್ತಿ ಪಡೆದ ಹಸೀಬ್ ಹಮೀದ್ (60*) ಹಾಗೂ ರೋರಿ ಬರ್ನ್ಸ್ (52*) ಜೋಡಿ 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ.

ಆಂಡರ್‌ಸನ್ ಆರಂಭಿಕ ಆಘಾತ

ಅನುಭವಿ ವೇಗಿ ಜೇಮ್ಸ್ ಆಂಡರ್‌ಸನ್ ಮೊದಲ ಓವರ್‌ನಲ್ಲೇ ಭಾರತಕ್ಕೆ ಆಘಾತ ನೀಡಿದರು. ಪಂದ್ಯದ 5ನೇ ಎಸೆತದಲ್ಲೇ ಕನ್ನಡಿಗ ಕೆಎಲ್ ರಾಹುಲ್ ರಕ್ಷಣಾತ್ಮಕವಾಗಿ ಆಡಲು ಯತ್ನಿಸಿ ವಿಕೆಟ್ ಕೀಪರ್ ಜೋಸ್ ಬಟ್ಲರ್‌ಗೆ ಕ್ಯಾಚ್ ನೀಡಿದರು. ಲಾರ್ಡ್ಸ್ ಮೈದಾನದಲ್ಲಿ ಶತಕ ಸಿಡಿಸಿ ಮಿಂಚಿದ್ದ ರಾಹುಲ್ ಕನಿಷ್ಠ ಖಾತೆ ತೆರೆಯಲು ವಿಲರಾದರು. ಬಳಿಕ ಬಂದ ಚೇತೇಶ್ವರ ಪೂಜಾರ (1) ಹಾಗೂ ನಾಯಕ ವಿರಾಟ್ ಕೊಹ್ಲಿ (7) ಜೋಡಿಗೂ ರಾಹುಲ್ ಮಾದರಿಯಲ್ಲೇ ಆಂಡರ್‌ಸನ್ ಪೆವಿಲಿಯನ್ ದಾರಿ ತೋರಿದರು. ಕೇವಲ 21 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡ ಭಾರತ ಆರಂಭಿಕ ಆಘಾತ ಕಂಡಿತು.

ದಿಢೀರ್ ಕುಸಿದ ಮಧ್ಯಮ ಕ್ರಮಾಂಕ

ಆಂಡರ್‌ಸನ್ ದಾಳಿಯಿಂದ ತತ್ತರಿಸಿದ್ದ ಭಾರತಕ್ಕೆ ಆರಂಭಿಕ ರೋಹಿತ್ ಶರ್ಮ (19ರನ್, 105 ಎಸೆತ, 1 ಬೌಂಡರಿ) ಹಾಗೂ ಉಪನಾಯಕ ಅಜಿಂಕ್ಯ ರಹಾನೆ (18ರನ್, 54 ಎಸೆತ, 3 ಬೌಂಡರಿ) ಜೋಡಿ ಕೆಲಕಾಲ ಆಸರೆಯಾಯಿತು. ಆದರೆ, 4ನೇ ವಿಕೆಟ್‌ಗೆ 35 ರನ್ ಪೇರಿಸಿದ್ದ ವೇಳೆ ಒಲಿ ರಾಬಿನ್‌ಸನ್, ಅಜಿಂಕ್ಯ ರಹಾನೆಗೆ ಪೆವಿಲಿಯನ್ ದಾರಿ ತೋರಿದರು. ರಹಾನೆ ಬ್ಯಾಟ್ ಎಡ್ಜ್ ಆದ ಚೆಂಡು ವಿಕೆಟ್ ಕೀಪರ್ ಬಟ್ಲರ್ ಕೈಸೇರಿತು. ಇದರ ಬೆನ್ನಲ್ಲೇ ಭೋಜನ ವಿರಾಮ ೋಷಿಸಲಾಯಿತು. ಬಳಿಕ ಕರಾರುವಾಕ್ ಎಸೆತಗಳಿಂದ ರಾಬಿನ್‌ಸನ್ ತಂಡವನ್ನು ಇನ್ನಿಲ್ಲದಂತೆ ಕಾಡಿದರು. ರಿಷಭ್ ಪಂತ್ (2) ಬಂದಷ್ಟೇ ವೇಗವಾಗಿ ವಾಪಸಾದರೆ, ತಾಳ್ಮೆಯಿಂದ ಬ್ಯಾಟಿಂಗ್ ಮಾಡುತ್ತಿದ್ದ ರೋಹಿತ್ ಶರ್ಮ, ಓವರ್‌ಟನ್ ಎಸೆತದಲ್ಲಿ ಕೆಟ್ಟ ಹೊಡೆತಕ್ಕೆ ಕೈಹಾಕಿ ಮಿಡ್ ಆನ್‌ನಲ್ಲಿದ್ದ ರಾಬಿನ್‌ಸನ್‌ಗೆ ಕ್ಯಾಚ್ ನೀಡಿದರು. ಇದರೊಂದಿಗೆ ಭಾರತ ಕನಿಷ್ಠ 80ರ ಗಡಿ ದಾಟುವುದು ದುಸ್ತರವಾಯಿತು. ಬಳಿಕ ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ಓವರ್‌ಟನ್ ಹಾಗೂ ಸ್ಯಾಮನ್ ಕರ‌್ರನ್ ಕಡಿವಾಣ ಹೇರಿದರು.

ಭಾರತ ತಂಡ ಬದಲಿಲ್ಲ

ಪ್ರವಾಸಿ ಭಾರತ ತಂಡ ಯಾವುದೇ ಬದಲಾವಣೆಯಿಲ್ಲದೆ ಕಣಕ್ಕಿಳಿಯಿತು. ಇದರಿಂದ ಆರ್. ಅಶ್ವಿನ್ ಮತ್ತೊಮ್ಮೆ ಆಡುವ ಅವಕಾಶದಿಂದ ವಂಚಿತರಾದರು. ಇಂಗ್ಲೆಂಡ್ ತಂಡ 2 ಬದಲಾವಣೆಯೊಂದಿಗೆ ಕಣಕ್ಕಿಳಿಯಿತು. ಡೊಮಿನಿಕ್ ಸಿಬ್ಲೆ ಬದಲಿಗೆ ಡೇವಿಡ್ ಮಲಾನ್, ಗಾಯಾಳು ಮಾರ್ಕ್ ವುಡ್ ಬದಲಿಗೆ ಕ್ರೇಗ್ ಓವರ್‌ಟನ್ ಸ್ಥಾನ ಗಿಟ್ಟಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net