

ಐಚಿ-ನಗೋಯಾ: ಜೂನಿಯರ್ ವಿಶ್ವ ಚಾಂಪಿಯನ್ ಅನಾಹತ್ ಸಿಂಗ್ ಮತ್ತು ಅನುಭವಿ ಆಟಗಾರ ಅಭಯ್ ಸಿಂಗ್ ಏಷ್ಯಾಡ್ ಸ್ಕ್ವಾಷ್ ಸ್ಪರ್ಧೆಯಲ್ಲಿ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ಗೇರಿದ್ದು, ಕನಿಷ್ಠ ರಜತ ಪದಕ ಖಚಿತಪಡಿಸಿಕೊಂಡಿದ್ದಾರೆ. ಅವರಿಬ್ಬರು ಚಿನ್ನದ ಪದಕ ಗೆದ್ದರೆ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ಗೆ ನೇರ ಅರ್ಹತೆ ಸಂಪಾದಿಸುವ ಅವಕಾಶವನ್ನೂ ಹೊಂದಿದ್ದಾರೆ.
18 ವರ್ಷದ ಅನಾಹತ್ ಶನಿವಾರ ನಡೆದ ಸೆಮಿಫೈನಲ್ನಲ್ಲಿ ತನ್ನಗಿಂತ ಉನ್ನತ ಶ್ರೇಯಾಂಕಿತ ಜಪಾನ್ನ ಸಟೊಮಿ ವತನಬೆ ವಿರುದ್ಧ ಮೊದಲ ಗೇಮ್ ಸೋಲಿನ ಹಿನ್ನಡೆ ಎದುರಿಸಿದರೂ, ಅಂತಿಮವಾಗಿ 3-2ರಿಂದ ಜಯ ಸಾಧಿಸುವಲ್ಲಿ ಯಶಸ್ವಿಯಾದರು. 2023ರ ಏಷ್ಯಾಡ್ ತಂಡ ವಿಭಾಗದಲ್ಲಿ ಚಿನ್ನ ಗೆದ್ದಿದ್ದ 28 ವರ್ಷದ ಅಭಯ್, ಸೆಮೀಸ್ನಲ್ಲಿ ಪಾಕಿಸ್ತಾನದ ಮುಹಮ್ಮದ್ ಇರ್ಫಾನ್ ಎದುರು 3-0ಯಿಂದ ಗೆದ್ದರು. ಭಾನುವಾರ ನಡೆಯಲಿರುವ ಫೈನಲ್ನಲ್ಲಿ ದೆಹಲಿಯ ಅನಾಹತ್ಗೆ ವಿಶ್ವ ನಂ. 5 ಮಲೇಷ್ಯಾದ ಸಿವಸಂಗರಿ ಸುಬ್ರಹ್ಮಣ್ಯಂ ಮತ್ತು ತಮಿಳುನಾಡಿನ ಅಭಯ್ಗೆ ಮಲೇಷ್ಯಾದ ಎನ್ಜಿ ಈನ್ ಯೌ ಸವಾಲು ಎದುರಾಗಲಿದೆ.
ಜೋಶ್ನಾ-ಸೆಂಥಿಲ್ ಕಂಚಿಗೆ ತೃಪ್ತಿ
ಕೊಡಗು ಮೂಲದ ಜೋಶ್ನಾ ಚಿನ್ನಪ್ಪ ಮತ್ತು ವೆಲವನ್ ಸೆಂಥಿಲ್ ಕುಮಾರ್ ಜೋಡಿ ಏಷ್ಯಾಡ್ ಸ್ಕ್ವಾಷ್ ಸ್ಪರ್ಧೆಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿತು. 40 ವರ್ಷದ ಜೋಶ್ನಾ ಮತ್ತು ತಮಿಳುನಾಡಿನ 28 ವರ್ಷದ ಸೆಂಥಿಲ್ ಜೋಡಿ ಶನಿವಾರ ನಡೆದ ಸೆಮೀಸ್ನಲ್ಲಿ ಹಾಂಕಾಂಗ್ನ ಟಂಗ್ ಮಿಂಗ್ ಹಾಂಗ್ ಮತ್ತು ಲೀ ಕಯಿ ವಿರುದ್ಧ 1-2ರಿಂದ ಪರಾಭವಗೊಂಡಿತು. ಜೋಶ್ನಾಗೆ ಇದು ಏಷ್ಯಾಡ್ನಲ್ಲಿ 6ನೇ ಪದಕ ಗೆಲುವಾಗಿದೆ. ಅವರು ಈ ಮುನ್ನ 2 ಬೆಳ್ಳಿ, 3 ಕಂಚು ಜಯಿಸಿದ್ದರು. "ತೀವ್ರ ನಿರಾಸೆಯೊಂದಿಗೆ ಅಪಾರ ಹೆಮ್ಮಯೂ ಆಗುತ್ತಿದೆ. ನಾವು ಉತ್ತಮವಾಗಿ ಆಡಿದರೂ, ಫೈನಲ್ಗೇರಲಿಲ್ಲ. ನಮ್ಮ ಎದುರಾಳಿಗಳು ನಿಟಕ ಹೋರಾಟ ತೋರಿದರು' ಎಂದು ಜೋಶ್ನಾ ಹೇಳಿದರು.